ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಅಕ್ರಮ ಹಣ ವರ್ಗಾವಣೆ ಮತ್ತು ಬೇನಾಮಿ ಆಸ್ತಿ ಗಳಿಕೆಯ ಆರೋಪಕ್ಕೆ ಗುರಿಯಾಗಿರುವ ಡಿಕೆಶಿಗೆ ಇದೀಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್ ಕೂಡಾ ಹೊಸ ತಲೆನೋವು ತಂದಿಟ್ಟಿದೆ.

ಡಿಕೆ ಶಿವಕುಮಾರ್ ನಡೆಸಿರುವ ಅಕ್ರಮಗಳ ತೀವ್ರ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ಬಳ್ಳಾರಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್ ಮೇಲೆ ಕಣ್ಣು ಹಾಕಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ 1,900 ಎಕರೆ ಭೂಮಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್ನ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಡಿಕೆಶಿಗೆ ಹೊಸ ಸಂಕಷ್ಟ ಶುರುವಾಗಿದೆ. ಇಡಿ ಅಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬಳ್ಳಾರಿಯಲ್ಲಿರುವ ಸೋಲಾರ್ ಪ್ಲಾಂಟ್ನಲ್ಲಿ ಡಿಕೆ ಶಿವಕುಮಾರ್ ಅವರದ್ದು 60 ರಷ್ಟು ಪಾಲುದಾರಿಕೆ ಇದೆ ಎನ್ನಲಾಗಿದೆ.

ಅಕ್ರಮ ಹಣ ವರ್ಗಾವಣೆ ಕೇಸಿನ ಮಧ್ಯೆಯೇ ಇದೀಗ ಸೋಲಾರ್ ಪ್ಲಾಂಟ್ ಅಕ್ರಮದ ಬಗ್ಗೆಯೂ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. 1900 ಎಕರೆ ಸೋಲಾರ್ ಪ್ಲಾಂಟ್ ಯೋಜನೆ ಸಾವಿರಾರೂ ಕೋಟಿ ರೂ.ಗಳದ್ದಾಗಿದೆ. ಇಷ್ಟೊಂದು ಭಾರೀ ಪ್ರಮಾಣದ ಹಣವನ್ನು ಡಿಕೆ ಶಿವಕುಮಾರ್ ಎಲ್ಲಿಂದ ಹೂಡಿಕೆ ಮಾಡಿದರು, ಆ ಹಣದ ಮೂಲ ಯಾವುದು ಎಂಬುದರ ಬಗ್ಗೆ ಇಡಿ ಅಧಿಕಾರಿಗಳು ಬೆನ್ನು ಹತ್ತಿದ್ದಾರೆ. ಈಗಾಗಲೇ ಇಡಿ ಕಸ್ಟಡಿಯಲ್ಲಿ ನಿರಂತರ ವಿಚಾರಣೆ ಎದುರಿಸುತ್ತಿರುವ ಡಿಕೆಶಿಗೆ ಈ ಬಳ್ಳಾರಿ ಸೋಲಾರ್ ಪವರ್ ಪ್ಲಾಂಟ್ ಹೊಸ ಸಂಕಷ್ಟ ತಂದೊಡ್ಡಿದೆ.