ಬಿಜೆಪಿ ಸರ್ಕಾರ ರಚಿಸಿ ಸುಭದ್ರ ಆಡಳಿತ ನೀಡುವ ಭರವಸೆ ನೀಡಿದ್ದ, ಯಡಿಯೂರಪ್ಪನವರಿಗೆ ಇದೀಗ ಪಕ್ಷದೊಳಗಿನ ಆಂತರಿಕ ಬಂಡಾಯ ನುಂಗಲಾರದ ಬಿಸಿ ತುಪ್ಪವಾಗಿದೆ. ಈ ಮಧ್ಯೆ ಅನರ್ಹ ಶಾಸಕರ ಒತ್ತಡವೂ ಸಿಎಂ ಯಡಿಯೂರಪ್ಪನವರನ್ನು ಕಣ್ಣೀರು ಹಾಕುವಂತೆ ಮಾಡಿದೆ ಎನ್ನಲಾಗಿದೆ.

“ಬಿಜೆಪಿ ಸರಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ನಮ್ಮ ಕಣ್ಣೀರಿನ ಮೇಲೆ ಬಿಜೆಪಿ ಸರಕಾರ ರಚನೆ ಮಾಡಿದೆ. ಒಂದು ವೇಳೆ ನಮ್ಮನ್ನ ಕಣ್ಣೀರು ಹಾಕಿಸಿದ್ರೆ ಈ ಸರಕಾರ ಹೆಚ್ಚು ದಿನ ಉಳಿಯಲ್ಲ.. ನಮಗೆ ಸಿಗಬೇಕಾದ ಸ್ಥಾನಮಾನ ಕಲ್ಪಿಸಿ” ಎಂದು ಅಲವತ್ತುಕೊಂಡಿದ್ದ ಅನರ್ಹ ಶಾಸಕ ಮುನಿರತ್ನ ಮಾತು ಕೇಳಿ ಬಿ.ಎಸ್. ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಹೌದು, ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಮುನಿರತ್ನ ಭೇಟಿಯಾಗಿದ್ದ ವೇಳೆ ಮುನಿರತ್ನ ತಮ್ಮ ರಾಜಕೀಯ ಭವಿಷ್ಯವನ್ನೇ ಅಡವಿಟ್ಟು ನಾವೆಲ್ಲಾ ಅತಂತ್ರರಾಗಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದಾಗ ಬಿಎಸ್ ಯಡಿಯೂರಪ್ಪ ಹತಾಶರಾಗಿ ಕಣ್ಣೀರು ಹಾಕಿದ್ದಾರೆ. ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡಿದ್ದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ. ಎಷ್ಟು ದಿನ ನಾವು ಅನರ್ಹ ಶಾಸಕರು ಎಂದು ಕರೆಯಿಸಿಕೊಳ್ಳುವುದು?ಕಾನೂನು ಹೋರಾಟಕ್ಕೆ ಸಾಥ್ ನೀಡಿ, ಈ ಪ್ರಕರಣ ಬೇಗ ಮುಗಿಸಿಕೊಡಿ ಎಂದು ಮುನಿರತ್ನ ಅಲವತ್ತುಕೊಂಡಿರುವುದಾಗಿ ವರದಿ ತಿಳಿಸಿದೆ.
ಬಿಜೆಪಿ ಸರಕಾರ ರಚನೆಗೆ ನಮ್ಮ ಭವಿಷ್ಯವನ್ನೇ ಅಡವಿಟ್ಟಿದ್ದೇವೆ. ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅನರ್ಹ ಶಾಸಕರು ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.