ಆಗ ತಾನೆ ಹುಟ್ಟಿದ ಮಗು ಎಷ್ಟು ಕಿಲೋ ಇರುತ್ತವೆ..? 3 ಕೆಜಿ, ಅಬ್ಬಬ್ಬಾ ಎಂದರೆ 3.5 ಕೆಜಿ. ಆದರೆ ಆಂಧ್ರಪ್ರದೇಶದಲ್ಲಿ ನಿನ್ನೆಯಷ್ಟೇ ಹುಟ್ಟಿದ ಮಗುವಿನ ತೂಕ 5 ಕೆಜಿ. ಆಶ್ಚರ್ಯವಾದರೂ ಇದು ಸತ್ಯ.
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಈ ಚೋಟಾ ಭೀಮ್ ಜನಿಸಿದ್ದಾನೆ. ಮಗು ಬರೋಬ್ಬರಿ 5 ಕೆ.ಜಿ ಇದ್ದು ಕುಟುಂಬಸ್ಥರು ಸೇರಿದಂತೆ ವೈದ್ಯರು ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಮಗುವಿನ ತಾಯಿ ಕೊಂಡಪಲ್ಲಿ ಹಾಗೂ ತಂದೆ ಒಡಿಶಾದ ಅಲ್ಮಂಡಾಗೆ ಸೇರಿದವರಾಗಿದ್ದಾರೆ. ತಾಯಿ ಪೂರ್ಣಿಮಾ ಒಡಿಶಾದಲ್ಲಿ ನೆಲೆಸಿದ್ದು ಹೆರಿಗೆಗಾಗಿ ತನ್ನ ತಾಯಿ ಮನೆಗೆ ಬಂದಿದ್ದರು.
ಹೆರಿಗೆ ನೋವು ಕಾಣಿಸಿಕೊಂಡಾಗ ಪೂರ್ಣಿಮಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ನಾರ್ಮಲ್ ಡೆಲಿವರಿ ಸಾಧ್ಯವಿಲ್ಲ ಎಂದು ಅರಿತ ವೈದ್ಯರು ಸಿಜೇರಿಯನ್ ಮೂಲಕ ಮಗು ತೆಗೆದಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ ತೂಕ ನೋಡಿ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.