ಉಪಚುನಾವಣೆ : ಕಾಂಗ್ರೆಸ್ ಮತ್ತು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಏನಿದೆ ಗೊತ್ತಾ..?

0
168

ರಾಜ್ಯದಲ್ಲಿ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಕ್ಷೇತ್ರಗಳ ಉಪಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ಅಂತಿಮ ಸುತ್ತಿನ ರಣತಂತ್ರವನ್ನು ಹೆಣೆಯುತ್ತಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಈ ಎರಡು ಕ್ಷೇತ್ರಗಳ ಚುನಾವಣೆ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಸಹೋದರರು ಎರಡು ಕ್ಷೇತ್ರಗಳಲ್ಲಿ ಬೀಡುಬಿಟ್ಟು ಶತಾಯಗತಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಇತ್ತ ಇನ್ನೊಂದೆಡೆ ಬಿಜೆಪಿ ಕೂಡಾ ಎರಡು ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿದೆ. ಹೀಗಾಗಿ ಮುಖ್ಯಮುಂತ್ರಿ ಬಿ.ಎಸ್. ಯಡಿಯೂರಪ್ಪ ಶಿರಾ ಕ್ಷೇತ್ರದಲ್ಲಿ ಒಂದು ಬಾರಿಯೂ ಗೆಲ್ಲದ ಬಿಜೆಪಿಯನ್ನು ಗೆಲ್ಲಿಸುವ ಉಸ್ತುವಾರಿಯನ್ನು ತಮ್ಮ ಪುತ್ರ ಬಿ.ವೈ. ವಿಜಯೇಂದ್ರಗೆ ನೀಡಿದ್ದಾರೆ. ಇನ್ನು ರಾಜರಾಜೇಶ್ವರಿ ನಗರದ ಗೆಲುವಿಗಾಗಿ ಅನೇಕ ಸಚಿವರನ್ನು ನಿಯೋಜಿಸಿದ್ದಾರೆ.

ಇನ್ನು ಕಳೆದ ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಮತ್ತು ತಂತ್ರಗಳನ್ನು ಹೆಣೆದಿರುವ ಮೂರು ಪಕ್ಷಗಳು ಇದೀಗ ಆಂತರಿಕ ಸಮೀಕ್ಷೆಯ ಮೂಲಕ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಅಂತಿಮ ಸುತ್ತಿನ ರಣತಂತ್ರಕ್ಕೆ ಸಿದ್ದತೆ ನಡೆಸುತ್ತಿವೆ. ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿಯಿದೆ. ಈ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ಆಂತರಿಕ ಸಮೀಕ್ಷೆಯನ್ನು ಕೈಗೊಂಡಿವೆ. ಈ ಆಂತರಿಕ ಸಮೀಕ್ಷೆಯ ಫಲಿತಾಂಶ ಬಿಜೆಪಿಗೆ ಸಿಹಿ ನೀಡಿದರೆ, ಕಾಂಗ್ರೆಸ್‌ಗೆ ಕಹಿ ನೀಡುವ ಸೂಚನೆ ನೀಡಿದೆ.

ತುಮಕೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಂತರಿಕ ಮೌಲ್ಯಮಾಪನದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಸೋಲು ಕಾಣಲಿದ್ದು, ಶಿರಾದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿಯಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಶಿರಾದಲ್ಲಿ ಆರಂಭದಲ್ಲಿ ಕಾಂಗ್ರೆಸ್ ಗೆಲ್ಲುವ ಲಕ್ಷಣಗಳಿದೆ ಆದರೆ ಜೆಡಿಎಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಪ್ರಚಾರ ತೀವ್ರಗೊಳಿಸಿದ್ದು, ಕಾಂಗ್ರೆಸ್ ಮತಗಳ ವಿಭಜನೆಗೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಅಂಶವೆ ಕಾಂಗ್ರೆಸ್‌ನ್ನು ಆತಂಕಕ್ಕೀಡುಮಾಡಿದೆ. ಕ್ಷೇತ್ರದಲ್ಲಿ ಅನುಕಂಪದ ಅಲೆ ಅಷ್ಟಾಗಿ ಕಂಡು ಬರದಿದ್ದರು, ಮಹಿಳಾ ಮತದಾರರು ಜೆಡಿಎಸ್ ಪಕ್ಷದತ್ತ ವಾಲುವ ಸೂಚನೆಗಳು ಗೋಚರಿಸುತ್ತಿವೆ. ಇನ್ನೊಂಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಮುಂದಾಳತ್ವ ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ತಳಮಟ್ಟದಲ್ಲಿ ಹೊಸ ಹುಮ್ಮಸ್ಸು ನೀಡಿದೆ. ಹೀಗಾಗಿ ಬಿಜೆಪಿ ಶಿರಾ ಕ್ಷೇತ್ರದಾದ್ಯಂತ ವ್ಯವಸ್ಥಿತ ತಂತ್ರಗಾರಿಕೆ ಮೂಲಕ ಪ್ರಚಾರ ನಡೆಸುತ್ತಿದೆ.

ಇತ್ತ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾದ ಪ್ರಬಲ ಅಲೆ ಕಂಡು ಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್ ಕುಸುಮಾ ಕ್ಷೇತ್ರದ ಜನರೊಂದಿಗೆ ಸಂಪರ್ಕ ಹೊಂದಿಲ್ಲ, ಇದರಿಂದ ಮತದಾರರ ಮತ ಸೆಳೆಯುವುದು ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಅದೇ ರೀತಿ ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇನ್ನು ಸತತ ಎರಡು ಬಾರಿ ಶಾಸಕರಾಗಿರುವ ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಇದೆ.

LEAVE A REPLY

Please enter your comment!
Please enter your name here