ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ಇದೇ ಮೊದಲ ಬಾರಿ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದೆ. ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಕಾಂಗ್ರೆಸ್ ಆಡಳಿತವೇ ಮುಂದುವರಿಯಲಿದೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಂತ್ರದಿಂದಾಗಿ ನಿರೀಕ್ಷೆ ಉಲ್ಟಾ ಆಗಿ ನಗರಸಭೆ ಬಿಜೆಪಿಗೆ ಒಲಿದಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಆನಂದರೆಡ್ಡಿ 22 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಅಂಬಿಕಾ ಕೇವಲ 9 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಸದಸ್ಯೆ ವೀಣಾ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಕಾಂಗ್ರೆಸ್ ಪಕ್ಷ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಸಂಖ್ಯಾಬಲವನ್ನು ನೋಡಿದರೆ ಕಾಂಗ್ರೆಸ್ ಗೆ ಸುಲಭವಾಗಿ ಅಧಿಕಾರದ ಚುಕ್ಕಾಣಿ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿತ್ತು. ಈ ಸಂದರ್ಭದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಕ್ಷೇತರ ಸದಸ್ಯ ಆನಂದರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಬಿಜೆಪಿಯಿಂದ ಬೆಂಬಲ ಕೊಡಿಸುವ ಕಾರ್ಯತಂತ್ರವನ್ನು ಹೆಣೆದರು. ಇದರ ಪರಿಣಾಮ, ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಮೇಲುಗೈ ಸಾಧಿಸಿದೆ.
ನಂತರ ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, “ಇತಿಹಾಸದಲ್ಲಿ ಮೊದಲ ಬಾರಿ ಬಿಜೆಪಿ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನನಗೆ ಅಭಿವೃದ್ಧಿ ಮಾತ್ರ ಮುಖ್ಯ. ಈ ಚುನಾವಣೆ ಕೂಡ ಅಭಿವೃದ್ಧಿಗಾಗಿ ಮಾತ್ರ ಆಗಿದೆ” ಎಂದು ತಿಳಿಸಿದರು.
“ಚಿಕ್ಕಬಳ್ಳಾಪುರವನ್ನು ಸುಂದರ, ಸುರಕ್ಷಿತ ನಗರವಾಗಿ ರೂಪುಗೊಳಿಸುವುದೇ ನಮ್ಮ ಉದ್ದೇಶ. ಅಧ್ಯಕ್ಷರಾಗಿ ಆಯ್ಕೆಯಾದ ಆನಂದರೆಡ್ಡಿ ಬಹಳ ಅನುಭವಿಗಳಾಗಿದ್ದಾರೆ. ಅವರಿಗೆ ಬದ್ಧತೆ, ದಕ್ಷತೆ ಇದೆ. ಹೊಸ ತಂಡ ಹುರುಪಿನಿಂದ, ಜನಪರವಾಗಿ ಕೆಲಸ ಮಾಡಲಿದೆ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದರು.
ಯಾವ ದ್ವೇಷ ಇಲ್ಲ
ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 22 ಮಂದಿ ಬೆಂಬಲ ನೀಡಿದ್ದಾರೆ. ಆದರೂ ನಗರಸಭೆಯ ಎಲ್ಲ 31 ಸದಸ್ಯರು ನನ್ನವರೇ ಎಂದು ನಾನು ಕೆಲಸ ಮಾಡುತ್ತೇನೆ. ಯಾವುದೇ ಪಕ್ಷವಾದರೂ ನಾನು ದ್ವೇಷ ಇಟ್ಟುಕೊಳ್ಳದೆ ನಗರಸಭೆ ಮಾದರಿಯಾಗಲು ಕೆಲಸ ಮಾಡುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.