ಎರಡು ದಿನ ಮರದಲ್ಲಿ ಕೂತ ಬೆಳಗಾವಿ ದಂಪತಿ

0
389

ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಊಹಿಸಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ಘಟನೆಯೊಂದೇ ಸಾಕ್ಷಿ. ಹುಕ್ಕೇರಿಯ ದಂಪತಿಯೊಬ್ಬರು ಯಮರಾಯನನ್ನು ತಮ್ಮ ಪಕ್ಕದಲ್ಲಿ ಇಟ್ಟುಕೊಂಡು ಆತನ ಜೊತೆ ನಿರಂತರವಾಗಿ 50 ಗಂಟೆಗಳ ಕಾಲ ಹೋರಾಟ ಮಾಡಿ ಗೆದ್ದು ಬಂದಿದ್ದಾರೆ.
ಎರಡು ದಿನ ಮರದ ಮೇಲೆ ಕೂತು ಬದುಕಿನ ಬರಲು ಈ ದಂಪತಿ ಏನೆಲ್ಲಾ ಸಾಹಸ ಮಾಡಿದ್ದಾರೆ ಗೊತ್ತಾ? ಅವರ ಧೈರ್ಯಕ್ಕೆ ನಿಜಕ್ಕೂ ಶಹಭಾಸ್‍ ಗಿರಿಯನ್ನು ನೀಡಲೇಬೇಕು.

ಪ್ರತಿ ಕ್ಷಣವೂ ಹೋರಾಟ ಮಾಡಿ 50 ಗಂಟೆಗಳ ಕಾಲ ಸೆಣಸಾಡಿ ಬದುಕಿ ಬಂದ ಘಟನೆ ಕೇಳಿದರೆ ಎಂತಹವರಿಗೂ ಮೈ ರೋಮಾಂಚನವಾಗುತ್ತದೆ.
35 ವರ್ಷದ ಕಾಡಪ್ಪ, 30 ವರ್ಷದ ರತ್ನವ್ವನನ್ನು 10 ವರ್ಷದ ಹಿಂದೆ ಮದುವೆಯಾದರು. ಕಾಡಪ್ಪನಿಗೆ ಅಂಗವೈಕಲ್ಯವಿದ್ದ ಕಾರಣ ಬೇಗ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬಳಿಯಿದ್ದ ಒಂದು ತೋಟದಲ್ಲಿ ಕಾಡಪ್ಪ ಮತ್ತು ರತ್ನವ್ವ ಕೆಲಸ ಮಾಡುತ್ತಿದ್ದರು. ಅಲ್ಲದೇ ತೋಟದಲ್ಲೇ ಇರುವ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಇದ್ದಕ್ಕಿದ್ದ ಹಾಗೆ ತೋಟದ ಪಕ್ಕದಲ್ಲಿದ್ದ ನದಿ ನೀರಿನ ಪ್ರಮಾಣ ಹೆಚ್ಚುತ್ತಿದ್ದನ್ನು ಕಂಡು ತೋಟದ ಮಾಲೀಕರಿಗೆ ಕರೆ ಮಾಡಿ ತಿಳಿಸಿದ. ಅಲ್ಲದೇ, ಇಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ವಾಪಸ್ಸ ಹಳ್ಳಿಗೆ ತೆರಳುತ್ತೇವೆ ಎಂದೂ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಯಜಮಾನ ನೀರು ಕಡಿಮೆಯಾಗುತ್ತದೆ. ನೀವು ಅಲ್ಲಿಯೇ ಇರಿ ಎಂದಿದ್ದರು. ಸಂಜೆ ವೇಳೆಗೆ ಏಕಾಏಕಿ ಕಾಡಪ್ಪ ಮತ್ತು ರತ್ನವ್ವ ವಾಸವಾಗಿದ್ದ ತೋಟಕ್ಕೆ ನುಗ್ಗಿತು.

ಹಾಗಾಗಿ ವಿಧಿಯಿಲ್ಲದೇ ತೋಟದ ಮನೆ ಮೇಲೆ ಹೋಗಿ ಕಾಡಪ್ಪ ದಂಪತಿ ಕೂತು ಕೊಂಡರು. ಕತ್ತಲಾಗುತ್ತಾ ಬಂದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಇದೇ ವೇಳೆ ಏಕಾಏಕಿ ತೋಟದ ಮನೆಯ ಗೋಡೆ ಕುಸಿಯಿತು. ಆಗ ತಕ್ಷಣ ಪ್ಲಾನ್‍ ಮಾಡಿದ ಕಾಡಪ್ಪ ಪಕ್ಕದಲ್ಲಿಯೇ ಇದ್ದ ಮರಕ್ಕೆ ತನ್ನ ಪತ್ನಿಯನ್ನು ಹತ್ತಿಸಿ, ಅವರೂ ಹತ್ತಿದರು.
ನೀರಿನ ಪ್ರಮಾಣ ಬೆಳೆಯುತ್ತಲೇ ಇತ್ತು. ಮರದಿಂದ ಜಾರಿದರೆ ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿ ಮತ್ತೊಂದು ಉಪಾಯ ಮಾಡಿದರು ಕಾಡಪ್ಪ. ತನ್ನ ಬಳಿಯಿದ್ದ ಹಗ್ಗವೊಂದನ್ನು ತನ್ನ ಪತ್ನಿಗೆ ನೀಡಿ ಮರಕ್ಕೆ ಗಟ್ಟಿಯಾಗಿ ನಿನ್ನನ್ನು ಕಟ್ಟಿಕೋ ಎಂದರು.

ಆತ ಹೇಳಿದಂತೆ ರತ್ನವ್ವ ತನ್ನನ್ನು ಗಟ್ಟಿಯಾಗಿ ಮರಕ್ಕೆ ಕಟ್ಟಿಕೊಂಡರು. ಇದಾದ ನಂತರ ಕಾಡಪ್ಪನವರು ತಮ್ಮ ಲುಂಗಿಯನ್ನು ತೆಗೆದು ಮರಕ್ಕೆ ಗಟ್ಟಿಯಾಗಿ ಕಟ್ಟಿಕೊಂಡರು. ಇದರಿಂದ ಅವರು ಕೈ ಕಾಲು ಜಾರಿ ನೀರಿಗೆ ಬೀಳುವುದನ್ನು ತಡೆಯಿತು. ಕೆಲವೇ ಅಂತರದಲ್ಲಿ ಬೀಕರವಾಗಿ ಹರಿಯುತ್ತಿರುವ ನೀರು ಮತ್ತು ಚಳಿ, ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ. ಆದರೂ ಇಬ್ಬರೂ ಪರಸ್ಪರ ಧೈರ್ಯ ಹೇಳಿಕೊಳ್ಳುತ್ತಿದ್ದರು. ರಾತ್ರಿ, ಹಗಲು ಕಳೆದರೂ ಯಾರೂ ಸಹಾಯಕ್ಕೆ ಮಾತ್ರ ಧಾವಿಸಲಿಲ್ಲ.

ಇದೇ ಭಂಗಿಯಲ್ಲಿ ಎರಡು ರಾತ್ರಿ ಮತ್ತು ಎರಡು ಹಗಲನ್ನು ಕಳೆದರು ಈ ದಂಪತಿ. ಅದುವರೆಗೂ ಯಾರೂ ಸಹಾಯಕ್ಕೆ ಧಾವಿಸಲಿಲ್ಲ. ದೇವರ ದಯೆಯಿಂದ ಕೇಂದ್ರದ ಎನ್‍ಆರ್‍ಡಿಎಫ್‍ ತಂಡದ ಕಣ್ಣಿಗೆ ಈ ದಂಪತಿ ಬಿದ್ದರು. ಆದರೆ ಆ ದಂಪತಿಗಳನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಆ ಜಾಗ ಹಾಗೆ ಅಷ್ಟು ಕಠಿಣವಾಗಿತ್ತು. ಆರಂಭದಲ್ಲಿ ರಕ್ಷಣಾ ತಂಡ ಅವರನ್ನು ರಕ್ಷಿಸುವಲ್ಲಿ ವಿಫಲವಾಯಿತು. ಆದರೆ ಸತತ ಪ್ರಯತ್ನದಿಂದಾಗಿ ಎನ್‍ಆರ್‍ಡಿಎಫ್‍ ತಂಡ ಆ ದಂಪತಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು. ಕಾಡಪ್ಪ ಮತ್ತು ರತ್ನವ್ವ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಧೈರ್ಯಕ್ಕೆ ನಿಜಕ್ಕೂ ಮೆಚ್ಚಬೇಕು

LEAVE A REPLY

Please enter your comment!
Please enter your name here