ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಲೇ ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿಯನ್ನಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರೈತರು ಕರೆಕೊಟ್ಟ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ನಾನು ಹಸಿರು ಶಾಲನ್ನು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಇಡೀ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಧ್ವನಿ ಎತ್ತಿತ್ತು. ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಲಿಗೆ ವ್ಯಾಲ್ಯೂ ಇಲ್ಲ. ಹೀಗಾಗಿ ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾಂಗ್ರೆಸ್ ಪಕ್ಷದ ಶಾಲೇ ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿಯನ್ನಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಪಕ್ಷದ ಅಧ್ಯಕ್ಷನಾಗಿ, ಕಾರ್ಯಕರ್ತನಾಗಿ ನಮ್ಮ ಪಕ್ಷದ ತ್ರಿವರ್ಣ ಶಾಲಿನ ಬಗ್ಗೆ ಯಾರೇ ಹೀನಾಯವಾಗಿ ಮಾತನಾಡಿದಾಗ ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದರ ಗೌರವಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ ಎಂದರು.
“ಆ ರಕ್ತ ಈ ದೇಹದಲ್ಲಿ ಇಲ್ಲ: ಸಾಬೀತು ಮಾಡಿ ರಾಜಕೀಯ ನಿವೃತ್ತಿ ಪಡೆಯುತ್ತೀನಿ”
ಈ ಸರ್ಕಾರದ ಮುಖ್ಯಮಂತ್ರಿ, ಸಚಿವರನ್ನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದರೆ, ಅದನ್ನು ಅವರು ಸಾಬೀತುಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗೆ ಚಾಲೆಂಜ್ ಹಾಕಿದ್ದಾರೆ.
ರಾತ್ರಿ ವೇಳೆ ಹೋಗಿ ಡಿಕೆ ಶಿವಕುಮಾರ್ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಒಂದು ದಿನವಾದರೂ ನಾನು ಯಡಿಯೂರಪ್ಪನವರನ್ನಾಗಲಿ, ಈ ಸರ್ಕಾರದ ಯಾವುದಾದರೂ ಸಚಿವರನ್ನಾಗಲಿ ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದರೆ, ಅದನ್ನು ಸಾಬೀತುಪಡಿಸಲಿ. ಅವರು ಸಾಬೀತುಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದರು.
10 ವರ್ಷದ ಹಿಂದೆ ಯಾವುದೋ ಮದುವೆಗೆ ಹೋದಾಗ ನಾವು ಖಾಸಗಿ ವಿಮಾನದಲ್ಲಿ ಇಬ್ಬರೂ ಜತೆಯಾಗಿ ವಾಪಸ್ ಬಂದೆವು. ಮರುದಿನ ವಿಧಾನಸೌಧದಲ್ಲಿ ದೊಡ್ಡ ಗಲಾಟೆ ನಡೆಯಿತು. ಆಗ ಯಡಿಯೂರಪ್ಪನವರು, ಶಿವಕುಮಾರ್ ಅವರೇ ಈ ಬಗ್ಗೆ ನನಗೆ ಹೇಳಲೇ ಇಲ್ಲ ಎಂದಿದ್ದರು. ಅನೇಕ ಸಂದರ್ಭದಲ್ಲಿ ನಾವು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಭೇಟಿ ಮಾಡಿರುತ್ತೇವೆ. ಆದರೆ ಎಂದಿಗೂ ನೀಚ ರಾಜಕಾರಣ ಮಾಡಿಲ್ಲ. ಆ ರಕ್ತ ಈ ಡಿ.ಕೆ. ಶಿವಕುಮಾರ್ ದೇಹದಲ್ಲಿ ಇಲ್ಲ. ಕುಮಾರಸ್ವಾಮಿ ಅವರೇ, ಕಳೆದ 30 ವರ್ಷಗಳಿಂದ ನಾನು ಯಾವ ರೀತಿ ಹೋರಾಟ ಮಾಡಿಕೊಂಡು ಬಂದಿದ್ದೀನಿ ಎಂದು ನೋಡಿದ್ದೀರಿ. ಯಾಕೋ ನಿಮಗೆ ಟೆನ್ಷನ್ ಇರಬಹುದು, ನಿಮಗೆ ನಿಮ್ಮದೇ ಆದ ರಾಜಕೀಯ ಸಮಸ್ಯೆಗಳು ಇರಬಹುದು. ನನಗೆ ಆ ಸಮಸ್ಯೆ ಇಲ್ಲ. ನಿಮ್ಮ ಕೆಳಗೆ ನಾನು ಕೆಲಸ ಮಾಡಿದ್ದೆ. ನಿಮಗೆ ನಾನು ಗೌರವ ನೀಡಿದ್ದೆ. ಇವತ್ತೂ ನೀಡುತ್ತೇನೆ, ನಾಳೆಯೂ ನೀಡುತ್ತೇನೆ. ನೀವು ನಿಮ್ಮ ಪಕ್ಷದ ಸಂಘಟನೆ ಮಾಡಿ, ಆದರೆ ನಮ್ಮ ಪಕ್ಷದ ಹಾಗೂ ವೈಯಕ್ತಿಕ ಸ್ವಾಭಿಮಾನ ಮಾರಿಕೊಳ್ಳುವುದಕ್ಕೆ ಸಿದ್ಧನಿಲ್ಲ ಎಂದು ವಾಗ್ದಾಳಿ ನಡೆಸಿದರು.