ವಿಷ್ಣು ಹಾಗೂ ಎಸ್ ಪಿ ಬಿ ಅವರ ಸಂಬಂಧ ನೆನೆದು ಕಣ್ಣೀರಿಟ್ಟ ಭಾರತಿ ವಿಷ್ಣುವರ್ಧನ್ !

0
132

ಮಾರಣಾಂತಿಕ  ಕಾಯಿಲೆ ಕೊರೋನಾ ಸೋಂಕಿನ  ಕಾರಣ ಆಗಸ್ಟ್​ 5 ರಂದು ಖ್ಯಾತ ಗಾಯಕ ಎಸ್‌ಪಿಬಿ  ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಆರೋಗ್ಯವು  ದಿನದಿಂದ ದಿನಕ್ಕೆ ಬಹಳ ಹದೆಗೆಟ್ಟಿದ್ದು, ಆಗಸ್ಟ್​ 13 ರ ಬಳಿಕ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೆಂಟಿಲೇಟರ್​ ಅಳವಡಿಸಿ ನುರಿತ ತಜ್ಞರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಎಸ್ ಪಿ ಬಿ ಅವರು ಎಕ್ಮೋ ಮಷಿನ್​, ವೆಂಟಿಲೇಟರ್​​ನಲ್ಲೇ ಇದ್ದಾರೆ, ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ಹೆಲ್ತ್​​ ಬುಲೆಟಿನ್‌ನಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಇತ್ತೀಚೆಗೆ ಅಷ್ಟೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿತ್ತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದರು. ಜೊತೆಗೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಥಮ್ಸ್​ಅಪ್​ ತೋರಿಸಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಇದನ್ನು ನೋಡಿದ ಅಭಿಮಾನಿಗಳು ಕೊಂಚ ನಿರಾಳರಾಗಿದ್ದರು. ಆದರೆ, ಈಗ ಮತ್ತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುವುದರಿಂದ ಅಭಿಮಾನಿಗಳು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿರುವುದರಿಂದ ದೇಶದಾದ್ಯಂತ ಎಸ್ ಪಿ ಬಿ ಅವರಿಗಾಗಿ ಪ್ರಾರ್ಥಿಸಲಾಗುತ್ತಿದೆ. ಚಿತ್ರರಂಗದವರಿಂದ ಹಿಡಿದು, ಸಾಮಾನ್ಯ ಜನತೆಯ ತನಕ  ಎಲ್ಲರೂ ಸಹ ಎಸ್ ಪಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ದೇವರ ಮೊರೆ ಹೋಗಿದ್ದಾರೆ. ಇದೀಗ  ಭಾರತಿ ವಿಷ್ಣುವರ್ಧನ್ ಅವರು ಕೂಡ ಎಸ್ ಪಿ ಬಿ ಅವರ ಕುರಿತು ಮಾತನಾಡಿದ್ದು, ಎಸ್ ಪಿ ಬಿ ಅವರಿಗೂ ವಿಷ್ಣುವರ್ಧನ್ ಅವರಿಗೂ ಇದ್ದ ಸಂಬಂಧದ ಬಗ್ಗೆ ತಿಳಿಸಿದ್ದಾರೆ.

ಈ ಕುರಿತು ವಿಡಿಯೋ ಒಂದನ್ನು ಮಾಡಿರುವ ಭಾರಿತಿ ವಿಷ್ಣುವರ್ಧನ್ ಅವರು, ತಮ್ಮ ಪತಿ  ಹಾಗೂ ಎಸ್ ಪಿ ಬಿ ಅವರು ಎರಡು ದೇಹವಾಗಿದ್ದರು ಒಂದೇ ಆತ್ಮದಂತಿದ್ದರು. ಎಸ್ ಪಿ ಬಿ ಅವರನ್ನು ನೋಡಿದರೆ ವಿಷ್ಣುವರ್ಧನ್ ಅವರನ್ನು ನೋಡಿದಂತೆಯೇ ಆಗುತ್ತಿತ್ತು ಎಂದು ಹೇಳಿ ಭಾವುಕರಾಗಿದ್ದಾರೆ.
“ನಮ್ಮ ಬಾಲಸುಬ್ರಹ್ಮಣ್ಯ ಅವರು ಕೊರೊನಾದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನರಳುತ್ತಿದ್ದಾರೆ. ಈ ವಿಚಾರವನ್ನು  ಕೇಳಿ ನನಗೆ ಬಹಳವೇ ಬೇಸರವಾಗಿದೆ. ಇಂತಹ ಮಹಾನ್ ಗಾಯಕರು, ಮಹಾನ್ ವ್ಯಕ್ತಿ ಪ್ರತಿಯೊಬ್ಬರಿಗೂ ಆತ್ಮೀಯವಾಗಿ ಇದ್ದವರು. ಆದಷ್ಟು ಬೇಗ ಅವರು ನಮ್ಮ ಮನೆಗಳಿಗೆ ಬರಲಿ. ಅವರನ್ನು ನಾವು ಮಿಸ್ ಮಾಡೋಕೆ ಆಗಲ್ಲ. ಅವರನ್ನು ನೋಡಿದಾಗಲೆಲ್ಲ ನಮ್ಮ ಯಜಮಾನ್ರು ನೆನಪಾಗುತ್ತಾರೆ. ಯಾಕೆಂದರೆ ಅವರಿಬ್ಬರದ್ದು ಎರಡು ಶರೀರ ಆದರೂ ಒಂದೇ ಶಾರೀರ. ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಬಾಲು ಅವರೇ ಧೈರ್ಯವಾಗಿರಿ, ನಿಮಗೆ ಏನು ಆಗುವುದಿಲ್ಲ.  ನೀವು ಖಂಡಿತ ಆರೋಗ್ಯವಾಗಿ ಮರಳಿ ಬರುತ್ತೀರಿ.. ಎಸ್ ಪಿ ಬಿ ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ” ಎಂದು ಬಹಳ ನೋವಿನಿಂದ ಮಾತನಾಡಿದ್ದಾರೆ.

ಇನ್ನು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಎಸ್ ಪಿ ಬಿ ಅವರ ಕುರಿತು  ಮಾತನಾಡಿರುವ  ಈ ವೀಡಿಯೋವನ್ನು‌ ನಟ ಅನಿರುದ್ಧ್ ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ  ಆದಷ್ಟು ಬೇಗ ಅವರು ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ. ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ ಸಫಲವಾಗಲಿ. ಎಸ್ ಪಿ ಬಿ ಅವರು ಬೇಗ ಗುಣಮುಖರಾಗಿ ಮರಳುವಂತಾಗಲಿ. ಎಂಬುವ ಸಂದೇಶವನ್ನು ಕೂಡ ರವಾನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here