ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿ ಕದ ತಟ್ಟುತ್ತಿದ್ದಂತೆ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ. ಸಂಪುಟ ರಚನೆಯೋ, ಅಥವಾ ಪುನಾರಚನೆಯೋ ಎಂಬ ಕೌತುಕದಿಂದ ಕಾಯುತ್ತಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಈ ಗೊಂದಲ ಸಂಜೆಯೊಳಗೆ ಬಗೆ ಹರಿಯುತ್ತದೆ. ಈ ಬಗ್ಗೆ ಸಿಎಂ ನಮ್ಮೊಂದಿಗೆ ಯಾವ ಚರ್ಚೆಯೂ ಮಾಡಿಲ್ಲ. ಹಿರಿಯ ಸಚಿವರನ್ನು ಕೈ ಬಿಡಬೇಕು ಎಂಬ ಯಾವ ಸೂಚನೆಯು ಇಲ್ಲ. ಅಚ್ಚರಿಯ ವ್ಯಕ್ತಿಗಳ ಆಯ್ಕೆ ಅಂದರೆ ಯಾರನ್ನೇ ಮಾಡಿದ್ರೂ ಕೂಡ ಎಂಎಲ್ ಎ ಎಂಎಲ್ ಸಿ ಗಳನ್ನೇ ಮಾಡಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತರನ್ನೇ ಆಯ್ಕೆ ಮಾಡಿ ಅಧಿಕಾರವನ್ನು ಹೈಕಮಾಂಡ್ ಕೊಡುತ್ತಿದೆ. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಷಯದಲ್ಲೂ ಹೀಗೆ ಆಗುತ್ತಾ ಗೊತ್ತಿಲ್ಲ. ಸಿಎಂ ದೆಹಲಿಗೆ ಹೋಗಿದ್ದಾರೆ. ವರಿಷ್ಟರೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ. ಅದು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಟರಿಗೆ ಬಿಟ್ಟ ವಿಷಯ ಎಂದು ತಿಳಿಸಿದರು.
ಸಚಿವಾಕಾಂಕ್ಷಿ ರೇಣುಕಾಚಾರ್ಯ ಮಾತನಾಡಿ, ದಾವಣಗೆರೆ ಮಧ್ಯ ಕರ್ನಾಟಕದಲ್ಲಿದೆ. ರಾಜಧಾನಿಯಾಗುವ ಎಲ್ಲ ಅರ್ಹತೆಯೂ ಇದೆ. ಹಾಗಾಗಿ ದಾವಣಗೆರೆಗೆ ಸಚಿವ ಸ್ಥಾನ ಕೊಡಬೇಕು. ಸಿಎಂ ನಿರ್ಧಾರಕ್ಕೆ ನಾವು ಬದ್ದ ಎಂದು ಪರೋಕ್ಷವಾಗಿ ಬೇಡಿಕೆ ಇಟ್ಟರು.
ಈಗಾಗಲೇ ಮೂರು ಬಾರಿ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ದೆಹಲಿ ನಾಯಕರು ಫ್ರೀ ಇಲ್ಲ ಎಂದು ಬರಿಗೈಯಲ್ಲಿ ವಾಪಾಸ್ ಆಗಿದ್ದು ಆಕಾಂಕ್ಷಿಗಳನ್ನು ಭಾರೀ ನಿರಾಸೆಗೆ ದೂಡಿತ್ತು. ನಂತರ ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆ ಸಚಿವ ಸ್ಥಾ ನ ಘೋಷಣೆಯಾಗುತ್ತೆ ಎಂದು ಸಿಎಂ ಸಚಿವಾಕಾಂಕ್ಷಿಗಳನ್ನು ಸಾಮಾಧಾನ ಪಡಿಸಿದ್ದರು. ಇಂದು ಮತ್ತೇ ದೆಹಲಿ ಭೇಟಿ ಕೊಟ್ಟಿದ್ದು, ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.