ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಹಾಗೂ ಹೆಚ್ ಡಿ ಕೋಟೆಯ ಕಬಿನಿ ಜಲಾಶಯಗಳಿಂದು ಪ್ರತಿನಿತ್ಯ ತಮಿಳುನಾಡಿಗೆ ಒಂದು ಟಿಎಂಸಿ ನೀರನ್ನು ಹರಿಸಲಾಗುತ್ತಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿಯ ನಿರ್ಣಯದ ಮೇರೆಗೆ ಪ್ರತಿನಿತ್ಯ ತಮಿಳುನಾಡಿಗೆ ನೀರು ಹರಿಯುತ್ತಿದ್ದು ಇನ್ನು ಐದು ದಿನಗಳ ಕಾಲ ಹೀಗೇ ನೀರು ಹರಿಸುವುದು ಮುಂದುವರಿದರೆ ಕೆಆರ್ಎಸ್ ಜಲಾಶಯವು ಬರಿದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ 35 ದಿನಗಳಲ್ಲಿ ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಆದೇಶದಂತೆ 26 ಟಿಎಂಸಿ ನೀರು ಹರಿದು ಹೋಗಿದೆ . ಆದರೆ, ಇಷ್ಟು ದಿನಗಳಲ್ಲಿ ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಿಗೆ ಬಂದಿರುವ ನೀರು ಕೇವಲ 28 ಟಿಎಂಸಿ ಮಾತ್ರ . ವರುಣನ ಕೃಪೆಯಿಂದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ನೀರನ್ನೂ ತಮಿಳುನಾಡಿಗೆ ಹರಿಸಲಾಗಿದೆ.
ಮಳೆ ಕೊರತೆಯ ಕಾರಣ ನೀಡಿ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆಯನ್ನು ಆರಂಭಿಸದಂತೆ ಜಿಲ್ಲಾಡಳಿತ ತಾಕೀತು ಮಾಡಿದೆ. ನಮ್ಮ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ತಮಿಳುನಾಡು ರೈತರ ಕುರುವೈ ಬೆಳೆಗೆ ಹರಿಸುತ್ತಿರುವುದರಿಂದ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕೆಆರ್ಎಸ್ ಜಲಾಶಯದಲ್ಲಿ 83.90 ಅಡಿ ಅಷ್ಟು ನೀರು ಸಂಗ್ರಹವಿದ್ದು 6512 ಕ್ಯೂಸೆಕ್ ಒಳಹರಿವು ಹಾಗೂ 9933 ಕ್ಯುಸೆಕ್ ಹೊರಹರಿವು ದಾಖಲಾಗಿದ್ದು ಜಲಾಶಯದ ನೀರಿನ ಸಂಗ್ರಹ 96 ಅಡಿ ತಲುಪುವವರೆಗೆ ರಾಜ್ಯ ಸರ್ಕಾರ ನೀರಿನ ಬೇಡಿಕೆಯ ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿರುವುದು ರೈತರ ಅನುಮಾನಕ್ಕೆ ಕಾರಣವಾಗಿದೆ. ನಮ್ಮ ಬೆಳೆಗಳಿಗೆ ನೀರಿಲ್ಲ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಬೇಡಿ ಎಂದು ರೈತ ಸಂಘ, ಮತ್ತಿತರ ಜನಪರ ಸಂಘಟನೆಗಳು ಆಗ್ರಹಿಸಿದ್ದಾರೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಬಹುಕಾಲದಿಂದಲು ಅನ್ಯಾಯವಾಗುತ್ತಲೆ ಸಾಗಿದೆ. ಕಾವೇರಿ ನದಿ ನೀರು ನಿರ್ವಹಣಾ ನ್ಯಾಯಮಂಡಳಿ ರಚನೆ ಆದ ನಂತರವೂ ಅದೇ ಪ್ರಕ್ರಿಯೆ ಮುಂದುವರಿದಿರುವುದು ಜನರಲ್ಲಿ ಆತಂಕ ವ್ಯಕ್ತವಾಗುತ್ತಿದೆ.

ಡೆಡ್ ಸ್ಟೋರೇಜ್ ಹಂತಕ್ಕೆ ಕೆಆರ್ಎಸ್
ಜೂನ್ ತಿಂಗಳ 18 ರಿಂದಲೇ ಪ್ರತಿನಿತ್ಯ ಕೆ ಆರ್ ಎಸ್ ಜಲಾಶಯದಿಂದ ಸುಮಾರು 7 ರಿಂದ 8 ಸಾವಿರ ಕ್ಯುಸೆಕ್ಸ್ ನಷ್ಟು ನೀರ ತಮಿಳುನಾಡಿಗೆ ಹರಿದುಹೋಗುತ್ತಿದೆ. ಸದ್ಯ 83 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಿದೆ. ಒಂದು ವೇಳೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯು ತಮಿಳುನಾಡಿಗೆ ಇದೆ ರೀತಿ ನೀರು ಹರಿಸಲು ಮುಂದಾದರೆ ಇನ್ನು ಕೇವಲ ಐದು ದಿನಗಳಲ್ಲಿ ನೀರಿನ ಮಟ್ಟ 75 ಅಡಿಗಳಿಗೆ ಕುಸಿದು ಜಲಾಶಯ ಡೆಡ್ ಸ್ಟೋರೇಜ್ ಹಂತ ತಲುಪಲಿದೆ.