ಬೈ ಎಲೆಕ್ಷನ್: ಪಕ್ಷಗಳ‌ ನಿಲ್ಲದ ಸಂಕಟ ಮತ್ತು ‌ತಳಮಳ

0
228

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಚುನಾವಣಾ ದಿನಾಂಕ ನಿಗದಿಯಾಗಿದೆ. ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಮೊದಲೇ ಚುನಾವಣೆ ಬಂದಿರುವುದು ಆಘಾತವನ್ನುಂಟು ಮಾಡಿದೆ.

ಬಿಜೆಪಿ ಅಧಿಕಾರದಲ್ಲಿ ಇದೆಯಾದರೂ ಸರಕಾರ ಟೇಕ್ ಆಫ್ ಆಗಿಯೇ ಇಲ್ಲ. ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಿಸದ ಕೇಂದ್ರದ ನಿಲುವು ಇನ್ನೂ ನಿಗೂಢವಾಗಿ ಉಳಿದಿದೆ. ಮೂವರು ಉಪಮುಖ್ಯಮಂತ್ರಿಗಳ ನೇಮಕ ಹಳಬರ ಅಸಮಾಧಾನ ಇಮ್ಮಡಿಸಿದೆ. ಆದರೆ ಬಲಶಾಲಿ ಹೈಕಮಾಂಡ್ ನ್ನು ಎದುರು ಹಾಕಿಕೊಳ್ಳದೇ ಮೌನಕ್ಕೆ ಎಲ್ಲರೂ ಶರಣರಾಗಿದ್ದಾರೆ.ಯಡಿಯೂರಪ್ಪ ಅವರದು ಈಗಲೂ ಏಕಾಂಗಿ ಹೋರಾಟ. ಕೇಂದ್ರದ ಅಸಹಕಾರದ ಜೊತೆಗೆ ರಾಜ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಧಾವಂತ.

ಈ ಅಗ್ನಿ ಪರೀಕ್ಷೆಯಲ್ಲಿ ಯಡಿಯೂರಪ್ಪ ಅವರು ಗೆಲ್ಲದೇ ಹೋದರೆ ರಾಜ್ಯದಲ್ಲಿ ಮರು ಚುನಾವಣೆ ಅನಿವಾರ್ಯ.

ಜೆಡಿಎಸ್ ಎಂಬ ಪಕ್ಷದ ನಾಯಕರ ಸ್ಥಿತಿಯಂತೂ ಅಯೋಮಯ. ಡಿ.ಕೆ.ಶಿವಕುಮಾರ ಬಂಧನ ಖಂಡಿಸಿ ಆಯೋಜಿಸಿದ್ದ Rallyಯಲ್ಲಿ ಭಾಗವಹಿಸದೆ ಇರಲು ಕುಮಾರಸ್ವಾಮಿ ಅವರು ನೀಡಿರುವ ಕಾರಣಗಳು ಒಕ್ಕಲಿಗರನ್ನು ಕೆರಳಿಸಿವೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯ ಕುಸಿದ ಮೇಲಾದರು ಕುಮಾರಸ್ವಾಮಿ ಜಾಗೃತ ವಹಿಸಬೇಕಾಗಿತ್ತು. ಡಿ.ಕೆ.ಶಿವಕುಮಾರ ತಮ್ಮ ಸರಕಾರ ಉಳಿಸಲು ತೋರಿದ ನಿಷ್ಠೆಯನ್ನು ಕುಮಾರಸ್ವಾಮಿ ಇಷ್ಟು ಬೇಗ ಮರೆಯಬಾರದಿತ್ತು.

ಸಾಲದ್ದಕ್ಕೆ ಡಿಕೆ ಭ್ರಷ್ಟಾಚಾರ ಕುರಿತು ತಮ್ಮ ಪಕ್ಷದ ಸಭೆಯಲ್ಲಿ ಹಗುರವಾಗಿ ಮಾತನಾಡಿರುವ ವದಂತಿ ಒಕ್ಕಲಿಗರನ್ನು ಕೆರಳಿಸಿದೆ. ತಮ್ಮ ಪಕ್ಷದ ಹಿರಿಯ ಮುಖಂಡ ಜಿ.ಟಿ. ದೇವೇಗೌಡರ ಕುರಿತು ಬಾಯಿಗೆ ಬಂದಂತೆ ಮಾತಾಡಿದ್ದು ಪಕ್ಷದ ಇಮೇಜಿಗೆ ಹೊಡೆತ ಬಿದ್ದಿದೆ. ಇಷ್ಟೆಲ್ಲಾ ಆದರೂ ತಮ್ಮ ಕುಟುಂಬದ ಸದಸ್ಯರನ್ನು ಮಾತ್ರ ಚುನಾವಣಾ ಕಣಕ್ಕಿಳಿಸುವ ಉದ್ದೇಶ ಅರ್ಥ ಮಾಡಿಕೊಂಡ ಕಾರ್ಯಕರ್ತರು ಮೌನ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದ ಏಕ ಮಾತ್ರ ಸೇನಾನಿ ಸಿದ್ಧರಾಮಯ್ಯನವರ ನಿರ್ಧಾರದ ಮೇಲೆ ಕಾಂಗ್ರೆಸ್ ಪಕ್ಷದ ಭವಿಷ್ಯ ನಿಂತಿದೆ. ಅವರ ಮಾತನ್ನು ಲೆಕ್ಕಿಸದೆ ಮತ್ತೊಮ್ಮೆ ಜೆಡಿಎಸ್ ಜೊತೆ ಹೈಕಮಾಂಡ್ ಹೊಂದಾಣಿಕೆ ಮಾಡಿಕೊಂಡರೆ ಪಕ್ಷದ ಕಥೆ ಮುಗಿದಂತೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪೈಪೋಟಿ ಒಡ್ಡುತ್ತಿದ್ದ ಡಿ.ಕೆ.ಶಿ. ಸಂಕಟದಲ್ಲಿದ್ದಾರೆ.‌ ಉಳಿದ ನಾಯಕರು ಸಿದ್ಧರಾಮಯ್ಯನವರ ವಿರುದ್ಧ ಅತೃಪ್ತರಾಗಿದ್ದರೂ ಬಾಯಿ ಬಿಟ್ಟು ಹೇಳಲಾಗದ ಮಟ್ಟಕ್ಕೆ ಇಳಿದಿದ್ದಾರೆ.
ಕೇಂದ್ರದ ಐ.ಟಿ. ಮತ್ತು ಇ.ಡಿ. ಭೂತಗಳು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿವೆ. ಸಮ್ಮಿಶ್ರ ಸರಕಾರ ನಡೆಸುವಾಗ ಸಿದ್ಧರಾಮಯ್ಯನವರ ಪರ ಬ್ಯಾಟಿಂಗ್ ಮಾಡುತ್ತಿದ್ದ ಅಪ್ಪಮಕ್ಕಳು ಸರಕಾರ ಬಿದ್ದ ಮೇಲೆ ನಿರೀಕ್ಷೆಯಂತೆ ತಿರುಗಿ ಬಿದ್ದಿದ್ದಾರೆ.

ಹೀಗೆ ಎಲ್ಲ ಬರೀ ಅಸ್ಪಷ್ಟ. ಇಂತಹ ವಾತಾವರಣದಲ್ಲಿ ಬೈ ಎಲೆಕ್ಷನ್ ಬಿಸಿ ತುಪ್ಪವಾಗಿದೆ.

ಯಡಿಯೂರಪ್ಪ ಅವರ ಮೇಲಿನ ಅನುಕಂಪದಿಂದ ಬೈ ಎಲೆಕ್ಷನ್ ಪರಿಣಾಮ ಬಿಜೆಪಿ ಪರ ಬರಬಹುದು. ಆದರೆ ಸಿದ್ಧರಾಮಯ್ಯನವರ ನಿರ್ಣಯದ ಈ ಚುನಾವಣಾ ಭವಿಷ್ಯ ನಿಂತಿದೆ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳುವ ಅನಿವಾರ್ಯ ವಾತಾವರಣ ಇರುವುದಂತು ಸತ್ಯ. ನಿಗೂಢ ಮತದಾರ ತೆಗೆದುಕೊಳ್ಳುವ ನಿರ್ಧಾರ ಊಹಿಸಲಾಗದು. ಒಂದೆರಡು ತಿಂಗಳು ಉಸಿರು ಬಿಗಿ ಹಿಡಿದುಕೊಂಡು ಕಾಯಬೇಕು. ಕಾಯುತ್ತಾರೆ ಅಷ್ಟೇ!

ಸಿದ್ದು_ಯಾಪಲಪರವಿ.

LEAVE A REPLY

Please enter your comment!
Please enter your name here