ಕಣಿವೆ ರಾಜ್ಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನ 370 ಮತ್ತು 35(ಎ) ವಿಧಿಗಳನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಣಯಕ್ಕೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಮಯಾವತಿ ತೆಗೆದುಕೊಂಡಿರುವ ಈ ನಿರ್ಧಾರ ವಿಪಕ್ಷಗಳಿಗೆ ಅಚ್ಚರಿ ಮೂಡಿಸಿದೆ.
ಇನ್ನು ರಾಜ್ಯಸಭೆಯಲ್ಲಿಂದು ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಸಂಬಂಧಿಸಿದ ಮಂಡಿಸಿದ ವಿಧೇಯಕಕ್ಕೆ ಸಂಪೂರ್ಣ ಬೆಂಬಲವನ್ನು ಬಹುಜನ ಸಮಾಜವಾದಿ ಪಕ್ಷ ವ್ಯಕ್ತಪಡಿಸಿದೆ. ಈ ಕುರಿತಂತೆ ಅಧಿಕೃತ ಹೇಳಿಕೆ ನೀಡಿರುವ ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ, “ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ. ಈ ವಿಧೇಯಕಕ್ಕೆ ಸಮ್ಮತಿ ಸಿಗಬೇಕಿದೆ. ಸಂವಿಧಾನದ 370(3) ರದ್ದು ಹಾಗೂ ಇನ್ನಿತರ ಮಸೂದೆಗಳನ್ನು ರದ್ದುಪಡಿಸುವುದರ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ, ಅಭಿವೃದ್ಧಿ ಸಾಧ್ಯ ಎಂದಾದರೆ, ನಾವು ವಿರೋಧಿಸುವುದಿಲ್ಲ” ಎಂದಿದ್ದಾರೆ.

ಇನ್ನು ಬಿಜೆಪಿಯ ಮಿತ್ರಪಕ್ಷ ಜಿಡಿಯು ಮಾತ್ರ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿಲ್ಲ. ಜೆಡಿಯು ಮುಖಂದ ಕೆಸಿ ತ್ಯಾಗಿ ಮಾತನಾಡಿ, “ನಿತೀಶ್ ಕುಮಾರ್ ಅವರು ಜೆಪಿ ನಾರಾಯಣ, ರಾಮ್ ಮನೋಹರ್ ಲೋಹಿಯಾ ಹಾಗೂ ಜಾರ್ಜ್ ಫನಾರ್ಂಡೀಸ್ ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಾವು ವಿಶೇಷ ಸ್ಥಾನಮಾನ ರದ್ದು ಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನವೀನ್ ಪಾಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದೆ. “ಜಮ್ಮು ಮತ್ತು ಕಾಶ್ಮೀರ ಈಗ ನಿಜವಾಗಿಯೂ ಭಾರತದ ಅಂಗವಾಗಿದೆ. ನಮ್ಮದು ಪ್ರಾದೇಶಿಕ ಪಕ್ಷವಾದರೂ ದೇಶ ಮೊದಲು” ಎನ್ನುವ ಮೂಲಕ ಬೆಂಬಲ ಸೂಚಿಸಿದೆ.
