ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ ಆದರೆ ಬಿಎಂಆರ್ಸಿಎಲ್ ನವರು ತಾಂತ್ರಿಕ ಕಾಮಗಾರಿ ಎಂದು ತಿಳಿಸಿ ಸದ್ದಿಲ್ಲದೇ ದುರಸ್ತಿ ಕಾಮಗಾರಿಯನ್ನು ಆರಂಭಿಸಿದೆ.

ಈ ಬಾರಿ ಇಂದಿರಾನಗರ ಮೆಟ್ರೋ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ನಿರ್ವಹಣೆ ಮಾಡುವ ನೆಪದಲ್ಲಿ ಮಾರ್ಗ ಬಂದ್ ಮಾಡಲಾಗಿದೆ. ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿಕ ಇಂದಿರಾನಗರ ಮೆಟ್ರೋ ಸ್ಟೇಷನ್ ಬಳಿ ಬಿರುಕು ಕಾಣಿಸಿಕೊಂಡಿದೆ.
ಮೆಟ್ರೋ ಕಾಮಗಾರಿಯ ನಿಮಿತ್ತ ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಆ.3ರ ರಾತ್ರಿ 9.30ರಿಂದ ಆ.4ರ ಬೆಳಗ್ಗೆ 11ರವರೆಗೆ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಜುಲೈ 30ರಂದೇ ಬಿಎಂಆರ್ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.
ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಬಿಎಂಟಿಸಿಯು ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಿದೆ.
ಮೆಟ್ರೋ ಮೊದಲ ಹಂತದ ಮೊದಲ ಫೇಸ್ನಲ್ಲಿ ಉದ್ಘಾಟನೆಯಾದ ಭಾಗದಲ್ಲಿ ಆರು ತಿಂಗಳ ಹಿಂದೆಯಷ್ಟೇ ಇದೇ ಮಾರ್ಗದಲ್ಲಿ ಮೆಟ್ರೋ ಸಮಸ್ಯೆ ಶುರುವಾಗಿತ್ತು. ಕಳೆದ ಬಾರಿ ಟ್ರಿನಿಟಿ ಸ್ಟೇಷನ್ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಇದೇ ಮಾರ್ಗದ ಇಂದಿರಾನಗರದಲ್ಲಿ ಎರಡನೇ ಬಾರಿ ಸಮಸ್ಯೆ ಎದುರಾಗಿದೆ.

ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದವರೆಗೂ ಆಗಸ್ಟ್ 3ರ ಸಂಚಾರ ಸೇವೆ ಮುಕ್ತಾಯದವರೆಗೂ ಹಾಗೂ ಆ.4ರಂದು ಬೆಳಗ್ಗೆ 7:00 ಗಂಟೆಯಿಂದ 11:00 ಗಂಟೆಯವರೆಗೂ ಮೆಟ್ರೋ ಸಂಚಾರ ಸೇವೆಗಳು ಲಭ್ಯವಿರುತ್ತದೆ.
ಆ. 4 ರಂದು ಬೆಳಗ್ಗೆ 11:00 ಗಂಟೆಯ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಮೆಟ್ರೋ ಸಂಚಾರದ ಸೇವೆಗಳು ಎಂದಿನಂತೆ ಇರುತ್ತದೆ . ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ನಿಗದಿಯಂತೆ ಕಾರ್ಯನಿರ್ವಹಿಸಲಿವೇ.