ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಒಂದೇ ದಿನದಲ್ಲಿ 90 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಲಿದ್ದಾರೆ. ಸುದೀರ್ಘ ಲಾಕ್ ಡೌನ್, ಕೊರೊನಾ ಭೀತಿ ನಡುವೆಯೂ ಜನರ ಜೀವನ ಕೊಂಚ ಮಟ್ಟಿಗೆ ಸಹಜ ಸ್ಥಿತಿಯತ್ತ ಸಾಗುತ್ತಲಿದೆ. ವಿಶ್ವಾದ್ಯಂತ ಕಾಡುತ್ತಿರುವ ಕೊರೊನಾ ಸೋಂಕು ಮಟ್ಟ ಹಾಕಲು ಕೊವಿಡ್ ಲಸಿಕೆ ಕೂಡ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಪ್ರಖ್ಯಾತ ಸೆರಮ್ ಕಂಪನಿ ಕೊವಿಡ್ ಲಸಿಕೆ ಪ್ರಯೋಗವನ್ನು ನಿಲ್ಲಿಸಿದೆ. ಇದಕ್ಕೆ ಈ ಲಸಿಕೆ ತೆಗೆದುಕೊಂಡ ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡ ತೀವ್ರ ಅನಾರೋಗ್ಯ ಎಂಬುದು ಅಚ್ಚರಿಯ ವಿಚಾರ.
ಹೌದು. ಆಕ್ಸ್ಫರ್ಟ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನಿಕಾ ಕಂಪನಿಗಳು ತಯಾರಿಸಿದ್ದ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದ್ದ ಸೆರಮ್ ಇನ್ಸ್ಟಿಟ್ಯೂಟ್ ಮೂರನೇ ಹಂತದ ಕೊವಿಡ್ ವಾಕ್ಸಿನ್ ಪ್ರಯೋಗವನ್ನು ಸ್ಥಗಿತಗೊಳಿಸಿದೆ. ಬ್ರಿಟನ್ನಲ್ಲಿ ಸೋಮ್ಕಿತರೊಬ್ಬರಿಗೆ ಈ ಲಸಿಕೆ ಪ್ರಯೋಗ ಮಾಡಲಾಗಿತ್ತು. ಆದರೆ ಆ ವ್ಯಕ್ತಿಯಲ್ಲಿ ಅಸಾಧ್ಯವಾದ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದೇಶಗಳಲ್ಲಿ ನಡೆಯುತ್ತಿದ್ದ ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಕೂಡ ಈ ಕಂಪನಿಯ ಲಸಿಕೆ ಪ್ರಯೋಗವನ್ನು ನಿಲ್ಲಿಸಲಾಗಿದೆ.
ಬ್ರಿಟನ್ ನಲ್ಲಿ ನಡೆದ ಘಟನೆ ಬಳಿಕ ದೇಶದ ಔಷಧ ನಿಯಂತ್ರಕ ಸಂಸ್ಥೆ ಡಿಜಿಸಿಐ ಸೆರಂ ಇನ್ಸ್ಟಿಟ್ಯೂಟ್ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಬೇರೆ ದೇಶದಲ್ಲಿ ಲಸಿಕೆಯ ಪ್ರಯೋಗ ಸ್ಥಗಿತಗೊಳಿಸಲಾಗಿದ್ದರೂ ಭಾರತದಲ್ಲಿ ಯಾಕೆ ಇನ್ನೂ ಲಸಿಕೆಯ ಪ್ರಯೋಗವನ್ನು ಮುಂದುವರಿಸಲಾಗಿದೆ ಎಂದು ಇದರಲ್ಲಿ ಪ್ರಶ್ನಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆರಮ್, ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಆಸ್ಟ್ರಾಝೆನಿಕಾ ಪ್ರಯೋಗವನ್ನು ಮತ್ತೆ ಆರಂಭಿಸುವವರೆಗೆ ನಾವು ಭಾರತದ ಪ್ರಯೋಗವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಹೇಳಿದೆ.
ಈ ನಡುವೆ ಲಸಿಕೆ ಪಡೆದುಕೊಂಡ ಸ್ವಯಂಸೇವಕರೊಬ್ಬರಲ್ಲಿ ವಿವರಿಸಲಾಗ ಅನಾರೋಗ್ಯ ಕಾಣಿಸಿಕೊಂಡಿದ್ದು, ತಾತ್ಕಾಲಿಕವಾಗಿ ಲಸಿಕೆ ಪ್ರಯೋಗ ನಿಲ್ಲಿಸಲಾಗಿದೆ ಎಂದು ಬ್ರಿಟನ್-ಸ್ವೀಡನ್ ಮೂಲದ ಆಸ್ಟ್ರಝೆನಿಕಾ ಸ್ಪಷ್ಟಪಡಿಸಿದೆ.