ಮನುಕುಲಕ್ಕೆ ಪ್ರಕೃತಿ ನೀಡಿದ ಉಡುಗೊರೆ ಈ ಜೇನುತುಪ್ಪ

0
192

ಜೇನುತುಪ್ಪ ಮನುಕುಲಕ್ಕೆ ಪ್ರಕೃತಿಯ ಉಡುಗೊರೆ. ಶತಶತಮಾನಗಳ ಕಾಲದಿಂದಲೂ ಬಳಸಲ್ಪಡುವ ಜೇನುತುಪ್ಪ ಹಲವಾರು ಕಾಯಿಲೆಗಳನ್ನು ಗುಣಪಡಿಸಬಲ್ಲದು. ಅಡುಗೆಯಿಂದ ಹಿಡಿದು, ಬೇಕರಿ ಉಪ್ತನ್ನಗಳಲ್ಲೂ, ಚಹಾದಂತಹ ಪಾನೀಯಗಳಲ್ಲೂ ಹಾಗೂ ಔಷಧೀಯ ವಸ್ತುವಾಗಿಯೂ ಇಂದು ಜೇನು ಹೆಚ್ಚು ಉಪಯುಕ್ತಕಾರಿಯಾಗಿದೆ. ನಮ್ಮ ಪೂರ್ವಜರು ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ಅರಿತಿದ್ದರು. ಜೇನು ನಂಜುವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಜೇನುತುಪ್ಪ ಹಲವು ಆರೋಗ್ಯಕರವಾದ ಲಾಭವನ್ನು ನೀಡಬಲ್ಲದು. ಅವುಗಳ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

ಸಾಂಪ್ರದಾಯಿಕ ಔಷಧಗಳಲ್ಲಿ, ಜೇನುತುಪ್ಪ ತ್ವರಿತ ಶಕ್ತಿ ವರ್ಧನೆಯ ಆಹಾರ. ರಾಸಾಯನಿಕವಾಗಿ ಜೇನು ಹಲವು ಸಕ್ಕರೆಗಳು ಮತ್ತು ಇತರ ಸಂಯುಕ್ತಗಳನ್ನು ಹೊಂದಿರುತ್ತದೆ. ಜೇನಿನಲ್ಲಿರುವ ಶರ್ಕರಪಿಷ್ಟಗಳ ಪೈಕಿ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಹೆಚ್ಚಾಗಿರುತ್ತವೆ. ಉಳಿದಂತೆ ಜೇನು ಅಲ್ಪ ಪ್ರಮಾಣದಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಗಳನ್ನು ಸಹ ಹೊಂದಿದೆ.

ಉಷ್ಣ ಸಂಬಂಧಿತ ಸಮಸ್ಯೆಗಳಾದ, ಕಫ, ವಾಂತಿ, ಗ್ಯಾಸ್ ಸಮಸ್ಯೆಗಳು ಮತ್ತು ರಕ್ತದ ಕಲ್ಮಶದ ಚಿಕಿತ್ಸೆಗಾಗಿ ಜೇನುತುಪ್ಪ ಸಿದ್ದೌಷಧ. ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿಕುಡಿದರೆ, ಅದು ಕೆಂಪು ರಕ್ತಕಣಗಳ (RBC) ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ದೇಹದಲ್ಲಿನ ವಿವಿಧ ಭಾಗಗಳಿಗೆ ಸಾಗಿಸಲು ಆರ್-ಬಿ-ಸಿಯು ಕಾರಣವಾಗಿದೆ. ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ. ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಕೂಡ ಜೇನುತುಪ್ಪವನ್ನು ಸೇವಿಸಲಾಗುತ್ತದೆ.

ಕೀಮೋಥೆರಪಿ ರೋಗಿಗಳಲ್ಲಿ ಬಿಳಿಯ ರಕ್ತಕಣಗಳ (WBC) ಎಣಿಕೆ ಕಡಿಮೆಯಾಗುವುದನ್ನು ಜೇನುತುಪ್ಪ ಸೇವನೆ ತಡೆಗಟ್ಟುತ್ತದೆ ಎಂದು ಹೇಳಲಾಗುತ್ತದೆ. ಕೀಮೋಥೆರಪಿಯ ಅವಧಿಯಲ್ಲಿ, ದಿನಕ್ಕೆ ಎರಡು ಟೀಚಮಚ ಚಿಕಿತ್ಸಕ ಜೇನುತುಪ್ಪವನ್ನು ಸೇವಿಸಿದ ನಂತರ, ಬಿಳಿಯ ರಕ್ತ ಕಣಗಳು ಕಡಿಮೆಯಾಗುವ ಅಪಾಯವಿದ್ದ 40% ನಷ್ಟು ರೋಗಿಗಳಲ್ಲಿ, ಈ ಸಮಸ್ಯೆಯ ಮರುಕಳಿಸಿಲ್ಲ ಎಂದು ಕೆಲ ಸಂಶೋಧನೆಗಳು ತಿಳಿಸಿವೆ.

ಸಕ್ಕರೆಯ ಸೇವನೆ ಮಧುಮೇಹಿಗಳಂತಹ ರೋಗಿಗಳಲ್ಲಿ ವ್ಯತಿರಿಕ್ತ ಪರಿಣಾಮಬೀರುತ್ತದೆ. ಸಕ್ಕರೆಗೆ ಒಂದು ಉತ್ತಮ ಪರ್ಯಾಯವೆಂದರೆ ಜೇನುತುಪ್ಪ. ರಾಸಾಯನಿಕ ರಚನೆಯಲ್ಲಿ ಜೇನುತುಪ್ಪವು, ಸರಳವಾದ ಸಕ್ಕರೆಗಳನ್ನು ಒಳಗೊಂಡಿರುತ್ತದೆಯಾದರೂ, ಇದು ಬಿಳಿ ಸಕ್ಕರೆಗಿಂತ ಭಿನ್ನವಾಗಿದೆ. ಇದು ಸುಮಾರು ಶೇ. ಶೇ.30ರಷ್ಟು ಗ್ಲೂಕೋಸ್ ಮತ್ತು ಶೇ. 40ರಷ್ಟು ಫ್ರಕ್ಟೋಸ್ಗಳನ್ನು ಹೊಂದಿರುತ್ತದೆ – ಇವೆರಡು ಮೊನೊಸ್ಯಾಕರೈಡ್ ಅಥವಾ ಸರಳ ಸಕ್ಕರೆಗಳು. ಶೇ. 20ರಷ್ಟು ಇತರ ಸಂಕೀರ್ಣ ಸಕ್ಕರೆಗಳನ್ನು ಹೊಂದಿರುತ್ತದೆ. ಜೇನುತುಪ್ಪದಲ್ಲಿ ಡೆಕ್ಸ್ಟ್ರೈನ್ ಪಿಷ್ಟದ ನಾರು ಸಹ ಇದೆ. ಈ ಸಂಯೋಜನೆಯು, ದೇಹದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

1-3 ಚಮಚಗಳಷ್ಟು ಜೇನುತುಪ್ಪವನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರಸಿ, ದಿನಕ್ಕೆ ಎರಡು ಬಾರಿಯಂತೆ ಸೇವಿಸಿದರೆ ನರಮಂಡಲದ ದೌರ್ಬಲ್ಯ ನಿವಾರಣೆಗೆ ಸಹಾಯಕಾರಿ. ಅಲ್ಲದೇ ದೇಹದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ತರಚು ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚಿದರೆ, ಅದು ಗಾಯವನ್ನು ಬೇಗ ಗುಣ ಮಾಡುತ್ತದೆ ಹಾಗೂ ಗಾಯದ ಕಲೆಯನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಜೇನುತುಪ್ಪದ ಸೇವನೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿಕಾಯಗಳನ್ನು ಪ್ರಚೋದಿಸುತ್ತದೆ ಮತ್ತು ಹಾನಿಕಾರಕ ಸೂಕ್ಷ್ಮಜೀವಿ ಚಟುವಟಿಕೆಯನ್ನು ನಿಯಂತ್ರಿಸುತ್ತದೆ.

LEAVE A REPLY

Please enter your comment!
Please enter your name here