ಕೆಜಿಎಫ್, ಹೆಸರು ಕೇಳುತ್ತಿದ್ದಂತೆ ಸಿನಿಪ್ರಿಯರ ಮೈ ರೋಮಾಂಚನಗೊಳ್ಳುತ್ತದೆ. ಏಕೆಂದರೆ ಈ ಸಿನಿಮಾ ಅಷ್ಟರ ಮಟ್ಟಿಗೆ ಎಲ್ಲರನ್ನೂ ಸೆಳೆದಿದೆ. ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಈ ಚಿತ್ರಕ್ಕೆ ಸಲ್ಲುತ್ತದೆ.
ಇಂದಿಗೆ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ. ಕಳೆದ ವರ್ಷ ಡಿಸೆಂಬರ್ 21 ರಂದು ಕೆಜಿಎಫ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಬಿಡುಗಡೆಯಾಗುವ ಮುನ್ನ ಕನ್ನಡ ಚಿತ್ರರಂಗ ಹೇಗಿತ್ತು, ಬಿಡುಗಡೆಯಾದ ನಂತರ ಸ್ಯಾಂಡಲ್ವುಡ್ಗೆ ದೊರೆತ ಸ್ಥಾನಮಾನ ಏನು ಎಂಬುದರ ಬಗ್ಗೆ ಒಂದು ಹಿನ್ನೋಟ.
1. ಕೆಜಿಎಫ್ ಬಿಡುಗಡೆಗೆ ಮುನ್ನ ಕನ್ನಡ ಸಿನಿಮಾ ತಂತ್ರಜ್ಞರ ಬಗ್ಗೆ ಇತರ ಚಿತ್ರರಂಗದವರಿಗೆ ತಿಳಿದಿರಲಿಲ್ಲ, ಬಿಡುಗಡೆಯಾದ ನಂತರ ಸ್ಯಾಂಡಲ್ವುಡ್ನಲ್ಲಿ ಇಂತಹ ತಂತ್ರಜ್ಞರು ಕೂಡಾ ಇದ್ದಾರ ಎಂದು ಪರಭಾಷೆಯವರು ಹುಬ್ಬು ಏರಿಸಿದ್ದಂತೂ ನಿಜ.
2. ಕೆಜಿಎಫ್ ಬಿಡುಗಡೆಗೂ ಮುನ್ನ ನಿರ್ಮಾಪಕರು ಸೀಮಿತ ಬಜೆಟ್ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದರು. ಆದರೆ ರಿಲೀಸ್ ಆದ ನಂತರ ಕೋಟಿ ಕೋಟಿ ಹೂಡಿ ಸಿನಿಮಾ ತೆಗೆಯಲು ಮುಂದಾಗುತ್ತಿದ್ದಾರೆ.
3. ಕನ್ನಡ ಸಿನಿಮಾಗಳು ಎಂದರೆ ಮೂಗು ಮುರಿಯುತ್ತಿದ್ದ ಬೇರೆ ಭಾಷೆಯ ನಟರು, ಚಿತ್ರರಂಗ, ಕೆಜಿಎಫ್ ಬಿಡುಗಡೆಯಾದ ಮೇಲೆ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಂತಾಗಿದೆ.
4. ಇತರೆ ರಾಜ್ಯಗಳ ಮಾಧ್ಯಮಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಯಾವ ಸುದ್ದಿಗಳೂ ಪ್ರಸಾರವಾಗುತ್ತಿರಲಿಲ್ಲ. ಆದರೆ ಕೆಜಿಎಫ್ ಬಿಡುಗಡೆಯಾದ ನಂತರ ಹೊರರಾಜ್ಯದ ಮಾಧ್ಯಮಗಳಲ್ಲೂ ಸ್ಯಾಂಡಲ್ವುಡ್ ಬಗ್ಗೆ ಸುದ್ದಿ ಪ್ರಸಾರವಾಗುತ್ತಿವೆ.
5. ರಾಜ್ಯದ ಹೊರಗೆ ಕನ್ನಡ ನಟರಿಗೆ ಹೇಳಿಕೊಳ್ಳುವಂತ ಅಭಿಮಾನಿಗಳು ಇರಲಿಲ್ಲ. ಆದರೆ ಕೆಜಿಎಫ್ ರಿಲೀಸ್ ನಂತರ ಯಶ್ಗೆ ಹೊರರಾಜ್ಯಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳು ದೊರೆತಿದ್ದಾರೆ.
6. ಕನ್ನಡ ತಂತ್ರಜ್ಞರು ಹಾಗೂ ನಿರ್ದೇಶಕರನ್ನು ಪರಭಾಷೆಗಳ ಚಿತ್ರಗಳಿಗೆ ಆಹ್ವಾನಿಸಲಾಗುತ್ತಿದೆ. ಅದಕ್ಕೂ ಮುನ್ನ ಸ್ಯಾಂಡಲ್ವುಡ್ ತಂತ್ರಜ್ಞರಿಗೆ ಆ ಸ್ಥಾನಮಾನ ಇರಲಿಲ್ಲ.
7. ಕೆಜಿಎಫ್ ಬಿಡುಗಡೆಯಾದ ಮೇಲೆ ನಿರ್ಮಾಪಕರು ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದತ್ತ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಕೆಜಿಎಫ್ ಬಿಡುಗಡೆಗೂ ಮುನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡುವಲ್ಲಿ ನಿರ್ಮಾಪಕರು ಧೈರ್ಯ ತೋರುತ್ತಿರಲಿಲ್ಲ.
ಒಟ್ಟಿನಲ್ಲಿ ಕನ್ನಡ ಚಿತ್ರಗಳಿಗೆ ಇತ್ತೀಚೆಗೆ ಪರರಾಜ್ಯಗಳಲ್ಲಿ ಮಾನ್ಯತೆ ಸಿಕ್ಕಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕನ್ನಡ ಚಿತ್ರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೆಸರು ಮಾಡುವಂತಾಗಲಿ. ಜೊತೆಗೆ ಮುಂದಿನ ವರ್ಷ ಕೆಜಿಎಫ್-2 ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸಿನಿಮಾ ಕೂಡಾ ಕೆಜಿಎಫ್ಗಿಂತ ಇನ್ನೂ ದೊಡ್ಡಮಟ್ಟದ ಹೆಸರು ಮಾಡಿ ರಾಜ್ಯಕ್ಕೆ ಕೀರ್ತಿ ತರಲಿ ಎಂಬುದು ನಮ್ಮ ಶುಭಹಾರೈಕೆ.