ಚಾಣುಕ್ಯನ ನೀತಿಯು ಮಿತ್ರನಲ್ಲಿ ಶತ್ರುತ್ವ ಬೆಳೆಯಲು ಕಾರಣವೇನು ? ತಿಳಿಯಲು ಈ ಲೇಖನ ಓದಿ.

0
246

ನ ಕಶ್ಚಿತ್ ಕಸ್ಯಚಿನ್ಮಿತ್ರಂ ನ ಕಶ್ಚಿತ್ ಕಸ್ಯಚಿದ್ರಿಪುಃ ।
ಕಾರಣೇನ ಹಿ ಜಾಯಂತೇ ಮಿತ್ರಾಣಿ ರಿಪವಸ್ತಥಾ ।।

ಯಾರಿಗೆ ಯಾರು ಸ್ವಾಭಾವಿಕವಾಗಿ ಮಿತ್ರನಾಗುವುದಿಲ್ಲ. ಯಾರಿಗೆ ಯಾರು ಶತ್ರುವಾಗುವುದಿಲ್ಲ ಕಾರಣವಿರುವುದರಿಂದಿಲೇ ಮಿತ್ರರೂ ಆಗುತ್ತಾರೆ, ಶತ್ರುಗಳೂ ಆಗುತ್ತಾರೆ.” ಕಾರಣವಿಲ್ಲದೆ ಯಾವ ಕಾರ್ಯವೂ ಹುಟ್ಟುವುದಿಲ್ಲವೆಂಬುದೊಂದು ಸಾರ್ವತ್ರಿಕವಾದ ನಿಯಮ. ಲೋಕದಲ್ಲಿ ಹಾಗೆ ಕಂಡುಬಂದಿದೆ. ಶಾಸ್ತ್ರಕಾರರೂ ಅದನ್ನು ಒಪ್ಪಿದ್ದಾರೆ. “ಪ್ರಯೋಜನಂ ವಿನಾ ಸ್ವಪ್ನೇಪಿನ ಚೇಷ್ಟತೇ ಚಾಣಕ್ಯಃ” ‘ಪ್ರಯೋಜನವಿಲ್ಲದೆ ಈ ಚಾಣಕ್ಯನು ಕನಸಿನಲ್ಲಿಯೂ ಸಹ ಅಲ್ಲಾಡುವುದಿಲ್ಲ!” ಎಂದು ಚಾಣಕ್ಯನೇ ‘ಮುದ್ರಾರಾಕ್ಷಸ’ ನಾಟಕದಲ್ಲಿ ಹೇಳುತ್ತಾನೆ.

Chanakya Niti

ಪ್ರಾಣಿಗಳಲ್ಲಿಯೂ ಸಹ ಈ ಸ್ನೇಹ ವೈರಗಳು ಕಾರಣವಶದಿಂದಲೇ ಹುಟ್ಟುವುದು ಕಂಡುಬರುತ್ತದೆ. ಹುಲಿಯು ತನ್ನ ಮರಿಯನ್ನು ತನ್ನದೆಂಬ ಮಮತೆಯಿಂದ ಪ್ರೀತಿಸುತ್ತದೆ. ತನ್ನ ಮರಿಯ ಬಳಿಗೆ ಇನ್ನೊಬ್ಬರು ಸುಳಿದರೆ ಅವರನ್ನು ಕೊಂದುಹಾಕೀತು. ಹುಲಿಗೆ ಮೃಗಗಳ ಮೇಲೆ ದ್ವೇಷವಿರುವುದು ಅವು ತನ ಆಹಾರವಾದ್ದರಿಂದ. ಮೃಗಗಳಿಗೆ ಹುಲಿಯ ಮೇಲಿರುವ ದ್ವೇಷವು ಭಯನಿಮಿತ್ತದಿಂದ ಹುಟ್ಟಿದ್ದು. ಒಬ್ಬ ಸುಭಾಷಿತಕಾರನು.

ಮೃಗ-ಮೀನ- ಸಜ್ಜನಾನಾಂ ತೃಣ-ಜಲ-ಸಂತೋಷವಿಹಿತ-ವೃತ್ತೀನಾಂ ।
ಲುಬ್ಧಕ-ಧೀವರ-ಪಿಶನಾಃ ನಿಷ್ಕಾರಣಾ ವೈರಿಣೋ ಜಗತಿ ।।

“ಜಿಂಕೆ, ಮೀನು, ಸಜ್ಜನರು ಹುಲ್ಲು, ನೀರು, ಸಂತೃಪ್ತಿಗಳಿಂದ ಕ್ರಮವಾಗಿ ತಮ್ಮ ಪಾಡಿಗೆ ಇರುತ್ತಾರೆ, ಆದರೆ ಬೇಟೆಗಾರನು ಮೃಗಗಳಿಗೂ, ಮೀನು ಹಿಡಿಯುವವನು ಮೀನುಗಳಿಗೂ, ಚಾಡಿಕೋರರು ಸಜ್ಜನರಿಗೆ ಕಾರಣವಿಲ್ಲದೆ ವೈರಿಗಳಾಗಿದ್ದಾರೆ”- ಎಂದಿದ್ದಾನೆ ಅಪಕಾರ ಮಾಡುವುದು ವೈರಿಯ ಲಕ್ಷಣ ಜಿಂಕೆ ಮೊದಲಾದ ಲುಬ್ಧುಕಾದಿಗಳಿಗೆ ಯಾವ ಅಪಕಾರವನ್ನು ಮಾಡದಿದ್ದರೂ ಅವರು ವೈರಿಗಳಗಿದ್ದಾರೆ- ಇಂದು ಸುಭಾಷಿತಕಾರನ ಆಶಯ.ಲುಬ್ಧ-ಧೀವರರು ತಮ್ಮ ಬದುಕಿಗಾಗಿ ಮೃಗಗಳನ್ನು ಮೀನುಗಳನ್ನು ಹಿಡಿದು ಕೊಲ್ಲುವುದರಿಂದ ನಿಮಿತ್ತವಿದ್ದೇ ಇದೆ. ಆದರೆ ಚಾಡಿಕೋರನು ಸಜ್ಜನರನ್ನು ಏಕೆ ಪೀಡಿಸುತ್ತಾನೆ? ಹೊಟ್ಟೆಕಿಚ್ಚಿನಿಂದ- ಎಂಬುದೊಂದೇ ಉತ್ತರ.

“ಆತ್ಮನಃ ಕಾಮಾಯ ಸರ್ವಂ ಪ್ರೀಯಂ ಭವತಿ”-“ತನ್ನ ಹಿತಕ್ಕಾಗಿಯೇ ಸರ್ವವೂ ಪ್ರಿಯವಾಗುತ್ತದೆ” ಎಂದು ಉಪನಿಷತ್ತು ಹೇಳಿದೆ. ಸ್ವಾರ್ಥವೂ ಸ್ನೇಹಕ್ಕೂ ಸ್ವಾರ್ಥಹಾನಿಯು ವೈರಕ್ಕೂ ಕಾರಣವೆಂದು ಪರ್ಯವಸಾನ. ರಾಜಕೀಯದಲ್ಲಿ ಶಾಶ್ವತ ಮಿತ್ರನೂ ಇಲ್ಲ, ಶಾಶ್ವತವಾಗಿ ವೈರಿಯೂ ಇಲ್ಲ ” ಎಂಬ ಹೇಳಿಕೆ ಈ ಕಾಲದಲ್ಲಿ ಪ್ರಮಾಣಸಿದ್ಧವಾಗಿದೆ. ‘ಬಡಜನರ ಉದ್ದಾರ’, ‘ಧರ್ಮನಿರಪೇಕ್ಷತೆ’, ‘ಸಮತವಾದ’- ಮುಂತಾದವೆಲ್ಲವೂ ಬರಿಯ ಘೋಷಣೆಗಳು. ಈ ಜನರು ಪಕ್ಷಾಂತರ ಮಾಡುವುದು ಸ್ವಾರ್ಥಕ್ಕೆ ಭಂಗ ಒದಗಿದಾಗ. ಕಾರಣವಿಲ್ಲದೆ ವೈರವು ಹುಟ್ಟುವುದಿಲ್ಲ ಎಂಬ ನಿಯಮಕ್ಕೆ ಒಂದು ಅಪವಾದ ಕಂಡುಬರುತ್ತದೆ ಅದೇ “ಅಹಿಲಕುಲಂ”- ಹಾವಿಗೂ ಮುಂಗಸಿಗೂ ಇರುವ ವೈರ.

ಹಾವನ್ನು ಕಂಡೊಡನೆ ಮುಂಗಸಿ ಯು ಹಾರಿ ಬಂದು ಹಾವಿನೊಡನೆ ಹೋರಾಟಕ್ಕೆ ನಿಲ್ಲುತ್ತದೆ. ಹಾವನ್ನು ಕೊಂದು ತುಂಡು ಮಾಡಿ ಹೊರಟು ಹೋಗುತ್ತದೆ! ಹಾವನ್ನು ಮುಂಗಸಿ ತಿನ್ನುವುದಿಲ್ಲ. ಈ ವೈರಕ್ಕೆ ಕಾರಣವೇನಿರಬಹುದು? ಜನ್ಮಾಂತರದ ದ್ವೇಷವಿರಬಹುದೇ?

LEAVE A REPLY

Please enter your comment!
Please enter your name here