ಚೆಲುವ ಕನ್ನಡ ನಾಡಿನ ನುಡಿ ನಮ್ಮೆಲ್ಲರ ಉಸಿರಾಗಬೇಕಿದೆ

0
106

ಪ್ರತಿವರ್ಷ ನವೆಂಬರ್ 1 ಕನ್ನಡಿಗರೆಲ್ಲರಿಗೂ ಸಂತಸದ ಸುದಿನ.ನಮ್ಮ ನಾಡು ನುಡಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವಿದು.ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾದ ರು ಕನ್ನಡ ಭಾಷೆ ನಮ್ಮ ಉಸಿರು ಆಗದಿರುವುದು ಹಾಗೂ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಕನ್ನಡಿಗರೇ ಅಸಡ್ಡೆ ತೋರಿದರೆ ಮುಂದಿನ ಪೀಳಿಗೆಗೆ ಈ ನಮ್ಮ ಶ್ರೀಮಂತ ಭಾಷೆಯ ಅರಿವಾಗುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರಕೃತಿ ಸೌಂದರ್ಯದಲ್ಲಿ ಕಂಗೊಳಿಸುವ, ಅಮೂಲ್ಯ ಖನಿಜ ಸಂಪತ್ತು, ಕಲೆ ಸಾಹಿತ್ಯ ಸಂಸ್ಕೃತಿಯ ಪರಂಪರೆಯ ಹೆಮ್ಮೆಯ ಬೀಡು ನಮ್ಮ ಕನ್ನಡ ನಾಡು.

ಕರ್ನಾಟಕದ ಸ್ಥೂಲ ಶರೀರವು ಚಿಕ್ಕದಾಗಿದ್ದರೂ ಸೂಕ್ಷ್ಮ ಶರೀರವು ಅತಿ ವಿಸ್ತಾರವಾಗಿದೆ ಕರ್ನಾಟಕದಿಂದ ಪ್ರಸ್ತುತವಾದ ವಿಚಾರಗಳು ಇಂದಿಗೆ ಇಡೀ ಪ್ರಪಂಚದಲ್ಲಿ ಹರಡಿಕೊಂಡಿವೆ ನಮ್ಮ ಕನ್ನಡ ನಾಡಿನ ಸಂಸ್ಕೃತಿಯು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ.ಕರ್ನಾಟಕವು ನಮ್ಮ ಭರತ ಖಂಡದ ಸಂಸ್ಕೃತಿಯನ್ನೆಲ್ಲ ಪಚನ ಮಾಡಿಕೊಂಡು ತನ್ನ ವಿಶಿಷ್ಟ ಸಂಸ್ಕೃತಿಯನ್ನು ಅದರಲ್ಲಿ ಬೆರೆಸಿ ನಮ್ಮ ಭರತ ಖಂಡಕ್ಕೆ ನೇ ವಿಶಿಷ್ಟವಾದ ಮೆರುಗನ್ನು ನೀಡಿರುವ ಹೆಮ್ಮೆಯ ನಾಡು ನಮ್ಮದು.


ಭಾರತಕ್ಕೆ ಸ್ವತಂತ್ರ ಬಂದ ನಂತರದಲ್ಲಿ ವಿವಿಧ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ಅಂದರೆ ಆಯಾ ಪ್ರದೇಶಗಳಲ್ಲಿ ಜನರಾಡುವ ಭಾಷೆಯನ್ನು ಆಧರಿಸಿ ವಿಂಗಡನೆಯನ್ನು ಮಾಡಲಾಯಿತು.ಸ್ವಾತಂತ್ರ್ಯ ಪೂರ್ವದಲ್ಲಿಯೇ ರಾಜ್ಯಗಳು ರೂಪಿತವಾಗಿದ್ದರೂ ಸಹ ಕರ್ನಾಟಕದ ವಿವಿಧ ಭಾಗಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು ಆಗ ಈ ನಮ್ಮ ನಾಡಿನ ಭಾಗಗಳನ್ನು ಪುನಃ ಒಗ್ಗೂಡಿಸುವ ಉದ್ದೇಶದಿಂದ ನಾಡಿನ ಹಲವಾರು ನಾಯಕರು ಸಾಹಿತಿಗಳು ಕನ್ನಡಾಭಿಮಾನಿಗಳು ಪ್ರಯತ್ನ ಮಾಡುತ್ತಲೇ ಬಂದು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದರು.

೧೯೫೬ ನವೆಂಬರ್ ೧ ರಂದು ನಮ್ಮ ನಾಡು ಏಕೀಕರಣಗೊಂಡು ಮೈಸೂರು ರಾಜ್ಯ ಉದಯಿಸಿತು.ನಂತರ ನಮ್ಮ ಕನ್ನಡನಾಡು ೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಎಂದು ನಾಮಕರಣವಾಯಿತು. ಈ ದಿನ ಕನ್ನಡಿಗರೆಲ್ಲರಿಗೂ ಸಡಗರ ಸಂಭ್ರಮದ ದಿನವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಅಂದಿನಿಂದ ಇಂದಿನವರೆಗೂ ಆಚರಿಸುತ್ತಾ ಬರಲಾಗುತ್ತಿದೆ.

ಬೇರೆ ಬೇರೆ ಆಡಳಿತಗಳಲ್ಲಿ ಸೇರಿಹೋಗಿದ್ದ ಕನ್ನಡಿಗರ ಸ್ಥಿತಿ ಹದಗೆಟ್ಟು ಶೋಚನೀಯ ಪರಿಸ್ಥಿತಿ ಎದುರಾಗಿತ್ತು ಕನ್ನಡ ಭಾಷೆಗೆ ಸಿಗಬೇಕಾದ ಮಾನ್ಯತೆ ಸಿಕ್ಕಿರಲಿಲ್ಲ.ಕನ್ನಡಿಗರು ಮರಾಠಿಯೊ ತಮಿಳೋ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು,೧೮೫೬ ರಿಂದಲೇ ಏಕೀಕರಣಕ್ಕಾಗಿ ಪ್ರಯತ್ನಿಸಲಾಗುತ್ತಿತ್ತು,೧೮೯೦ ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ೧೯೧೬ರಲ್ಲಿ ಕರ್ನಾಟಕ ಸಭಾ ಮತ್ತು ಬೆಂಗಳೂರಿನಲ್ಲಿ ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸ್ಥಾಪನೆಗೊಂಡ ಬಳಿಕ ಏಕೀಕರಣ ಚಳವಳಿಗೆ ಸೂಕ್ತ ಚಾಲನೆ ದೊರೆತಂತಾಯಿತು.

ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯು ಕನ್ನಡ ಸಾಹಿತಿಗಳು ರಾಜಕಾರಣಿಗಳು ಪತ್ರಿಕೆಗಳು ಏಕೀಕರಣಕ್ಕಾಗಿ ಶ್ರಮಿಸಿದರು.ಅದರಲ್ಲೂ ಕೆಲವರು ಏಕೀಕರಣ ವಿರೋಧಿಸಿದ ಸಂದರ್ಭಗಳು ಉಂಟಾಗಿತ್ತು.ಹೀಗೆ ಎಲ್ಲ ಸನ್ನಿವೇಶ ಸಂದರ್ಭಗಳನ್ನು ದಾಟಿ ನಮ್ಮ ಕನ್ನಡ ನಾಡು ಕವಿಗಳ ಆಶಯದಂತೆ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು “ಎಂಬಂತೆ  ಇಲ್ಲಿವರೆಗೂ ನಮ್ಮ ನಾಡು ನುಡಿ ಉಳಿವಿಗಾಗಿ ಹೋರಾಟಗಳು ಸಾಗುತ್ತಲೇ ಬಂದಿವೆ.

ಪ್ರಪಂಚದಲ್ಲೇ ಶ್ರೀಮಂತ ಸಾಹಿತ್ಯ ಭಾಷೆಯೆಂದರೆ ಅದು ಕನ್ನಡ ವೆಂದು ಹೇಳಲು ಹೆಮ್ಮೆಯೆನಿಸುತ್ತದೆ ಇಂತಹ ನಾಡಿನ ವಿಶೇಷ ಪರಂಪರೆ ಮರೆಯುವಂತಿಲ್ಲ ಮರೆತರೆ ನಮ್ಮತನವನ್ನೇ ನಾವು ಮರೆತಂತೆ. ಕದಂಬರು ಗಂಗರು ಚಾಳುಕ್ಯರು ರಾಷ್ಟ್ರಕೂಟರು ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರು ಹೀಗೆ ಈ ರಾಜ್ಯವನ್ನು ಆಳಿದವರು ನಮ್ಮ ಕನ್ನಡ ನಾಡನ್ನು ಕುರಿತು ಆದಿಕವಿ ಪಂಪ “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ “ಎಂದು ಹಾಡಿ ಹೊಗಳಿದ್ದಾರೆ. ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿರುವ ಸುಂದರವಾದ ಎಲ್ಲರ ಕಣ್ಮನ ಸೆಳೆಯುವ ನಾಡು ಈ ನಮ್ಮ ಕರುನಾಡು.ಇಂತಹ ಹೆಮ್ಮೆಯ ಹಲವಾರು ಸಾಧು ಸಂತರು ಶರಣರು ಜನಿಸಿದ ಪುಣ್ಯ ಭೂಮಿಯಲ್ಲಿ ಈ ನಮ್ಮ ನಾಡು ನುಡಿಯ ಬಗ್ಗೆ ನಾವೆಲ್ಲಾ ಪ್ರಜ್ಞಾಪೂರ್ವಕವಾಗಿ ಯೋಚಿಸದೆ ಹೋದರೆ ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳದೆ ನಮ್ಮ ಉಸಿರಾಗಿಸಿಕೊಳ್ಳದೆ ಹೋದರೆ ಬರೀ ಇಂಗ್ಲಿಷ್ ವ್ಯಾಮೋಹದ ಅಂಧಾನುಕರಣೆ ಮುಂದುವರಿಯುತ್ತಾ ಸಾಗುತ್ತದೆ.

ಮುಂದೊಂದು ದಿನ ನಮ್ಮ ಪೀಳಿಗೆ ನಮ್ಮ ನಾಡು ನುಡಿಯ ಸಂಸ್ಕೃತಿ ಸಂಸ್ಕಾರ ವನ್ನು ನಮ್ಮ ಭಾಷೆಯ ಹಿರಿಮೆ ಗರಿಮೆಗಳನ್ನು ಅರ್ಥೈಸಿಕೊಳ್ಳದೆ ಹೋಗುತ್ತದೆ.ಕನ್ನಡ ನಾಡು ನುಡಿಯ ಉಳಿವಿಗಾಗಿ ಅದೆಷ್ಟೋ ಮಹನೀಯರು ಶ್ರಮಿಸಿದ್ದಾರೆ ಇದೆಲ್ಲದರ ಮಹತ್ವವನ್ನರಿತು ಕನ್ನಡಿಗರಾದ ನಾವು ನಮ್ಮ ಕನ್ನಡ ನಾಡನ್ನು ನುಡಿಯನ್ನು ಉಳಿಸಿ ಬೆಳೆಸುವ ದೃಢ ಸಂಕಲ್ಪವನ್ನು ಮಾಡೋಣ .ಕರ್ನಾಟಕ ಸರ್ಕಾರ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಈ ನಾಡಿಗೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ.ಈ ನವೆಂಬರ್ ತಿಂಗಳು ಪೂರ್ತಿ ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹಾಗೂ ಕನ್ನಡ ನಾಡು ನುಡಿಯ ಚಿಂತನೆಗೆ ಹಲವಾರು ಕಾರ್ಯಕ್ರಮಗಳು ನೆರವೇರುತ್ತವೆ ಆದರೆ ಇದು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಕನ್ನಡ ಭಾಷೆ ಉಸಿರಾದಾಗ ಕನ್ನಡದ ಉಳಿವಿಗಾಗಿ ಹೋರಾಡಿದ ಎಲ್ಲ ಮಹನೀಯರ ಶ್ರಮ ಸಾರ್ಥಕವಾಗುತ್ತದೆ.


ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು ಹಾಗೂ ಲೇಖಕರು
ಎಫ್ ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ.

LEAVE A REPLY

Please enter your comment!
Please enter your name here