‘ಪ್ರಾಣ ಹೋದ್ರು ಸರಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ತರ್ತೀನಿ’ಎಂದಿದ್ದ ಡಿಕೆಶಿಗೆ ಯಡಿಯೂರಪ್ಪ ತಿರುಗೇಟು

0
179

ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ನೀಡಬಹುದೇ ಹೊರತು ತಾಲ್ಲೂಕಿಗೆ ಒಂದೊಂದರಂತೆ ನೀಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ನನ್ನ ಪ್ರಾಣ ಹೋದರೂ ಸರಿಯೇ ಕನಕಪುರಕ್ಕೆ ಮಂಜೂರಾಗಿರುವ ವೈದ್ಯಕೀಯ ಕಾಲೇಜನ್ನು ಸ್ಥಳಾಂತರಗೊಳ್ಳಲು ಬಿಡುವುದಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಡಿಕೆಶಿ ಗುಡುಗಿದ್ದರು. ಇದಕ್ಕೆ ಸೂಕ್ಷ್ಮವಾಗಿಯೇ ತಿರುಗೇಟು ಕೊಟ್ಟ ಸಿಎಂ ಬಿಎಸ್‍ವೈ ಅವರು ವೈದ್ಯಕೀಯ ಕಾಲೇಜುಗಳನ್ನು ಜಿಲ್ಲೆಗೆ ಒಂದರಂತೆ ನೀಡಬಹುದು. ಆದರೆ ತಾಲ್ಲೂಕಿಗೆ ಒಂದೊಂದು ಅನುಮತಿ ಕೊಡಲು ಸಾಧ್ಯವೇ ಎನ್ನುವ ಮೂಲಕ ಡಿಕೆಶಿ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದರು.

ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಕನಕಪುರಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗಿತ್ತು. ನಂತರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರ ಮಾಡಿತ್ತು. ಆಪರೇಷನ್ ಕಮಲದ ಸುಳಿಗೆ ಸಿಲುಕಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕರಾಗಿದ್ದ ಸುಧಾಕರ್ ಬೇಡಿಕೆಗೆ ಒಪ್ಪಿ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಂಡಿತ್ತು.

ಈ ಬೆಳವಣಿಗೆ ಸಿಎಂ ಬಿಎಸ್‍ವೈ , ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ.ಸುಧಾಕರ್ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಯಿತು. ರಾಮನಗರದಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ಇರುವ ಕಾರಣ ಹಿಂದುಳಿದ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಮಂಜೂರು ಮಾಡಲಾಯಿತು. ಜಿಲ್ಲೆ ರಚನೆಯಾದ ನಂತರ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಇರಲಿಲ್ಲ. ಅಲ್ಲದೆ ಈ ಭಾಗದ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ತೀರ್ಮಾನಕ್ಕೆ ಬಂದಿತ್ತು.

ಆದರೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ಡಿಕೆಶಿ ವ್ಯಗ್ರರಾಗಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ನಾನು ಅವರಿಗೆ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಟ್ಟಿದ್ದೆ. ಸೇಡಿನ ರಾಜಕಾರಣ ಮಾಡುವುದಿಲ್ಲ ಎನ್ನುತ್ತಲೇ ಈಗ ಸಮ್ಮಿಶ್ರ ಸರ್ಕಾರದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆಯುತ್ತಿದ್ದಾರೆ.

ನಾನು ಬೇರೆ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದರೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ನನ್ನ ಕ್ಷೇತ್ರಕ್ಕೆ ಮಂಜೂರಾಗಿರುವುದನ್ನು ರದ್ದು ಮಾಡಿದರೆ ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳುತ್ತೇನೆ ಎಂದು ಗುಡುಗಿದ್ದರು. ಇದೀಗ ಬಿಎಸ್‍ವೈ ಡಿ.ಕೆ.ಶಿವಕುಮಾರ್ ಬೇಡಿಕೆಗೆ ಕ್ಯಾರೇ ಎನ್ನದಿರುವುದರಿಂದ ಮುಂದಿನ ದಿನಗಳಲ್ಲಿ ಉಭಯ ನಾಯಕರ ನಡುವೆ ಇನ್ನಷ್ಟು ವಾಕ್ಸಮರ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ

LEAVE A REPLY

Please enter your comment!
Please enter your name here