ಬಿ.ಎಸ್.ಯಡಿಯೂರಪ್ಪ ಇದೇ 19ರಂದು ಸೋಮವಾರ ಬಹುನಿರೀಕ್ಷಿತ ಸಚಿವ ಸಂಪುಟ ರಚನೆ

0
175

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಚಿವ ಸಂಪುಟ ವಿಸ್ತರಣೆಯಾಗದಿರುವುದಕ್ಕೆ ಪ್ರತಿಪಕ್ಷ ಮತ್ತು ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 19ರಂದು ಸೋಮವಾರ ಬಹುನಿರೀಕ್ಷಿತ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ನಾಳೆ ಸ್ವತಂತ್ರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ಶುಕ್ರವಾರ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆಗೆ ಹಸಿರು ನಿಶಾನೆ ಪಡೆಯಲಿದ್ದಾರೆ.

ಕಳೆದ ಭಾನುವಾರ ಬೆಳಗಾವಿಗೆ ಬಂದಿದ್ದ ಅಮಿತ್ ಶಾ ಅವರು, ಆ. 16ರಂದು ಸಚಿವ ಆಕಾಂಕ್ಷಿಗಳ ಪಟ್ಟಿ ಸಮೇತ ನವದೆಹಲಿಗೆ ಆಗಮಿಸುವಂತೆ ಸೂಚಿಸಿದ್ದರು. ಇದರಂತೆ ಶುಕ್ರವಾರ ಬಿಎಸ್‍ವೈ ಅವರು ಸಂಘ ಪರಿವಾರದ ಹಿನ್ನೆಲೆ, ಬಿಜೆಪಿ ನಿಷ್ಠಾವಂತರು ಮತ್ತು ತಮ್ಮ ಆಪ್ತವಲಯದ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ.

ಒಂದು ವೇಳೆ ಸಚಿವ ಸಂಪುಟ ರಚನೆಗೆ ವರಿಷ್ಠರು ಯಾವುದೇ ತಗಾದೆ ತೆಗೆಯದಿದ್ದರೆ. ಸೋಮವಾರ ಬೆಳಗ್ಗೆ ರಾಜಭವನದಲ್ಲಿ ಸಂಪುಟ ರಚಣೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಹಿಂದೆಯೇ ಸಚಿವ ಸಂಪುಟ ರಚಣೆ ಆಗಬೇಕಿತ್ತಾದರೂ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿದಿಂದಾಗಿ ಮುಂದೂಡಿಕೆಯಾಗಿತ್ತು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರವೇ ಸಂಪುಟ ರಚಣೆ ಮಾಡಿದರಾಯಿತೆಂದು ವರಿಷ್ಠರು ಯಡಿಯೂರಪ್ಪನವರಿಗೆ ಕಡಿವಾಣ ಹಾಕಿದ್ದರು.

ಆಗಸ್ಟ್ 16ರಂದು ಹೊರಟು 17ರಂದು ದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಬಳಿಕ ಆಗಸ್ಟ್ 19ರಂದು ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂಬ ಮಾತುಗಳು ಬಿಜೆಪಿ ಮೂಲಗಳಿಂದ ಕೇಳಿಬರುತ್ತಿವೆ.

ಸಂಪುಟ ಹೇಗಿರಲಿದೆ?:

ಮೊದಲಿಗೆ ಯಡಿಯೂರಪ್ಪ ನೇತೃತ್ವದಲ್ಲಿ 23:11 ಸೂತ್ರದಡಿ ಮಂತ್ರಿ ಮಂಡಲ ರಚಿಸುವಂತೆ ಸೂಚಿಸಲಾಗಿತ್ತು. ನೂತನ ಸಚಿವ ಸಂಪುಟದಲ್ಲಿ ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕಮಾಡುವ ನಿರ್ಧಾರವಾಗಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿರುವವರ ಭವಿಷ್ಯ ನಿರ್ಧಾರ ನೋಡಿಕೊಂಡು, 15 ಜನರ ಪೈಕಿ 11 ಮಂದಿಗೆ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯೂ ಇತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಮೊದಲ ಹಂತದಲ್ಲಿ 10 ರಿಂದ 12 ಮಂದಿ ಹಿರಿಯರಿಗೆ ಸ್ಥಾನ ಕಲ್ಪಿಸಲು ಬಿಜೆಪಿ ಮುಂದಾಗಿದೆ.

ಒಟ್ಟಾರೆ, ಪ್ರದೇಶವಾರು, ಜಾತಿ ಲೆಕ್ಕಾಚಾರ, ಅನುಭವದ ಆಧಾರದ ಮೇಲೆ ಡಿಸಿಎಂಗಳ ಸಂಖ್ಯೆಯನ್ನು ಹೆಚ್ಚಿಸಲೂಬಹುದು. 106 ಶಾಸಕರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತು ಮಾಡಿದ ಬಿಎಸ್ ಯಡಿಯೂರಪ್ಪ, ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ಬಿಜೆಪಿ ಹೈಕಮಾಂಡ್‍ಗೆ ನೀಡಿದ್ದಾರೆ.

ಅತ್ತ ಉನ್ನತ ಹುದ್ದೆಗೇರಿರುವ ಆರೆಸ್ಸೆಸ್ ಮುಖಂಡ ಸಂತೋಷ್ ಕೂಡಾ ಒಂದು ಪಟ್ಟಿ ನೀಡಿದ್ದಾರೆ. ಎರಡನ್ನು ತಾಳೆ ಮಾಡಿ ನೋಡಿ, ಅಮಿತ್ ಶಾ ಅಂತಿಮ ಪಟ್ಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮಲುಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಬಹುಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಆರಂಭದಲ್ಲಿ ಡಿಸಿಎಂ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆದಾಗ ಶ್ರೀರಾಮುಲು ಹೆಸರು ಮುಂಚೂಣಿಯಲ್ಲಿತ್ತು.

ಶ್ರೀರಾಮುಲು ಅಲ್ಲದೆ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಅರವಿಂದ್ ಲಿಂಬಾಳಿ ಸೇರಿದಂತೆ ಅನೇಕ ಮಂದಿ ಹೆಸರು ಕೇಳಿ ಬಂದಿತ್ತು. ಆದರೆ, ಈ ಬಾರಿ ಡಿಸಿಎಂ ಹುದ್ದೆ ಬೇಡ ಎಂದು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದೆ.

ಒಟ್ಟು 2 ಹಂತಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಮೊದಲ ಹಂತದಲ್ಲಿ 10 ರಿಂದ 12 ಶಾಸಕರು ಮಾತ್ರ ಸಂಪುಟ ಸೇರಲಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನೋಡಿಕೊಂಡು 2ನೇ ಹಂತದ ವಿಸ್ತರಣೆಯನ್ನು ಮಾಡುವ ಚಿಂತನೆ ಇದೆ. ಆದರೆ, ಮೊದಲ ಹಂತದಲ್ಲಿ ಸಂಪುಟ ಸೇರುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಬೆಂಬಲಿತರಿಗೆ ಸಚಿವ ಸ್ಥಾನ ಕೈ ತಪ್ಪಿದರೂ ನಿಗಮ ಮಂಡಳಿ ಸ್ಥಾನ ನೀಡುವ ಭರವಸೆಯಂತೂ ಸಿಕ್ಕಿದೆ.

ಯಾರಿಗೆ ಅದೃಷ್ಟ?

ಮೊದಲ ಹಂತದಲ್ಲಿ ಶಾಸಕರಾದ ಬಿ.ಶ್ರೀರಾಮುಲು, ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅಶ್ವತ್ಥನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಹಾಗೂ ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಈ ಮೂಲಕ ಪ್ರದೇಶವಾರು ಹಂಚಿಕೆ ಒಂದು ಹಂತ ಪೂರೈಸಿ, ಸಚಿವರನ್ನು ಪ್ರವಾಹ ಪರಿಸ್ಥಿತಿ ಅವಲೋಕನ, ನೆರೆ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿ ಸೂಚಿಸಲಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ 14 ತಿಂಗಳ ಕಾಲ ಆಡಳಿತ ನಡೆಸಿ ಪತನಗೊಂಡಿತ್ತು.

ಇದಾದ ಬೆನ್ನಲ್ಲೇ ನೂತನ ಸರ್ಕಾರದ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ತಿಂಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ನಡುವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನ ಹಾಗೂ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಚಿವ ಸಂಪುಟ ರಚನೆ ವಿಳಂಬವಾಗಿತ್ತು.

ಪ್ರವಾಹ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್‍ವೈ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು. ಇದರ ನಡುವೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಕೊನೆಗೂ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ವೇಗ ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಸಚಿವರ ಸಂಭಾವ್ಯ ಪಟ್ಟಿ:-

 1. ಗೋವಿಂದ ಕಾರಜೋಳ-ಲೋಕೋಪಯೋಗಿ
 2. ಈಶ್ವರಪ್ಪ-ಕಂದಾಯ
 3. ಆರ್.ಅಶೋಕ್-ಸಾರಿಗೆ
 4. ಜಗದೀಶ ಶೆಟ್ಟರ್ -ಗೃಹ ಇಲಾಖೆ
 5. ವಿ. ಸೋಮಣ್ಣ-ನಗರಾಭಿವೃದ್ಧಿ
 6. ಜೆ.ಸಿ. ಮಾಧುಸ್ವಾಮಿ-ಕಾನೂನು ಸಂಸದೀಯ ವ್ಯವಹಾರ
 7. ಬಿ. ಶ್ರೀರಾಮುಲು- ಸಮಾಜ ಕಲ್ಯಾಣ
 8. ಉಮೇಶ್ ಕತ್ತಿ-ಕೃಷಿ
 9. ಡಾ.ಅಶ್ವತ್ಥ್ ನಾರಾಯಣ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
 10. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
 11. ರೇಣುಕಾಚಾರ್ಯ-ಪೌರಾಡಳಿತ ಖಾತೆ
 12. ಬಾಲಚಂದ್ರ ಜಾರಕಿಹೊಳಿ-ಕಾರ್ಮಿಕ ಇಲಾಖೆ
 13. ಶಿವನಗೌಡ ನಾಯಕ್-ಸಣ್ಣ ಕೈಗಾರಿಕೆ ಖಾತೆ
 14. ಅಂಗಾರ-ಸಣ್ಣ ನೀರಾವರಿ
 15. ಬೋಪಯ್ಯ-ಉನ್ನತ ಶಿಕ್ಷಣ
 16. ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಯೋಜನೆ

LEAVE A REPLY

Please enter your comment!
Please enter your name here