ಡಿಕೆ ಬ್ರದರ್ಸ್ ಗೆ ಮತ್ತೆ ಸಿಬಿಐ ಶಾಕ್

0
108

ಬೆಂಗಳೂರು: ಐಟಿ ಆಯ್ತು, ಇಡಿ ಆಯ್ತು ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಿಬಿಐ ಶಾಕ್ ಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ನೇರವಾಗಿ ಸಿಬಿಐ ಅಧಿಕಾರಿಗಳು ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೆ ಸಂಬಂಧ ಪಟ್ಟ 15 ಸ್ಥಳಗಳಿಗೆ ಒಟ್ಟು 60 ಜನರ ಸಿಬಿಐ ತಂಡ ದಾಳಿ ನಡೆಸಿದೆ. ಎಸ್ ಪಿ ಥಾಮ್ಸನ್ ಜೋಶ್ ನೇತೃತ್ವದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರ ಚುನಾವಣೆ ಸಿದ್ಧತೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆಗೆ ಸಿದ್ದತೆ ನಡೆಸಲಾಗುತ್ತಿತ್ತು. ಹೀಗಾಗಿ ಕ್ಷೇತ್ರದ ಮುಖಂಡರು ನಿವಾಸದ ಬಳಿ ಬರಬೇಕಾದಾಗಲೇ ಸಿಬಿಐ ಅಧಿಕಾರಿಗಳು ನಿವಾಸಕ್ಕೆ ಆಗಮಿಸಿದ್ದಾರೆ. ಸಿಬಿಐ ದಾಳಿ ಬೆನ್ನಲ್ಲೇ ನಾನಾ ಭಾಗಗಳಿಂದ ಕಾಂಗ್ರೆಸ್ ಮುಖಂಡರು, ಡಿಕೆ ಅಭಿಮಾನಿಗಳು ಸದಾಶಿವನಗರದ ನಿವಾಸದ ಬಳಿ ಜಮಾಯಿಸಿದ್ರು.

ಈ ವೇಳೆ ಮಾತನಾಡಿದ ಮಾಜಿ ಕಾರ್ಪೊರೇಟರ್ ಅಂಜನಪ್ಪ ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ. ನಾನು ವಾರ್ಡ್ ಅಭಿವೃದ್ಧಿ ವಿಚಾರವಾಗಿ‌ ಡಿಕೆ ಸುರೇಶ್ ಅವರನ್ನು ಬೇಟಿಯಾಗಲು ಮನವಿ ಮಾಡಿದ್ದೆ. ಅವರು ಇಂದು ಬೆಳಗ್ಗೆ ಭೇಟಿ ಯಾಗಲು ಸಮಯ ನೀಡಿದ್ದರು. ಭೇಟಿಗೆ ಬಂದ ಸಮಯದಲ್ಲಿ ಸಿಬಿಐ ದಾಳಿಯಾಗಿದೆ ಎಂದು ತಿಳಿಯಿತು. ಪದೇ ಪದೇ ದಾಳಿಯಾಗುತ್ತಿರುವುದು ರಾಜಕೀಯ ಪ್ರೇರಿತ. ಇಂದು ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಸಭೆ ಸಹ ಕರೆಯಲಾಗಿತ್ತು. ಆರ್ ಆರ್ ನಗರ ಚುನಾವಣೆ ಹಿನ್ನೆಲೆಯಲ್ಲಿಯೂ‌ ಈ ದಾಳಿ ನಡೆಸಲಾಗಿದೆ.

ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ವಾಗ್ದಾಳಿ

ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದಿರುವ ಕಾಂಗ್ರೆಸ್ ನಾಯಕರು ಉಪ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಈ ಷಡ್ಯಂತರ ನಡೆಯುತ್ತಿದೆ ಎಂದು ಬಣ್ಣಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವ್ರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂಬ ಸುದ್ದಿ ಹೊರ ಬಿದ್ದ ತಕ್ಷಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ.ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಚುನಾವಣೆ ಸಂದರ್ಭದಲ್ಲಿ ಡಿಸ್ಟರ್ಬ್ ಮಾಡಬೇಕು ಎಂದು ದಾಳಿ ನಡೆಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ದಾಳಿಗೆ ಕಾರಣವೇನು..?

ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಈ ಮುಂಚೆ ದಾಳಿ ನಡೆಸಿದಾಗ ದಾಳಿ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಹೈ ಕೋರ್ಟ್ ಮೊರೆ ಹೋಗಿದ್ರು. ಹೈ ಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಆ ಹಿನ್ನಲೆಯಲ್ಲಿ ಸಿಬಿಐ ಇದೀಗ ಸಿಬಿಐ ದಾಳಿ ನಡೆಸಿದ್ದಾರೆ.
ಕಾನೂನಿನ ಮಾರ್ಗ ಇದೆ ಅಂತ ಅಂದ್ಕೊಂಡಿದ್ದರು. ಅಷ್ಟರಲ್ಲೇ ಸಿಬಿಐ ಅಧಿಕಾರಿಗಳು ಬಾಗಿಲು ಬಡಿದಿದ್ದಾರೆ.

LEAVE A REPLY

Please enter your comment!
Please enter your name here