ರೈತರಾಗುವುದು ವರವೋ ? ಶಾಪವೋ ?

0
181

ಅನ್ನದಾತ – ದೇಶದ ಬೆನ್ನೆಲುಬು – ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ..

ಈ ಕ್ಷಣದಲ್ಲಿ ” ತಿನ್ನವವರಿಗೆ ವರ, ಬೆಳೆಯುವವರಿಗೆ ಶಾಪ “

ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ ಮಂಗನಾಗುತ್ತಿರುವ ಈ ಸನ್ನಿವೇಶದಲ್ಲಿ ರೈತ ಮಾತ್ರ ಆಗಲೂ ಮಂಗನೇ ಈಗಲೂ ಮಂಗನೇ ಎಂದು ವಿಷಾದದಿಂದ, ದುಃಖದಿಂದ ಮತ್ತು ಆಕ್ರೋಶದಿಂದ ಹೇಳಬೇಕೆನಿಸುತ್ತದೆ.

ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಮುನ್ನಡೆಯುತ್ತಿರುವಾಗ ಶಿಕ್ಷಣ ಸಾಹಿತ್ಯ ಸಂಗೀತ ವಿಜ್ಞಾನ ಆರೋಗ್ಯ ಆಡಳಿತ ಸಾರಿಗೆ ಸಂಪರ್ಕ ದಿನದಿನಕ್ಕೂ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವಾಗ ಭಾರತದ ಕೃಷಿ ಮಾತ್ರ ಎಲ್ಲೋ ಕೆಲವು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಮೂಲ ನಿಯಮಗಳು ಮಾತ್ರ ಇನ್ನೂ ಗತಕಾಲದ ಅಂಶಗಳನ್ನೇ ಅಳವಡಿಸಿಕೊಂಡಿದೆ.

ಭೂಮಿಯ ಉಪಯೋಗ, ಬಿತ್ತನೆ, ನೀರಾವರಿ, ಸಸ್ಯಗಳ ಬೆಳವಣಿಗೆ, ಕಟಾವು, ಸಂಗ್ರಹಣೆ, ಮಾರುಕಟ್ಟೆ,
ಬೆಲೆ ನಿಗದಿ, ಲಾಭ ಹಣದ ಉಪಯೋಗ, ನಷ್ಟದ ಪರಿಸ್ಥಿತಿಯ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ನಂಬಿಕೆಗಳು, ಅರಿವು ಮತ್ತು ಅವರ ಒಟ್ಟು ವ್ಯಕ್ತಿತ್ವ ಸಮಾಜದ ದೃಷ್ಟಿಯಲ್ಲಿ ಇನ್ನೂ ಹಾಸ್ಯಾಸ್ಪದವಾಗಿಯೇ ಇದೆ. ಅವರನ್ನು ಶೋಷಿಸಲು ಯಾವ ತಂತ್ರಗಳೂ ಬೇಡ. ಆತನ ವ್ಯಕ್ತಿತ್ವವೇ ಶೋಷಣೆಯನ್ನು ಸ್ವತಃ ತಾನೇ ಒಪ್ಪಿಕೊಳ್ಳುವ ಮನಸ್ಥಿತಿ ಹೊಂದಿದೆ.

ವ್ಯಕ್ತಿ ಮೂಲಭೂತವಾಗಿ ಪ್ರಜ್ಞಾವಂತನಾಗಿದ್ದರೆ ಆತ ಮಾಡುವ ಕೆಲಸಗಳು ಸಹ ಘನತೆಯಿಂದ ಕೂಡಿರುತ್ತದೆ. ವೈದ್ಯನೇ ಇರಬಹುದು, ಇಂಜಿನಿಯರೇ ಇರಬಹುದು, ಚಾಲಕ ಶಿಕ್ಷಕ ವಕೀಲ ರಾಜಕಾರಣಿ ವ್ಯಾಪಾರೋದ್ಯಮಿ ಯಾರೇ ಆಗಲಿ ಧೃಡ ಮನಸ್ಸಿನ ಅರಿವಿರುವ ವ್ಯಕ್ತಿತ್ವ ಅವನದಾಗಿದ್ದರೆ ಆತ ಯಾವುದೇ ವ್ಯವಸ್ಥೆಯಲ್ಲಿ ಕನಿಷ್ಠ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು.

ಆದರೆ ಮೂಲ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆತ ಸೋಲುವ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯೇ ಹೆಚ್ಚು.

ವಾಸ್ತವವಾಗಿ ಭಾರತೀಯ ಬಹುತೇಕ ರೈತರು ಸಾಮಾನ್ಯ ಜ್ಞಾನದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ಸ್ಪರ್ಧಾತ್ಮಕ ಬದಲಾವಣೆಗಳನ್ನು ಗಮನಿಸಲೇ ಸಾಧ್ಯವಾಗದಂತ ಕತ್ತಲೆಯಲ್ಲಿ ಮುಳುಗುತ್ತಿದ್ದಾರೆ. ರಾಜಕಾರಣಿಗಳ, ಮಧ್ಯವರ್ತಿಗಳ, ವ್ಯಾಪಾರಿ ವಾಣಿಜ್ಯೋದ್ಯಮಿಗಳ ಬಲೆಯೊಳಗೆ ಬಹು ಸುಲಭವಾಗಿ ಸಿಕ್ಕಿಹಾಕಿಕೊಂಡಿದ್ದಾರೆ.

ಬಲಿಷ್ಠ ರಕ್ಷಣಾತ್ಮಕ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರದ ವಿರುದ್ಧ ಇನ್ನೂ ಹಳೆಯ ಅಸ್ತ್ರಗಳಾದ ಪ್ರತಿಭಟನೆ, ಮುತ್ತಿಗೆ, ಉಪವಾಸ, ಸತ್ಯಾಗ್ರಹ ಎಂಬ ಮೊಂಡಾದ ಕತ್ತಿಯನ್ನು ಉಪಯೋಗಿಸುತ್ತಿದ್ದಾರೆ.

ಅತಿಯಾದ ಜನಸಂಖ್ಯೆಯ ಪರಿಣಾಮ ಮತ್ತು ಬಡತನ ಅಜ್ಞಾನದ ಕಾರಣದಿಂದ ಅನಿವಾರ್ಯವಾಗಿ ಒಡೆದು ಆಳುವ ರಾಜಕೀಯ ಪಕ್ಷಗಳ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಅತಿಯಾದ ಹಣದ ಹರಿವಿನಿಂದ ಹಾಗು ಹಣದ ಮಹತ್ವದಿಂದ ರೈತನೆಂಬುದು ಶಾಪವಾಗಿ ಮಾರ್ಪಟ್ಟಿದೆ.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬುದನ್ನು ಮರೆಯದಿರಿ. ಮತ ಎಂಬುದು ನಮ್ಮ ಮತಿಯ ( ಮನಸ್ಸಿನ ) ಅಸ್ತ್ರವಾದಾಗ…….

ಒಂದು ವೇಳೆ ಹೊಸ ನಾಯಕತ್ವದ ಹೊಸ ಚಿಂತನೆಯ ಹೊಸ ಗಾಳಿಯೊಂದು ಬಲವಾಗಿ ರೈತರ ಮನಸ್ಸಿನಲ್ಲಿ ಬೀಸಿ ಅವರನ್ನು ಪ್ರಬುದ್ದತೆಯೆಡಗೆ ಆಧುನಿಕತೆಯೆಡೆಗೆ,
ಸ್ವತಂತ್ರ ಚಿಂತನೆಯೆಡೆಗೆ ಮುನ್ನಡೆಸಿದರೆ…..
ವಿಧಾನಸೌದ – ಪಾರ್ಲಿಮೆಂಟು, ಅಧಿಕಾರಶಾಹಿ, ವ್ಯಾಪಾರಿಗಳು, ಮಧ್ಯವರ್ತಿಗಳು,
ವೃತ್ತಿನಿರತರು,
ಅಷ್ಟೇ ಏಕೆ,
ಇಡೀ ವ್ಯವಸ್ಥೆಯೇ ಬುಡಮೇಲಾಗಿ

” ರೈತನೇ ಅನ್ನದಾತ. ನಮ್ಮ ಬದುಕಿನ ಜೀವ ದ್ರವ್ಯ ರೈತನೇ ”

ಎಂದು ಕೂಗಿ ಹೇಳುತ್ತಾ ಎಲ್ಲರೂ ಆತನ ಬಗ್ಗೆ ಘನತೆಯಿಂದ ನಡೆದುಕೊಳ್ಳುವ ದಿನಗಳು ಬರುತ್ತದೆ.

ಮುಖ್ಯವಾಗಿ ರೈತನನ್ನು ಹಾಸ್ಯಾಸ್ಪದವಾಗಿ ನೋಡುವ ಮನರಂಜನಾ ಉದ್ಯಮ, ರಾಜಕೀಯ ವ್ಯವಸ್ಥೆ, ವಾಣಿಜ್ಯೋಧ್ಯಮ, ಮಧ್ಯವರ್ತಿ ವೃತ್ತಿಯಲ್ಲಿರುವವರು ತಾವೇ ಹಾಸ್ಯಾಸ್ಪದವಾಗುತ್ತಾರೆ.

LEAVE A REPLY

Please enter your comment!
Please enter your name here