ಚಾಮುಂಡಿಗೂ ಮೊದಲು ಮೈಸೂರು ಬೆಟ್ಟದಲ್ಲಿ ಪೂಜೆ ಯಾರಿಗೆ..?

0
310

ಮೈಸೂರಿನ ಕಳಶಪ್ರಾಯ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಆರಾಧನೆ ಯಾವಾಗ ಚಾಲ್ತಿಗೆ ಬಂತು..? ಇದಕ್ಕೂ ಮುನ್ನಾ ಈ ಬೆಟ್ಟದಲ್ಲಿ ಯಾರಿಗೆ ಪೂಜೆ ಸಲ್ಲುತ್ತಿತ್ತು..? ಎಂಬ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಶಕ್ತಿ ತುಂಬಿದ್ದು ಮೈಸೂರಿನ ಯದುವಂಶದ ಅರಸರು. ಮೈಸೂರು ಒಡೆಯರು ಪ್ರವರ್ಧಮಾನಕ್ಕೆ ಬಂದ ಬಳಿಕ, ಅಂದರೆ ಯದುವಂಶ ರಾಜ್ಯ ಸ್ಥಾಪನೆಯಾಗಿದ್ದು 1399ರಲ್ಲಿ. ಮೈಸೂರು ರಾಜರು ತಮ್ಮ ಮನೆದೇವತೆ ಚಾಮುಂಡೇಶ್ವರಿಗೆ ಹೆಚ್ಚಿನ ಮಹತ್ವ ನೀಡಿದರು.

ರಾಜಮಹಾರಾಜರ ಕುಲದೇವತೆ ಎಂದ ಮೇಲೆ ಚಾಮುಂಡೇಶ್ವರಿ ದೇವಿ ನಾಡಿನ ಪವಿತ್ರ ಹಾಗೂ ಶಕ್ತಿ ದೇವತೆ ಆಗಿ ರೂಪಾಂತರವಾಯ್ತು. ಹಾಗಾದರೆ ಮೈಸೂರು ಅರಸರು ಕುಲದೇವತಾ ಆರಧನೆಗೂ ಮುನ್ನ ಇಲ್ಲಿ ಪೂಜೆ ಯಾರಿಗೆ ಸಲ್ಲುತ್ತಿತ್ತು ಎಂಬುದರ ಕುರಿತು ಅನೇಕರಿಗೆ ಕುತೂಹಲವಿದೆ. ಇನ್ನು ಮೈಸೂರು ಪ್ರದೇಶದಲ್ಲಿ ಮಹಾಬಲಗಿರಿ, ಮಹಾಬಲಾದ್ರಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಬೆಟ್ಟವೇ ಮುಂದೆ ಚಾಮುಂಡಿ ಬೆಟ್ಟವಾಗಿದೆ. ಅದಕ್ಕೆ ಕಾರಣ ಚಾಮುಂಡೇಶ್ವರಿ ದೇವಾಲಯದ ಪಕ್ಕದಲ್ಲೇ ಇರುವ ಮಹಾಬಲೇಶ್ವರ ದೇವಸ್ಥಾನ.

ಬೆಟ್ಟಕ್ಕೆ ಬರುವ ಬಹಳಷ್ಟು ಪ್ರವಾಸಿಗರಿಗೆ, ಭಕ್ತರಿಗೆ ಮಹಾಬಲೇಶ್ವರ ದೇಗುಲದ ಹೆಚ್ಚಿನ ಮಾಹಿತಿ ಇಲ್ಲ. ಅಷ್ಟರ ಮಟ್ಟಿಗೆ ಚಾಮುಂಡೇಶ್ವರಿ ತನ್ನ ಪ್ರಭಾವವನ್ನು ಹಬ್ಬಿಸಿದ್ದಾಳೆ. ಹೌದು, ಯದುವಂಶದಂತೆ ರಾಜ್ಯವಾಳಿದ ತಲಕಾಡಿನ ಗಂಗರು ಕ್ರಿ.ಶ.950 ರವೇಳೆಗೆ ಮಹಾಬಲೇಶ್ವರ ದೇವಾಲಯ ಸ್ಥಾಪಿಸಿದರು ಎನ್ನಲಾಗಿದೆ. ಮೈಸೂರಿನ ಪುರಾತನ ದೇಗುಲವೆಂದೇ ಹೆಸರು ಗಳಿಸಿರುವ ಈ ಮಹಾಬಲೇಶ್ವರ ದೇವಾಲಯ ದಕ್ಷಿಣ ಭಾರತದ ಪ್ರಸಿದ್ಧ ಶೈವಕ್ಷೇತ್ರ ಆಗಿತ್ತು. ಗಂಗರ ಬಳಿಕ ಹೊಯ್ಸಳರು ದೇವಾಲಯದ ಅಭಿವೃದ್ಧಿಗೆ ನೆರವಾಗಿದ್ದರು. ದೇವಾಲಯ ಕಾಲಕಾಲಕ್ಕೆ ಬದಲಾವಣೆ ಕಂಡರೂ ಹೆಚ್ಚಿನ ಮಹತ್ವ ಪಡೆಯಲಾಗಲಿಲ್ಲ.

ಲಿಂಗರೂಪಿ ಮಹಾಬಲಾದ್ರಿಯ ಹೆಸರಿನಿಂದಲೇ ಕರೆಸಿಕೊಂಡಿದ್ದ ಬೆಟ್ಟವೂ ಮುಂದೆ ಮಹಾಬಲಾದ್ರಿ ಎಂಬ ಹೆಸರೂ ಬದಲಾಗಿ ಚಾಮುಂಡಿಬೆಟ್ಟ ಎಂದು ಪ್ರಸಿದ್ದಿಗೆ ಬಂದಿದೆ. ಮಹಿಷಾಸುರ, ಮೈಸೂರು ಎಂಬ ಹೆಸರಿಗೂ ಚಾಮುಂಡೇಶ್ವರಿ ಪುರಾಣಕ್ಕೂ ಉಲ್ಲೇಖ ಕಾರಣಕ್ಕೆ ಚಾಮುಂಡಿ ಬೆಟ್ಟ ಹೆಸರು ಹೆಚ್ಚು ಸಮೀಪವಾಗಿ ಜನರಿಗೆ ಹತ್ತಿರವಾಯ್ತು. ಈಗಲೂ ಮಹಾಬಲೇಶ್ವರನ ಸನ್ನಿಧಿಯಲ್ಲಿ ನಿತ್ಯ ಪೂಜೆ ಸಲ್ಲಿಕೆಯಾಗುತ್ತಿದ್ದು, ಪ್ರವಾಸಿಗರು ಭಕ್ತರು ದರ್ಶನ ಪಡೆಯುತ್ತಾರೆ.

LEAVE A REPLY

Please enter your comment!
Please enter your name here