ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಆತಂಕಕ್ಕೀಡು ಮಾಡಿದ್ದ ಕೊರೊನಾ ವೈರಸ್ ಗೆ ಕಡಿವಾಣ ಹಾಕುವ ಕಾಲ ಸನ್ನಿಹಿತವಾಗಿದೆ. ಜನರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದ್ದ ಸೋಂಕಿಗೆ ಕೆಲವೇ ತಿಂಗಳಲ್ಲಿ ಔಷಧಿ ಲಭ್ಯವಾಗಲಿದೆ. ಭಾರತದಲ್ಲಿ ಕೂಡ ಇನ್ನು 9 ತಿಂಗಳಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂಬ ವಿಚಾರ ತಿಳಿದುಬಂದಿದೆ. ಇನ್ನೂಂದು ವಿಶೇಷವೆಂದರೆ ಕರ್ನಾಟಕದ ಜನತೆಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ.
ಈಗಾಗಾಲೇ ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಹಲವು ದೇಶಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ ಆದರೆ ಈವರೆಗೂ ಯಾವುದೇ ದೇಶದಲ್ಲೂ ಲಸಿಕೆ ಲಭ್ಯವಾಗಿಲ್ಲ ಎಂಬ ಸಂಗತಿ ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೀಗ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗಿದೆ ಎಂಬ ಬಗ್ಗೆ ಬಹುತೇಕ ಅಧಿಕೃತ ಮಾಹಿತಿ ಹೊರಬಿದ್ದಿದೆ. ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜನಿಕಾ ಲಸಿಕೆ ನೀಡಲು ನವೆಂಬರ್ 2ರಿಂದ ಸಿದ್ಧತೆ ಮಾಡಿಕೊಳ್ಳುವಂತೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಲಂಡನ್ ನ ಹಲವು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಆಕ್ಸ್ ಫರ್ಡ್ ವಿವಿ ಸೂಚನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಾಹಿತಿ ನೀಡಿದ್ದು, ಮುಂದಿನ ವರ್ಷ ಜುಲೈ ಒಳಗೆ ಭಾರತದಲ್ಲೂ ಕೊವಿಡ್ ಲಸಿಕೆ ಲಭ್ಯವಾಗಲಿದ್ದು, 25 ಕೋಟಿ ಜನರಿಗೆ ಎರಡು ಡೋಸ್ ನಂತೆ 50 ಕೋಟಿ ಲಸಿಕೆ ನಿಡಲು ಸರ್ಕಾರ ಸಜ್ಜಾಗುತ್ತಿದೆ ಎಂದು ತಿಳಿಸಿದ್ದಾರೆ. ನಾಲ್ಕು ಹಂತಗಳಲ್ಲಿ ಕೊರೊನಾ ಲಸಿಕೆ ಹಂಚಲು ಸರ್ಕಾರ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಸುಮಾರು 1 ಕೋಟಿ ಆರೋಗ್ಯ ಸೇವಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಹಂಚಲಾಗುತ್ತಿದೆ. ಎರಡನೇ ಹಂತದಲ್ಲಿ ಪೊಲೀಸ್, ಸೇನೆ, ಪೌರಕಾರ್ಮಿಕರಿಗೆ, ಮೂರನೇ ಹಂತದಲ್ಲಿ 26 ಕೋಟಿ ಜನರಿಗೆ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ನಾಲ್ಕನೇ ಹಂತದಲ್ಲಿ 50 ವರ್ಷ ಕೆಳಗಿನ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ, ಮಧುಮೇಹ, ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ ಲಸಿಕೆ ಹಂಚಲು ಯೋಜನೆ ರೂಪಿಸಿದೆ.
ಇನ್ನು ಕರ್ನಾಟಕದ ಜನತೆಗೆ ಸಂತಸದ ವಿಚಾರವೆಂದರೆ 2021ರ ಆರಂಭದಲ್ಲಿ ರಾಜ್ಯದಲ್ಲಿಯೇ ಕೊರೊನಾ ಲಸಿಕೆ ಲಭ್ಯವಾಗುತ್ತೆ ಎಂಬುದು. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಹತ್ವದ ಮಾಹಿತಿ ನೀಡಿದ್ದು, ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜನಿಕಾ ಸಂಸ್ಥೆಯ ಎಂ.ಡಿ ಗಗನ್ ದೀಪ್ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಲಸಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಮೈಸೂರಿನ ಜೆ ಎಸ್ ಎಸ್ ಸಂಸ್ಥೆ, ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಸ್ಟ್ರಾಜನಿಕಾ ಜೊತೆ ಒಪ್ಪಂದ ಮಾಡಿಕೊಂಡಿದ್ದು, 2021ರಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಆಸ್ಟ್ರಾಜನಿಕಾ ದೇಶದ 1600 ಕೊವಿಡ್ ರೋಗಿಗಳ ಮೇಲೆ ಲಸಿಕೆ ಪ್ರಯೋಗ ನಡೆಸಿದ್ದು, ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಇನ್ನು ಎರಡು ಹಾಗೂ ಮೂರನೆ ಹಂತದ ಪ್ರಯೋಗ ಕೂಡ ನಡೆಯುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದ್ದು, ರಾಜ್ಯದ ಜನತೆಗೆ ಯಾವರೀತಿ ಹಂಚಿಕೆ ಮಾಡಬಹುದು ಎಂಬುದರ ಬಗ್ಗೆಯೂ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ.