ನಾಲ್ಕು ದಶಕದ ಹಿಂದಿನ ಘಟನೆಯನ್ನು ನೆನೆದ ಡಿಕೆ ಶಿವಕುಮಾರ್

0
58

ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ಭಾಗಿಯಾಗಿದ್ದ ಇಂದಿರಾರವರು ಕಾರ್ಯಕರ್ತರ ಮನೆಯಲ್ಲಿ ಮಲಗುತ್ತಿದ್ದರು. ಅವರ ಸರಳತೆಯನ್ನು ನಾನು ನೋಡಿದ್ದೇನೆ. ಆಗ ನಾವು ವಿದ್ಯಾರ್ಥಿ ನಾಯಕರಾಗಿದ್ದೆವು ಎಂದು ನಾಲ್ಕು ದಶಕದ ಹಿಂದಿನ ಘಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೆನೆದರು.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್, ಮತ್ತಿತರ ನಾಯಕರು ಇದ್ದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಚಿಕ್ಕಮಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ನಾವು ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ಇಂದಿರಾ ಅವರ ಸರಳತೆ ನೋಡಿದ್ದೆವು. ಕಾರ್ಯಕರ್ತರ ಮನೆಯಲ್ಲೇ ಮಲಗುತ್ತಿದ್ದರು ಎಂದು ನೆನೆದರು.

ಮುಂದುವರೆದು ಮಾತನಾಡಿದ ಅವರು, ನಾವೆಲ್ಲಾ ಯೂಥ್ ಕಾಂಗ್ರೆಸ್ ನಲ್ಲಿ ಇದ್ದಾಗ ದೆಹಲಿ ಸಮಾವೇಶಕ್ಕೆ ರೈಲಿನ ಮೂಲಕ ಹೊರಟೆವು. ರೈಲು ಪ್ರಯಾಣ ಆರಂಭವಾದ ಕೆಲವೇ ಹೊತ್ತಲ್ಲಿ ಇಂದಿರಾಗಾಂಧಿ ಅವರ ಹತ್ಯೆ ಬಗ್ಗೆ ಸುದ್ದಿ ಬಂತು. ಆ ಸಂದರ್ಭದಲ್ಲಿ ನಾನು ನಮ್ಮೂರಿನಲ್ಲಿ ಚಿತ್ರಮಂದಿರ ತೆರೆಯಲು ಅರ್ಜಿ ಹಾಕಿದ್ದೆ. ಆಗ ಜಿಲ್ಲಾಧಿಕಾರಿಗಳು ಏನು ಹೆಸರಿಡುತ್ತೀರ ಎಂದು ಕೇಳಿದರು ಆಗ ನಾನು ಇಂದಿರಾ ಗಾಂಧಿ ಅಂತಾ ಹೆಸರಿಡುತ್ತೇನೆ ಎಂದೆ. ಆಗ ಅವರು ಇಂದಿರಾ ಚಿತ್ರ ಮಂದಿರಾ ಅಂತಾ ಬರೆದು ಕೊಟ್ಟರು. ಅವರಲ್ಲಿದ್ದ ರಾಜಕೀಯ ಬದ್ಧತೆ ಹಾಗೂ ಜನರಿಗೆ ಕೊಟ್ಟ ಕಾರ್ಯಕ್ರಮದ ಮೂಲಕ ಅವರು ಜೀವಂತವಾಗಿದ್ದಾರೆ ಎಂದು ನೆನೆದರು.

‘ಇಂದು ನಾವು ದೇಶ ಕಂಡ ಇಬ್ಬರು ಮಹಾನ್ ನಾಯಕರನ್ನು ನೆನೆಸಿಕೊಳ್ಳುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ಪಟೇಲರ ಜನ್ಮ ದಿನ, ಜತೆಗೆ ಕಿಸಾನ್ ಅಧಿಕಾರ್ ದಿವಸ, ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ನಮ್ಮ ಸರ್ಕಾರ ಇದ್ದಾಗ ವಾಲ್ಮೀಕಿ ಅವರನ್ನು ಸ್ಮರಿಸಲು ಈ ಜಯಂತಿ ಆಚರಿಸಲು ಆರಂಭಿಸಿದ್ದೆವು.ಈ ಕಾರ್ಯಕ್ರಮವನ್ನು ದೊಡ್ಡದಾಗಿ ಮಾಡಬೇಕಿತ್ತು. ಆದರೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಇಂದು ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ದಾರ್ ಪಟೇಲರು ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿತ್ತು. ದೇಶವನ್ನು ಒಗ್ಗೂಡಿಸಲು ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರನ್ನು ಉಕ್ಕಿನ ಮನುಷ್ಯ ಅಂತಾ ಕರೆಯುತ್ತೇವೆ ಎಂದರು.

ನಾಲ್ಕು ದಶಕಗಳ ಹಿಂದೆ ನಾವು ಇಂದಿರಾಗಾಂಧಿ ಅವರನ್ನು ಕಣ್ಣಾರೆ ಕಂಡಿದ್ದೆವು. ಅವರು ಕೊಟ್ಟ ಅನೇಕ ಕಾರ್ಯಕ್ರಮದಿಂದ ದೇಶ ಬದಲಾಗಿದ್ದನ್ನು ನೋಡಿದ್ದೇವೆ. ದೇಶ ಕಂಡ ಅಪ್ರತಿಮ ಪ್ರಧಾನಿ ಎಂದರೆ ಇಂದಿರಾ ಗಾಂಧಿ ಎಂದು ಜನ ಹೇಳುತ್ತಾರೆ. ಅವರನ್ನು ದುರ್ಗಾದೇವಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ ಎಂದರು.

ಅವರು ಇಂದು ಇಲ್ಲದಿರಬಹುದು, ಈ ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಮಹತ್ವದ ಬದಲಾವಣೆಯಲ್ಲಿ ಅವರಿದ್ದಾರೆ. ಅವರ ಕಾರ್ಯಕ್ರಮದಿಂದ ಜನರ ಜೀವನದಲ್ಲಿ ಆದ ಪ್ರಗತಿಯಲ್ಲಿ ಇಂದಿರಾಗಾಂಧಿ ಅವರು ಜೀವಂತವಾಗಿದ್ದಾರೆ. ಬ್ಯಾಂಕುಗಳ ರಾಷ್ಟೀಕರಣ ಆಗದಿದ್ದರೆ, ದೇಶ ಆರ್ಥಿಕವಾಗಿ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯವಿಲ್ಲ. ಭೂ ಸುಧಾರಣಾ ಕಾಯ್ದೆ ಮೂಲಕ ದೇಶದಲ್ಲಿ ಬಡವರಿಗೆ ಭೂಮಿ ಕೊಟ್ಟರು. ದೇಶ ಅನೇಕ ಯುದ್ಧಗಳನ್ನು ಎದುರಿಸಿದ ಸಮಯದಲ್ಲಿ, ಬಾಂಗ್ಲಾ ರಕ್ಷಣೆ ಸಮಯದಲ್ಲಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಪ್ರತಿ ತೀರ್ಮಾನ ಐಕ್ಯತೆ ಹಾಗೂ ರಾಜಕೀಯ ಬದ್ಧತೆ ಇತ್ತು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here