ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಣೆ: ಡಿಸಿಎಂ ಅಶ್ವಥ್ ನಾರಾಯಣ

0
71

ಬೆಂಗಳೂರು: ರಾಜ್ಯದಲ್ಲಿ ಮೊತ್ತಮೊದಲ ಬಾರಿಗೆ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಮಾಹಿತಿ ತಂತ್ರಜ್ಞಾನ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೋಮವಾರ ವಿಧಾನ ಸೌಧದಲ್ಲಿ ಸೈಬರ್ ಸುರಕ್ಷತಾ ಲಾಂಛನಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಸೇವೆಯನ್ನು ಜನರಿಗೆ ತಲುಪಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಆಧಾರಿತ ತಂತ್ರೋಪಾಯಗಳ ಅಳವಡಿಕೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಇದರೊಟ್ಟಿಗೆ ಸೈಬರ್ ಅಪಾಯಗಳು ಕೂಡ ಗಣನೀಯವಾಗಿ ಅಧಿಕವಾಗುವ ಅಪಾಯ ಇದೆ. ನಾಗರಿಕರು, ಉದ್ಯಮಗಳು, ವಿದ್ಯಾರ್ಥಿಗಳು ಹಾಗೂ ಸರ್ಕಾರವನ್ನು ಗಮನದಲ್ಲಿಟ್ಟು ಸುರಕ್ಷತಾ ಕಾರ್ಯನೀತಿ ರೂಪಿಸಲಾಗುವುದು ಎಂದು ತಿಳಿಸಿದರು.

ಅಮೆರಿಕದ ಎಫ್ ಬಿಐ ವರದಿ ಪ್ರಕಾರ, ಕೊರೋನಾ ಪಿಡುಗಿನ ನಂತರದ ಅವಧಿಯಲ್ಲಿ ಸೈಬರ್ ದುಷ್ಕೃತ್ಯಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯಲ್ಲಿ ಶೇ 400ರಷ್ಟು ಹೆಚ್ಚಳವಾಗಿದೆ. ಈ ತನಿಖಾ ಸಂಸ್ಥೆಗೆ ಪ್ರತಿ ದಿನ 4000 ದೂರುಗಳು ಬರುತ್ತಿವೆ. ದುಷ್ಕರ್ಮಿಗಳು ಫಿಷಿಂಗ್, ರಾನ್ಸಮ್ ವೇರ್ ಮತ್ತು ಮಾಲ್ವೇರ್ ದಾಳಿಗಳ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಸೈಬರ್ ಕ್ರಿಮಿನಲ್ ಗಳು ಕೊರೋನಾ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಸಂಬಂಧಿಸಿದಂತೆ ಸಾವಿರಾರು ವಂಚಕ ಪೋರ್ಟಲ್ ಗಳನ್ನು ಆರಂಭಿಸಿದ್ದಾರೆ ಎಂದು ಅಶ್ವಥ್ ನಾರಾಯಣ ವಿವರಿಸಿದರು.

ಅಂತರ್ಜಾಲ ಅಪರಾಧದಲ್ಲಿ ಭಾರತ 3ನೇ ಸ್ಥಾನ..!

ಅಮೆರಿಕದ ಎಫ್ ಬಿಐ ವರದಿ ಪ್ರಕಾರ, ಪ್ರಪಂಚದ ಅಂತರ್ಜಾಲ ಅಪರಾಧಗಳು ನಡೆಯುವ ದೇಶಗಳ ಪಟ್ಟಿಯಲ್ಲಿ ಭಾರತವು 3ನೇ ಸ್ಥಾನದಲ್ಲಿದೆ. ಫಿಷಿಂಗ್ ದಾಳಿ ಜೊತೆಗೆ ಅಂತರ್ಜಾಲಗಳ ವಿರೂಪಗೊಳಿಸುವಿಕೆ, ಡಿಡಿಒಎಸ್ ದಾಳಿ ಇತ್ಯಾದಿ ದಾಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (CERT-In) ಸಲಹಾ ಸೂಚಿಯನ್ನು ಪ್ರಕಟಿಸಿ, ಕೊರೋನಾ ಸೋಂಕಿನ ನೆಪದಲ್ಲಿ ಹೇಗೆ ಸೈಬರ್ ದಾಳಿಗಳನ್ನು ಎಸಗಲಾಗುತ್ತಿದೆ ಎಂಬುದರ ಕುರಿತು ವಿವರಿಸಿದೆ. ಬಹುತೇಕ ಸೈಬರ್ ದಾಳಿಗಳನ್ನು ಫಿಷಿಂಗ್ ಇ-ಮೇಲ್ ಗಳು, ಅಂತರ್ಜಾಲ ತಾಣಗಳಲ್ಲಿ ದಾರಿತಪ್ಪಿಸುವ ಜಾಹೀರಾತುಗಳು ಹಾಗೂ ಮೂರನೇ ಪಕ್ಷದಾರರ ಆಪ್ ಹಾಗೂ ಪ್ರೋಗ್ರ್ಯಾಮ್ ಗಳ ಮೂಲಕ ಎಸಗಲಾಗುತ್ತಿದೆ. ಅದೇ ರೀತಿ ಕಂಪ್ಯೂಟರ್ ಗಳು, ರೌಟರ್ ಗಳು, ಸುರಕ್ಷತೆಯಿಲ್ಲದ ಹೋಮ್ ನೆಟ್ ವರ್ಕ್ ಗಳ ಮೇಲೂ ಸೈಬರ್ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಪಮುಖ್ಯಮಂತ್ರಿ ವಿವರಿಸಿದರು.

ಭಾರತದ ಸಿಲಿಕಾನ್ ಕಣಿವೆ ಎಂದೇ ಹೆಸರಾಗಿರುವ ಬೆಂಗಳೂರು ಸಹಜವಾಗಿಯೇ ಸೈಬರ್ ಕ್ರಿಮಿನಲ್ ಗಳ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಸ್ಥೆಗಳಿಗೆ ಸೈಬರ್ ಜಾಗೃತಿ ಮೂಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿ ಪರಿಣಮಿಸಿದೆ. ಯಾವುದೇ ಸಂಸ್ಥೆಯಲ್ಲಿ ಸೈಬರ್ ಅರಿವು ಇರುವ ಉದ್ಯೋಗಿಗಳೇ ಸೈಬರ್ ಅಪಾಯದ ವಿರುದ್ಧ ಅತ್ಯುತ್ತಮ ರಕ್ಷಕರಾಗಿರುತ್ತಾರೆ. ಇದನ್ನು ಗಮನದಲ್ಲಿರಿಸಿಕೊಂಡು ಜಾಗತಿಕವಾಗಿ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಅದಕ್ಕನುಗುಣವಾಗಿ ಕರ್ನಾಟಕದಲ್ಲಿಯೂ ಈ ಬಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

LEAVE A REPLY

Please enter your comment!
Please enter your name here