ಗ್ರಾಹಕರನ್ನು ಸೆಳೆಯಲು ಮಾರಾಟಗಾರರು ನಾನಾ ಪ್ರಯತ್ನ ಮಾಡುತ್ತಾರೆ. ಒಂದು ಕೊಂಡರೆ ಒಂದು ಉಚಿತ, ಲಕ್ಕಿ ಡ್ರಾ ಹೀಗೆ ವಿವಿಧ ಆಫರ್ಗಳಿಂದ ಜನರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಶಾಪ್ನಲ್ಲಿ ಸ್ಮಾರ್ಟಫೋನ್ ಕೊಂಡವರಿಗೆ ಕಿಲೋ ಈರುಳ್ಳಿ ಉಚಿತವಾಗಿ ನೀಡುವ ಆಫರ್ ಬಿಟ್ಟಿದ್ದಾರೆ.
ಈರುಳ್ಳಿ ಬೆಲೆ ಗಗನಕ್ಕೆ ಏರಿರುವ ಈ ಸಂದರ್ಭದಲ್ಲಿ ಮೊಬೈಲ್ ಅಂಗಡಿಯವರು ಈ ಆಫರ್ ನೀಡಿದ್ದಾರೆ. ಅಂದ ಹಾಗೆ ಈ ಆಫರ್ ಇರುವುದು ಕರ್ನಾಟಕದಲ್ಲಂತೂ ಅಲ್ಲ, ತಮಿಳುನಾಡಿನಲ್ಲಿ. ಇಲ್ಲಿ ಸೂಪರ್ ಕ್ವಾಲಿಟಿ ಈರುಳ್ಳಿಗೆ ಕಿಲೋ 180 ರೂಪಾಯಿ ಆದರೆ, ಸಾಮಾನ್ಯ ಕ್ವಾಲಿಟಿ ಈರುಳ್ಳಿಗೆ 120-130 ಕಿಲೋ ಇದೆ. ತಮಿಳುನಾಡಿನ ಪುಟ್ಟುಕೊಟ್ಟೈ ಎಂಬಲ್ಲಿ ಎಸ್ಟಿಆರ್ ಮೊಬೈಲ್ ಶಾಪ್ನವರು ತಮ್ಮ ಶಾಪ್ನಿಂದ ಸ್ಮಾರ್ಟಫೋನ್ ಕೊಂಡವರಿಗೆ ಕಿಲೋ ಈರುಳ್ಳಿಯನ್ನು ಉಚಿತವಾಗಿ ಕೊಡುತ್ತೇವೆ ಎಂದು ಜಾಹೀರಾತು ನೀಡಿದ್ದಾರೆ.
ಈ ಜಾಹೀರಾತು ನೋಡಿದ್ದೇ ತಡ ಜನರು ಈ ಅಂಗಡಿಗೆ ದೌಡಾಯಿಸಿ ಸ್ಮಾರ್ಟಫೋನ್ ಖರೀದಿಸುತ್ತಿದ್ದಾರೆ, ಜೊತೆಗೆ ಖುಷಿ ಖುಷಿಯಾಗಿ ಈರುಳ್ಳಿಯನ್ನೂ ಮನೆಗೆ ತರುತ್ತಿದ್ದಾರೆ. ಅಂಗಡಿ ಮಾಲೀಕ ಶರವಣ್ ಕುಮಾರ್ ಇದೀಗ ಫುಲ್ ಖುಷ್ ಆಗಿದ್ದಾರೆ. ಇದುವರೆಗೂ ಯಾರೂ ಕೂಡಾ ಇಂತಹ ಆಫರ್ ನೀಡಿಲ್ಲ. ನಮ್ಮ ಅಂಗಡಿಯಲ್ಲಿ ಜಾಹೀರಾತು ನೀಡಿದಾಗಿನಿಂದ ಸಾಕಷ್ಟು ಸ್ಮಾರ್ಟಫೋನ್ಗಳು ಸೇಲಾಗಿವೆ. ನಾನು 8 ವರ್ಷಗಳ ಹಿಂದೆ ಈ ಶಾಪ್ ತೆರೆದೆ.
ಪ್ರತಿದಿನ 2 ಸ್ಮಾರ್ಟಫೋನ್ಗಳು ಸೇಲ್ ಆಗುವುದೇ ಹೆಚ್ಚು. ಆದರೆ ಈ ಈರುಳ್ಳಿ ಆಫರ್ ನೀಡಿದಾಗಿನಿಂದ ದಿನಕ್ಕೆ 8 ಸ್ಮಾರ್ಟಫೋನ್ಗಳು ಸೇಲಾಗುತ್ತಿವೆ ಎನ್ನುತ್ತಾರೆ. ಒಟ್ಟಿನಲ್ಲಿ ಶರವಣ್ ಕುಮಾರ್ ಅವರ ಕ್ರಿಯೇಟಿವ್ ಐಡಿಯಾವನ್ನು ನಿಜಕ್ಕೂ ಮೆಚ್ಚಲೇಬೇಕು ಬಿಡಿ. ನಿಮ್ಮಲ್ಲಿ ಯಾರಾದರೂ ಮೊಬೈಲ್ ಶಾಪ್ ಇಟ್ಟಿದ್ದರೆ ನೀವೂ ಕೂಡಾ ಈ ಆಫರ್ ಶುರು ಮಾಡಬಹುದು ಯೋಚಿಸಿ ನೋಡಿ.