ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ

0
107

ಮೈಸೂರು: ಸೋಮವಾರ ನಡೆಯಲಿರುವ ದಸರಾ ಜಂಬೂ ಸವಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ರಾಜ್ಯ ಮಟ್ಟದ ಸಲಹಾ ಸಮಿತಿಯ ಸಲಹೆಯಂತೆ ಅರಮನೆ ಆವರಣದಲ್ಲಿ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಆಯುಧ ಪೂಜೆ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದರು.ಭಾನುವಾರ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು ಮತ್ತು ತಂಡಕ್ಕೆ ಪೂಜಾ ಕಾರ್ಯ ನೆರವೇರಿಸಿದ ಅವರು, ಜಂಬೂ ಸವಾರಿ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಿ, ಗಜಪಡೆಗೆ ಹಣ್ಣುಬೆಲ್ಲ ನೀಡಿದರು.

ಬಳಿಕ ಮಾತನಾಡಿದ ಅವರು, ಸಂಪ್ರದಾಯದಂತೆ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ಪೂಜೆ ಸಲ್ಲಿಸಲಾಗಿದೆ. ತಾಯಿ ಚಾಮುಂಡೇಶ್ವರಿ ಕೊರೊನಾ ಮುಕ್ತವಾಗಿಸಲಿ ಎಂದು ಪ್ರಾರ್ಥಿಸಲಾಗಿದೆ. ದಸರಾ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕೆಯಿಂದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ವರ್ಚುಯಲ್ ಆಗಿ ನಡೆಸಿದ್ದು, ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.

ಕಳೆದ ಎಂಟು ದಿನಗಳಲ್ಲಿ ಆರಮನೆ ಆವರಣದಲ್ಲಿ ಜರುಗಿದ ಎಲ್ಲಾ ಕಾರ್ಯಕ್ರಮಗಳನ್ನು 6 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅದರಂತೆ ಜಂಬೂ ಸವಾರಿ ಮೆರವಣಿಗೆಯೂ ಕೂಡ ವರ್ಚುಯಲ್‍ನಲ್ಲಿ ನಡೆಯಲಿದ್ದು, ಸಾರ್ವಜನಿಕರು ಮನೆಯಲ್ಲಿ ಕುಳಿತು ವೀಕ್ಷಿಸಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಎಫ್ ಅಲೆಕ್ಸಾಂಡರ್, ಗಜಪಡೆಯ ವೈದ್ಯ ಡಾ.ನಾಗರಾಜ್ ಇತರರು ಉಪಸ್ಥಿತರಿದ್ದರು.

ಹೇಗಿದೆ ಸಿದ್ದತೆ..?

ಸೋಮವಾರ ಮಧ್ಯಾಹ್ನ 2.59ರಿಂದ 3.20ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 3.40ರಿಂದ 4.15ವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮೆರವಣಿಗೆಗೆ ಚಾಲನೆ ನೀಡಿ, ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕೋವಿಡ್‌ ಕಾರಣ 300 ಮೀಟರ್‌ ಅಂತರದೊಳಗೆ ಮೆರವಣಿಗೆ ನಡೆಯಲಿದ್ದು, 30ರಿಂದ 40 ನಿಮಿಷಗಳಲ್ಲಿ ಕೊನೆಗೊಳ್ಳಲಿದೆ. 300 ಮಂದಿಗೆ ಮಾತ್ರ ಪ್ರವೇಶಾವಕಾಶವಿದೆ.

LEAVE A REPLY

Please enter your comment!
Please enter your name here