ಬೆಂಗಳೂರು: ಸಿಟಿ ರವಿ ಯಾವಾಗ ರಾಜೀನಾಮೆ ನೀಡಿದರೋ ಪಕ್ಷದಲ್ಲಿ ಸಂಪುಟ ರಚನೆ, ವಿಸ್ತರಣೆ ಕುರಿತ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು ಹೇಳಿದ್ದಾರೆ. ಹೊಸ ಮುಖಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಸಂಪುಟದ ಕೆಲವು ಮಂತ್ರಿಗಳನ್ನು, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಸಚಿವರನ್ನು ಕೈಬಿಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಜಿಲ್ಲೆಯ ಯಾವುದೇ ಸಚಿವರ ಕೈಬಿಟ್ಟರೂ ಕೂಡ ಇದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಪಕ್ಷದ ನಾಯಕತ್ವ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ. ಪಕ್ಷದಲ್ಲಿ ಸಂಭವಿಸಲಿರುವ ಬಿರುಕುಗಳನ್ನು ತಪ್ಪಿಸಲು ಪಕ್ಷದ ನಾಯಕತ್ವವು ಈ ಬಾರಿ ಕೆಲ ನಾಯಕರಿಗೆ ಅವಕಾಶ ಕಲ್ಪಿಸಲು ಪಕ್ಷದ ನಾಯಕತ್ವ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಜಾರಕಿಹೊಳಿಯವರು ಹೇಳಿದ್ದಾರೆ.
ಇನ್ನು ಎಂಟು ಮಂದಿ ಸಚಿವರಿಂದ ಸಚಿವ ಸ್ಥಾನ ತೆಗೆದುಕೊಳ್ಳುವ ಚಿಂತನೆ ಪಕ್ಷದಲ್ಲಿ ಇದೆ. ಸಮುದಾಯ, ಪ್ರಾಂತ್ಯ, ಜಾತಿವಾರು ಯಾರನ್ನು ಆಯ್ಕೆ ಮಾಡ್ಕೊಳ್ಳಬಹುದು ಎಂದು ಬಿಎಸ್ ವೈ ಪಟ್ಟಿ ಸಿದ್ದತೆ ಮಾಡಿಕೊಂಡಿದ್ದು ಹೈಕಮಾಂಡ್ ನಾಯಕರ ಒಪ್ಪಿಗೆಯ ಬಳಿಕ ನಿರ್ಧರಿಸಲಿದ್ದಾರೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿಯೇ ಸಿಎಂ ಬಿಎಸ್ವೈರ ಎರಡನೇ ಬಾರಿಯ ದೆಹಲಿ ಪ್ರವಾಸ ಕುತೂಹಲ ಮೂಡಿಸಿದೆ. ಇನ್ನೂ ಸಂಭಾವ್ಯ ಆಕಾಂಕ್ಷಿಗಳು ಹಾಗೂ ಸಂಪುಟದಿಂದ ಯಾರನ್ನು ಕೈ ಬಿಡುವ ಸಾಧ್ಯತೆ ಇದೆ ಅನ್ನೋದನ್ನು ನೋಡೋದಾದ್ರೆ..
ಯಾರು ಇನ್..?
ಸಿಪಿ ಯೋಗೇಶ್ವರ್
ಉಮೇಶ್ ಕತ್ತಿ
ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಆರ್ ಶಂಕರ್
ಎಸ್ ಅಂಗಾರಾ
ಸುನೀಲ್ ಕುಮಾರ್ ಕಾರ್ಕಳ
ಕೆಜಿ ಬೋಪಯ್ಯ
ಯಾರು ಔಟ್..?
ಸಿಟಿ ರವಿ
ಶಶಿಕಲಾ ಜೊಲ್ಲೆ
ಕೆ ಎಸ್ ಈಶ್ವರಪ್ಪ
ಜಗದೀಶ್ ಶೆಟ್ಟರ್
ಪ್ರಭು ಚೌವ್ಹಾಣ್
ಸಿಸಿ ಪಾಟೀಲ್
ವಿ ಸೋಮಣ್ಣ
ಕೊಟಾಶ್ರೀನಿವಾಸ್ ಪೂಜಾರಿ
ಸಿ ಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಗಿ ನೇಮಕ ಹಿನ್ನಲೆಯಲ್ಲಿ ಕನ್ನಡ, ಸಂಸ್ಕೃತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಸಿ ಟಿ ರವಿ ಸಮುದಾಯದ ಪ್ರೀತಂ ಗೌಡ ಹಾಗೂ ಯೋಗೀಶ್ವರ್ ನಡುವೆ ಲಾಬಿ ಶುರುವಾಗಿದೆ. ಖಾಲಿಯಾಗುವ ಸಿ.ಟಿ. ರವಿ ಸ್ಥಾನವನ್ನೂ ತಮಗೆ ನೀಡಿ ಎಂದು ಒತ್ತಡ ಹೇರಿದ್ದಾರೆ.
ಇದರ ಜೊತೆಗೆ ಬಿ.ಎಸ್. ಯಡಿಯೂರಪ್ಪಗೆ ವಯಸ್ಸಾಯ್ತು.. ಹೊಸ ನಾಯಕನ ಅಗತ್ಯ ರಾಜ್ಯ ಬಿಜೆಪಿಗೆ ಇದೆ ಎಂಬ ಚರ್ಚೆ ಪಕ್ಷದಲ್ಲೇ ದಟ್ಟವಾಗಿ ಕೇಳಿಬರ್ತಿದೆ. ಪಕ್ಷ ಬಲವರ್ಧನೆ ಜೊತೆಗೆ ಹೊಸ ತಲೆಗಳಿಗೆ ಅವಕಾಶ ಕೊಡಬೇಕೆಂಬ ನಿಟ್ಟಿನಲ್ಲಿ ಸಂಪುಟ ಪುನರ್ ರಚನೆ ಆಗಲಿದೆ ಎಂಬ ಸುದ್ದಿ ಪ್ರಬಲವಾಗಿ ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ.