ಉಪಚುನಾವಣೆಯೇ ನಿಮ್ಮ ದರ್ಪಕ್ಕೆ ತಕ್ಕ ಪಾಠ ಕಲಿಸಲಿದೆ – ಎಚ್‌ಡಿಕೆ

0
206

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟೀಕೆಗಳಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಭರ್ಜರಿ ತಿರುಗೇಟು ನೀಡಿದ್ದಾರೆ. ದೇವೇಗೌಡರ ನಾಯಕತ್ವ ಮತ್ತು ಜನತಾದಳದಿಂದಲೇ ರಾಜಕೀಯವಾಗಿ ಮೇಲೆ ಬಂದು, ಜೆಡಿಎಸ್ ಪಕ್ಷದಿಂದಲೇ ಉಪ ಮುಖ್ಯಮಂತ್ರಿವರೆಗೂ ಬೆಳೆದು, ಇಂದು ಮೇಲೆರೆದ ಏಣಿಯನ್ನೇ ಒದ್ದು ದರ್ಪದಿಂದ ಮೇರೆಯುತ್ತಿದ್ದಾರೆ. ಆದರೆ ಮುಂಬರುವ ಉಪಚುನಾವಣೆಯೇ ಸಿದ್ದರಾಮಯ್ಯನವರ ದರ್ಪಕ್ಕೆ ತಕ್ಕ ಪಾಠ ಕಲಿಸಲಿದೆ ಎಂದಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕೆಲ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು, ಆಗ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ “ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ. ಅದೊಂದು ಡ್ರಾಮಾ ಕಂಪನಿ. ಇನ್ನು ಕುಮಾರಸ್ವಾಮಿ ಶಿರಾ ಕ್ಷೇತ್ರದಲ್ಲೂ ಅಳ್ತಿದ್ದಾನಂತೆ.. ಅವನ ಮಾತು ನಂಬಿ ಮತ ನೀಡಬೇಡಿ” ಎಂದು ವ್ಯಂಗ್ಯವಾಡಿದ್ದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿದ ಟೀಕೆಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಟು ಶಬ್ದಗಳಲ್ಲಿ ಖಂಡಿಸಿದ್ದಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿ ಮಾಡಿಕೊಂಡು ವಾಗ್ದಾಳಿ ನಡೆಸಿದ್ದು, “ದೇಶದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ನಾನು ನೋಡಿದ್ದೇನೆ. ಲೋಕಸಭೆಯಲ್ಲಿ ಕನಿಷ್ಠ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಸಾಧ್ಯವಾಗದ ಮಟ್ಟಕ್ಕೆ ಕುಸಿದಿದೆ. ಕಾಂಗ್ರೆಸ್ ಇಂದು ದೇಶದ ಯಾವ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ ಹೇಳಿ..?ಕಾಂಗ್ರೆಸ್ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ..? ಜೆಡಿಎಸ್ ಉಪ್ಪು ತಿಂದ ಆ ಮಹಾನ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದು ಸಿದ್ದರಾಮಯ್ಯನಿಗೆ ಪ್ರಶ್ನಿಸಿದ್ದಾರೆ.

“ಮಿತ್ರ ಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊAಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲವೆಂದು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲವೆಂದು” ಎಂದು ವಾಗ್ದಾಳಿ ನಡೆಸಿದ್ದಾರೆ.


೨೦೧೮ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ‘ಅಪ್ಪನಾಣೆ’ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲ್ಲ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಸವಾಲು ಹಾಕಿದ್ದ ಸಿದ್ದರಾಮಯ್ಯನವರ ಪರಿಸ್ಥಿತಿ ಏನಾಯಿತು ಎಂಬುದನ್ನು ನೋಡಿದ್ದೇನೆ. ಸಿದ್ದರಾಮಯ್ಯ ಹಾಕಿದ್ದ ಸವಾಲುಗಳನ್ನು ರಾಜ್ಯದ ಜನ ಸೋಲಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯನಿಗೆ ತಕ್ಕ ಪಾಠ ಕಲಿಸಿದ್ದಾರೆ, ಆದರು ಸಿದ್ದರಾಮಯ್ಯನವರ ದರ್ಪ ಕಡಿಮೆ ಆಗಿಲ್ಲ. ಮುಂಬರುವ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಇನ್ನು ಉಪಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದು-ಎಚ್‌ಡಿಕೆ ನಡುವಿನ ರಾಜಕೀಯ ಸಮರ ತಾರಕಕ್ಕೇರಿದೆ. ಮೂರು ಪಕ್ಷಗಳು ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲು ಭಾರೀ ರಣತಂತ್ರಗಳನ್ನೇ ಹೆಣೆಯುತ್ತಿವೆ.

LEAVE A REPLY

Please enter your comment!
Please enter your name here