ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಖಾತೆ ಭಾಗ್ಯದ ಕುರಿತು ಒಂದೆರಡು ದಿನದಲ್ಲಿ ಹೇಳುತ್ತೇನೆಂದು ಮುಂದೂಡಿ ಇಂದಿಗೆ ಒಂದು ವಾರವಾಗಿದೆ. ಖಾತೆ ವಿಷ್ಯ ಏನಾಯ್ತು ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೇಳಿದ ಪ್ರಶ್ನೆಗೆ ಮತ್ತೇ ಇನ್ನೆರಡು ದಿನ ಕಾದು ನೋಡಿ ಎಂದಿದ್ದಾರೆ ಯಡಿಯೂರಪ್ಪ..!
ಸಚಿವ ಸಂಪುಟ ವಿಸ್ತರಣೆ, ಪುನಾರಚನೆಗೆ ಅದ್ಯಾಕೋ ಹೈಕಮಾಂಡ್ ಮನಸ್ಸು ಮಾಡುತ್ತಿಲ್ಲ. ಒಂದೆಡೆ ಪಕ್ಷದಲ್ಲಿನ ಒಳಕುದಿ, ಮತ್ತೊಂದೆಡೆ ವಲಸಿಗ ಬಿಜೆಪಿಗರಿಗೆ ಮಂತ್ರಿ ಗಿರಿಗೆ ಒತ್ತಾಯ.. ಹೀಗಾಗಿಯೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಂದಲ್ಲ, ಎರಡಲ್ಲ.. ಸುಮಾರು ಬಾರಿ ಹೈಕಮಾಂಡ್ ಮೊರೆ ಹೋಗಿ ಖಾತೆ ಫಿಕ್ಸ್ ಮಾಡಿ ಕೊಡಿ ಸ್ವಾಮಿ ಅಂದ್ರೂ.. ಯಾವುದೇ ಪ್ರತಿಕ್ರಿಯೆ ಹೈಕಮಾಂಡ್ ಹಂತದಿಂದ ಬರ್ಲಿಲ್ಲ.. ಒಂದೆರಡು ದಿನ ಕಾಯಿರಿ ಎಂದು ಹೇಳುತ್ತಿರುವ ದೆಹಲಿ ನಾಯಕರು ಬೇಕಂತಲೇ ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೂ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ, ವೈಟ್ ಫಾರ್ ಅನದರ್ ಟೂ ಡೇಸ್ ಎನ್ನುವ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣಾ ದಿನಾಂಕ ಪ್ರಕಟಗೊಂಡಿದೆ. ಇಂದಿನಿಂದ ಯಾವುದೇ ಚಟುವಟಿಕೆ ನಡೆಸುವಂತಿಲ್ಲ, ಚುನಾವಣೆ ಸಿದ್ಧತೆಗೆ ಈಗಾಗಲೇ ನಮ್ಮ ರಾಜ್ಯದ ಅಧ್ಯಕ್ಷರ ನೇತೃತ್ವದಲ್ಲಿ ಐದಾರು ತಂಡ ಪ್ರವಾಸ ಮಾಡುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಮಗೆ ವಿಧಾನಸಭೆ, ಲೋಕಸಭೆಯಷ್ಟು ಮಹತ್ವವಾದದ್ದಾಗಿದೆ. ನಮ್ಮ ಸಂಘಟನೆಯನ್ನು ಭದ್ರ ಮಾಡಿಕೊಳ್ಳಲು ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಹಾಗಾಗಿ ಈ ಕಡೆ ಹೆಚ್ಚು ಗಮನ ಕೊಟ್ಟು ಅರ್ಹ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಪಕ್ಷದ ಚಿನ್ಹೆ ಇರದೇ ಇದ್ದರೂ ಸಹ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಇರುತ್ತಾರೆ ಹಾಗಾಗಿ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.
ಹೊಸ ಶಿಕ್ಷಣ ನೀತಿ ಬಗ್ಗೆ ನಿವೃತ್ತ ಮುಖ್ಯ ಕಾರ್ಯದರ್ಶಿ ರಂಗನಾಥ್ ನೇತೃತ್ವದ ಸಮಿತಿ ವರದಿಯನ್ನು ಕೊಟ್ಟಿದೆ ಅದನ್ನು ಅನುಷ್ಠಾನಗೊಳಿಸುವುದು ಹೇಗೆ? ಸಾಧಕ ಬಾದಕ ಏನು? ಎಂದು ಚರ್ಚೆ ಮಾಡಿದ್ದೇವೆ. ಇಡೀ ದೇಶದಲ್ಲಿ ಪ್ರಥಮವಾಗಿ ಈ ರೀತಿ ಕ್ರಾಂತಿಕಾರಕ ಹೆಜ್ಜೆ ನಾವು ಇಡುತ್ತಿದ್ದೇವೆ.ಮೆಕಾಲೆ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿ ನಮ್ಮದೇ ಆದ, ನಮ್ಮ ತನದಿಂದ ಕೂಡಿದ ಒಂದು ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಮೊದಲ ಬಾರಿಗೆ ಅದನ್ನು ಜಾರಿಗೆ ತರುವುದು ಹೇಗೆ ಎನ್ನುವ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಇದನ್ನು ಕಾರ್ಯರೂಪಕ್ಕೆ ತರುವ ತೀರ್ಮಾನ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.