ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲೀಗ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ವಿಚಾರ ಭಾರೀ ಸದ್ದು ಮಾಡುತ್ತಿದೆ. ನಾನೇ ಮುಂದಿನ ಮುಖ್ಯಮಂತ್ರಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೊ ಹೀಗೋ ಒಮ್ಮೆ ಭಾಷಣದಲ್ಲಿ ಬಾಯಿ ಬಿಟ್ರೆ, ಅಲ್ಲ ಅಲ್ಲ ನಾನೇ ಮುಂದಿನ ಸಿಎಂ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಒಳಗೊಳಗೇ ಭಾರೀ ಕಸರತ್ತು ಮಾಡ್ತಿದ್ದಾರೆ. ಈ ಬಗ್ಗೆ ಬೀದರ್ ನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ, ಅವೆಲ್ಲ ನಡೆಯುತ್ತಿರುವುದು ಬಿಜೆಪಿಯಲ್ಲಿ. ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕರ ವಿರುದ್ದ ಕ್ರಮಕೈಗೊಳ್ಳುವ ತಾಕತ್ ಆ ಪಕ್ಷಕ್ಕಿಲ್ಲ. ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದನ್ನು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ನಿರ್ಧರಿಸುತ್ತದೆ. ಉಳಿದವರು ಏನೇ ಹೇಳಿದರೂ ಇದೇ ಸತ್ಯ. ಇದನ್ನು ನಾನೇ ಹೇಳುತ್ತಿರುವುದರಿಂದ ಇದರ ಬಗ್ಗೆ ಬೇರೆ ಚರ್ಚೆಯೇ ಇಲ್ಲ ಎಂದು ಸಬೂಬು ನೀಡಿದರು.
ಇತ್ತ ನೀವ್ ಏನ್ ಹೇಳ್ತೀರಿ ಸರ್. ಕಾಂಗ್ರೆಸ್ ನಲ್ಲಿ ಚುನಾವಣೆ ಗಿಂತಲೂ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಸದ್ದೇ ಹೆಚ್ಚು ಕೇಳಿ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದಲ್ಲಿ ಯಾರಿಗೆ ಯಾವ ಜವಾಬ್ದಾರಿ ವಹಿಸಿದ್ದೇವೋ ಅವರು ಆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಚುನಾವಣೆ ಸಮಯ ಬರಲಿ, ಆಗ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕು. ನಮಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಈ ಸರ್ಕಾರವನ್ನು ರಾಜ್ಯದ ಜನ ಕಿತ್ತೆಸೆದ ಮೇಲೆ ಆ ಬಗ್ಗೆ ಮಾತನಾಡೋಣ. ಈಗ ಉಪಚುನಾವಣೆ ಬಗ್ಗೆ ಮಾತ್ರ ಮಾತನಾಡೋಣ ಎಂದು ತಿಳಿಸಿದರು.
ಈಗಾಗಲೇ ಮೂಲ, ವಲಸಿಗ ಅಂತ ಒಳಗೊಳಗೇ ಬಿರುಕು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಮೂಲ ಕಾಂಗ್ರೆಸ್ ನವರಿಗೇ ಕೆಪಿಸಿಸಿ ಪಟ್ಟ ಕೊಡೋದ್ರ ಮೂಲಕ ತಣ್ಣಗೆ ಮಾಡಿತ್ತು. ಆದರೀಗ ಕಾಂಗ್ರೆಸ್ ನ ಪ್ರಬಲ ನಾಯಕರಿಬ್ಬರ ಮಧ್ಯೆ ಮತ್ತೇ ಮುಂದಿನ ಸಿಎಂ ಯಾರು ಅನ್ನೋ ಜಟಾಪಟಿ ಏರ್ಪಟ್ಟಿದ್ದು, ಚುನಾವಣೆ ವೇಳೆ ಮತ್ತೊಂದು ತಿರುವು ಪಡೆಯುತ್ತಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.