ಬಿಜಿ_ಅಣ್ಣಿಗೇರಿ ಶಿಕ್ಷಣ ಸಂತರ ಮರಣದಲೂ ಮಹಾ ಮಹಿಮೆ

0
499

ಬಿ.ಜಿ.ಅಣ್ಣಿಗೇರಿ ಸರ್ ಜಗಕೆಲ್ಲ ಗುರುವಾದವರು. ಗ್ರಾಮೀಣ ಬಡ ಮಕ್ಕಳಿಗೆ ಸರಿ ಸುಮಾರು ಆರು ದಶಕಗಳ ಕಾಲ ಉಚಿತವಾಗಿ ಇಂಗ್ಲಿಷ್ ಮತ್ತು ಗಣಿತ ಕಲಿಸಿ ಬದುಕ ಕಲ್ಪಿಸಿದ ಅಕ್ಷರ ದಾಸೋಹಿ. ಇವರ ಬದುಕು ತೆರೆದಿಟ್ಟ ಪುಸ್ತಕ, ಅವರು ಏನೆಂದು ಎಲ್ಲರಿಗೂ ಗೊತ್ತು. ನಾನು ತೊಂಬತ್ತನೇ ಇಸವಿಯಲ್ಲಿ ಗದುಗಿಗೆ ಶಿಕ್ಷಕನಾಗಿ ಬಂದಾಗ ಅಣ್ಣಿಗೇರಿ ಸರ್ ಖೋಲಿ ಪ್ರಖ್ಯಾತ ವಿದ್ಯಾ ಕೇಂದ್ರವಾಗಿತ್ತು. ಮೊದಲ ಸಲ ಭೇಟಿ ಆದಾಗ ಸಾಹೇಬ್ರ ಎಂದು ಕರೆದು ಮುಜುಗರ ಉಂಟು ಮಾಡಿದರು.

“ನೀವು ಕಾಲೇಜಿನ ಪ್ರೊಫೆಸರ್ ನಿಮಗ ನಾವ ಗೌರವ ಕೊಡ್ಲಿಲ್ಲ ಅಂದ್ರ ಹೆಂಗರಿ ಸರ್ ” ಅಂದಾಗ ಮುದ್ದೆಯಾಗಿ ಹೋದೆ. ‘ನಾನಿನ್ನು ತುಂಬ ಕಲಿಯೋದಿದೆ ಸರ್, ದಯವಿಟ್ಟು ಸಾಹೇಬ್ರ ಅಂದು ದೂರ ತಳ್ಳಬ್ಯಾಡ್ರಿ’ ಅಂದಾಗ ನಕ್ಕು ಸುಮ್ಮನಾದರು. ಬಹುಶಃ ಅದು ನನಗೆ ಅವರು ಒಡ್ಡಿದ ಪರೀಕ್ಷೆ ಎನಿಸಿತು. ನಾನದರಲ್ಲಿ ಪಾಸಾದೆ.

ಮುಂದೆ ವಿವೇಕಾನಂದ ಶಕ್ತಿ ಕೇಂದ್ರ ಆರಂಭಿಸುವ ಪ್ರಸಂಗ ಬಂದಾಗ ಮತ್ತೊಮ್ಮೆ ಭೇಟಿ ಆಗಿ ಅಧ್ಯಕ್ಷರಾಗಲು ನಿವೇದಿಸಿಕೊಂಡೆ. ಅದನ್ನು ನಯವಾಗಿ ತಿರಸ್ಕರಿಸಿ ಆ ಜವಾಬ್ದಾರಿಯನ್ನು ನನ್ನ ಕೊರಳಿಗೆ ಕಟ್ಟಿ ಶ್ರೀರಕ್ಷೆಯಾಗಿ ನಿಂತರು. 1993 ರಲ್ಲಿ ಸ್ವಾಮಿ ವಿವೇಕಾನಂದ ಅವರ ಶಿಕ್ಯಾಗೊ ಭಾಷಣದ ಶತಮಾನೋತ್ಸವ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಗದುಗಿನಲ್ಲಿ ವಿವೇಕಾನಂದ-ರಾಮಕೃಷ್ಣ ಆಶ್ರಮ ಆರಂಭಿಸುವ ಪ್ರಸ್ತಾಪ ಬಂದಾಗ ಡಿ.ಆರ್.ಪಾಟೀಲ ಅವರ ನೇತೃತ್ವದಲ್ಲಿ ಆ ಕೆಲಸ ಸರಾಗಗೊಳಿಸಿದರು. ಅವರು ನನ್ನ ಹಾಗೆ ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ಎಂಬ ಹೆಮ್ಮೆ ನನಗಿತ್ತು. ಆಗಾಗ ಕಾಲೇಜು ವೈಭವ ನೆನಪಿಸಿ ಖುಷಿ ಪಡುತ್ತಿದ್ದರು. ಇಂಗ್ಲಿಷ್ grammar ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಕೇಳಿದಾಗ ನನ್ನ ಮುಕ್ತ ಮನಸ್ಥಿತಿಯನ್ನು ಕಂಡು ಖುಷಿಯಿಂದ ವಿವರಿಸಿದ್ದರು.

ಹೊಟ್ಟೆ ಪಾಡಿಗಾಗಿ ಸಂಕೇಶ್ವರ ಪ್ರಕಾಶನಕ್ಕೆ ನೋಟ್ಸ್ ಬರೆಯಲು ಒಪ್ಪಿಕೊಂಡು ಕೆಲವು ಸಮಸ್ಯೆಗಳಿಂದ ತೊಳಲಾಡುವಾಗ ಮಾರ್ಗದರ್ಶನ ಮಾಡಿ ಪರಿಹಾರ ಸೂಚಿಸಿದರು. ಅನೇಕ ಸಭೆ ಸಮಾರಂಭಗಳಲ್ಲಿ ನನ್ನ ಮಾತುಗಳ ಕೇಳಿ ಖುಷಿ ಪಡುತ್ತಿದ್ದರು. ಅವರಿಗೆ 2000 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ವಾರ್ತಾ ಇಲಾಖೆಗಾಗಿ ಅವಲೋಕನ ನಿರ್ದೇಶನ ಮಾಡುವ ಅವಕಾಶ ನನಗೆ ದೊರಕಿತ್ತು.

ನಾನು ಅಣ್ಣಿಗೇರಿ ಸರ್ ಸಾಧನೆ ಮೇಲೆ ಬೆಳಕು ಚೆಲ್ಲುವ ವಿಭಿನ್ನ ರೀತಿಯ ಸಾಕ್ಷ್ಯಚಿತ್ರ ನಿರ್ಮಿಸಿದೆ. ಅವರ ಬದುಕಿನ್ನು ದಾಖಲಿಸಿದ ಮೊದಲ ಡಾಕ್ಯುಮೆಂಟರಿ ಅದಾಗಿತ್ತು.

ಆಗ ಖಾಸಗಿ ವಾಹಿನಿಗಳ ಅಬ್ಬರವಿರಲಿಲ್ಲ. ಸಾಹಿತ್ಯ,ನಿರೂಪಣೆ,ನಿರ್ದೇಶನ ಹೀಗೆ ಎಲ್ಲ ಹೊಣೆ ನಾನೇ ನಿಭಾಯಿಸಿದ್ದ ಅಣ್ಣಿಗೇರಿ ಸರ್ ಮೇಲಿನ ಆ ಸಾಕ್ಷ್ಯಚಿತ್ರ ನನಗೆ ಹೆಸರು ತಂದು ಕೊಟ್ಟಿತು. ಮುಂದೆ ಅವರ ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಅಣ್ಣಿಗೇರಿ ಸರ್ ಖೋಲಿ ಆಶ್ರಮವಾಗಿ ರೂಪಾಂತರ ಹೊಂದಿ ಹೆಮ್ಮರವಾಗಿ ಬೆಳೆಯಿತು.

ಇಳಿ ವಯಸ್ಸಿನಲ್ಲಿಯೂ ನಸುಕಿನಲ್ಲಿ ಎದ್ದು ಮಕ್ಕಳ ಜೊತೆ ವಾಕಿಂಗ್ ಮುಗಿಸಿ ತಮ್ಮ ಬೋಧನೆ ಆರಂಭಿಸುತ್ತಿದ್ದರು. ತಿಂಗಳಿನಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುವ ತನಕ ತಮ್ಮ ಕಾಯಕ ನಿಲ್ಲಿಸಲಿಲ್ಲ. ಒಮ್ಮೆ ವಿಲಿಯಂ ಷೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನಾಂಕದ ವಿಶೇಷತೆ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಏಪ್ರಿಲ್ 23 ಅವನ ಹುಟ್ಟು ಮತ್ತು ಸಾವಿನ ದಿನ.

ಇಡೀ ದೇಶ ಶಿಕ್ಷಕರ ದಿನಾಚರಣೆಯ ಸಡಗರದಲ್ಲಿ ಇದ್ದ ದಿನ ಅಣ್ಣಿಗೇರಿ ಸರ್ ದೇಹ ಬಿಟ್ಟದ್ದು ಅಷ್ಟೇ ವಿಶೇಷ.
ಮುಂದೆ ಅವರ ಅಗಲಿಕೆಯ ದಿನವನ್ನು ( ಸೆಪ್ಟಂಬರ್ 5) ನಾವೆಲ್ಲ ಶಿಕ್ಷಕ ಸಂತ ಅಣ್ಣಿಗೇರಿ ಸರ್ ಅವರ ಪುಣ್ಯಸ್ಮರಣೆಯಾಗಿ ಆಚರಿಸುವ ಯೋಗ ನಮ್ಮದು. ಅವರದು ಶರಣರ ನಿಸ್ವಾರ್ಥ,ನಿಷ್ಕಾಮ ಬದುಕು. ಅವರ ಸತ್ಚಾರಿತ್ರ್ಯ ನಮಗೆಲ್ಲ ಆದರ್ಶಪ್ರಾಯ.

ಕಲಿಸುವ ಜೀವನೋತ್ಸಾಹ ಕೊನೆತನಕ ಬತ್ತದಿರಲು ಅವರ ಇಚ್ಛಾಶಕ್ತಿಯೇ ಕಾರಣ. ಲಕ್ಷಾಂತರ ವಿದ್ಯಾರ್ಥಿಗಳ ಮನಸಿನಲ್ಲಿ ಶಾಶ್ವತವಾಗಿ ನೆಲೆಗೊಂಡಿರುವ ಸರ್ ಕೇವಲ ದೈಹಿಕವಾಗಿ ಮರೆಯಾಗಿ ನಮ್ಮೊಳಗೆ ನೆಲೆಗೊಂಡಿದ್ದಾರೆ.

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here