ಬೆಂಗಳೂರು: ಕೋವಿಡ್ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಗೋಹತ್ಯೆ ನಿಷೇಧ ಕಾಯಿದೆ ಅಂಗೀಕಾರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ಗೋವಿಗೆ ಪೂಜೆ ಮಾಡಲಾಯಿತು.
ಬಳಿಕ ಸಾರಿಗೆ ನೌಕರರ ಪ್ರತಿಭಟನೆ ವಿಚಾರ ಬಗ್ಗೆ ಮಾತನಾಡಿದ ಅವರು, ಸಾರಿಗೆ ನೌಕರರು ಪ್ರತಿಭಟನೆ ವಾಪಾಸ್ ಪಡೆದು ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡುತ್ತೇನೆ. ಕೋವಿಡ್ ಸಂಕಷ್ಟದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ತಿಳಿಸಿದರು.
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೌಕರರು ಕರ್ತವ್ಯಕ್ಕೆ ಮರಳಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಅವರನ್ನು ಕರೆದು ಮಾತಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಂಬಂಧಿಸಿದ ಸಚಿವರು ಅವರ ಜೊತೆ ಚರ್ಚೆ ಮಾಡಿದ್ದಾರೆ ಎಂದರು.
ಮೇಲ್ಮನೆಯಲ್ಲಿ ವಿಧೇಯಕ ಮಂಡನೆಯಾಗದ ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ಜೊತೆಯೂ ಚರ್ಚೆ ಮಾಡಿದ್ದೇವೆ. ನಿನ್ನೆ ಅಧಿವೇಶನ ಬೇಗ ಮುಕ್ತಾಯ ಗೊಳಿಸಿದ್ದಕ್ಕೆ ಸಭಾಪತಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಸಿಎಂ ಬಿಎಸ್ವೈ , ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಪತ್ರ ಕಳುಹಿಸಿಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡೋ ಅಧಿಕಾರ ಸಭಾಪತಿ ಗಿಲ್ಲ. ಹಿಂದೆ ಬಿಎಸಿ ಸಭೆಯಲ್ಲಿ ಮಂಗಳವಾರದ ವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿ ಗಳೇ ಇದ್ರು. ಆದರೂ ಕೂಡ ದಿಢೀರನೆ ಮುಂದೆ ಹಾಕಿದ್ದಾರೆ. ಮಂಗಳವಾರ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಕಳುಹಿಸಿದ್ದೇವೆ. ಕಾಯಿದೆ ತರಲು ಸಭಾಪತಿ ಸಹಕಾರ ಕೊಡ್ತಾ ಇರಲಿಲ್ಲ. ಅದಕ್ಕಾಗಿ ಸುಗ್ರೀವಾಜ್ಣೆ ಮೂಲಕ ಕಾಯಿದೆ ಜಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಾರಿಗೆ ನೌಕರರ ಮುಷ್ಕರ ಕುರಿತ ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷಣ್ ಸವದಿ, ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಆದರೆ ಇಂತಹ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡ. ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕೂತು ಚರ್ಚೆ ಮಾಡೋಣ.ಒಂದು ನಿಗಮವನ್ನು ಸಾರಿಗೆ ನಿಗಮ ಅಂತಾ ಘೋಷಣೆ ಮಾಡಿದ್ರೆ ಇಡೀ ನಿಗಮ ಘೋಷಣೆ ಮಾಡುವ ಒತ್ತಾಯ ಬರುತ್ತದೆ.ಇದು ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಇದೆ.ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡೋಕೆ ಆಗಲ್ಲ.ಇದರ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ಸಾರಿಗೆ ಸಚಿವ ಲಕ್ಷಣ್ ಸವದಿ ಹೇಳಿದರು.