ಮನುಷ್ಯ ಸಂತನಾದ ಬಗೆ: ಅಣ್ಣಿಗೇರಿ ಗುರುಗಳು

0
485

ಇಚ್ಛಾ ಮರಣಿ‌ ಬಿ.ಜಿ.ಅಣ್ಣಿಗೇರಿ ಗುರುಗಳು ತಾವು ಬಯಸಿದಂತೆ ಶಿಕ್ಷಕರ ದಿನಾಚರಣೆ ದಿನದಂದೇ ದೇಹ ತ್ಯಜಿಸಿ‌ದಾಗ ಸಾವಿರಾರು ಶಿಷ್ಯರು ಗುರುವೆ-ಗುರುವೆ ಎಂದು ಜಯಕಾರ ಹಾಕುತ್ತಿದ್ದ ನಿನಾದ ಮುಗಿಲು ಮಟ್ಟುತ್ತಿತ್ತು. ಕಳೆದ ಮೂರು ತಿಂಗಳುಗಳಿಂದ ಅನ್ನ ತ್ಯಜಿಸಿ ಪ್ರಾಣ ಬಿಡುವ ಗಟ್ಟಿ ನಿರ್ಧಾರದ ಎದೆಗಾರಿಕೆ ಸಂತರಿಗೆ ಮಾತ್ರ ಸಾಧ್ಯ. ಇಡೀ ರಾಜ್ಯದಲ್ಲಿ ಯಾವುದೇ ಶಿಕ್ಷಕರಿಗೆ ಸಿಗದ ಅಪರೂಪದ ವಿದಾಯ ಬಿ.ಜಿ.ಅಣ್ಣಗೇರಿ ಗುರುಗಳಿಗೆ ದೊರಕಿದೆ.

ನಿಸ್ವಾರ್ಥ ಸೇವೆ,ನಿರ್ಲಿಪ್ತ ಜೀವನ ಶೈಲಿಯ ಶಿಸ್ತು, ವಿದ್ಯಾರ್ಥಿಗಳ ಮೇಲಿನ ಪ್ರೀತಿ,ನಿರ್ಮಲ ಚಾರಿತ್ರ್ಯ ಹೀಗೆ ಹೇಳುತ್ತ ಹೋದರೆ ನೂರಾರು ಸಂಗತಿಗಳನ್ನು ಅವರ ಹಳೆಯ ವಿದ್ಯಾರ್ಥಿಗಳು ಬಿಚ್ಚಿಟ್ಟರು.‌ ಅರವತ್ತು ವರ್ಷಗಳ ಕಾಲ ಒಂದೇ ರೀತಿ ಬದುಕಿದ ಅಣ್ಣಿಗೇರಿ ಅವರಿಗೆ ಸಂತ ಎಂದು ಕರೆಯುವುದು ಹೆಚ್ಚು ಅರ್ಥಪೂರ್ಣ.

ಹೈಸ್ಕೂಲ್ ಶಿಕ್ಷಣ ಅನಿವಾರ್ಯ ಇದ್ದ ಕಾಲದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನವಿಲ್ಲದೆ ಪರದಾಡುತ್ತಿದ್ದರು. ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಅರ್ಥ ಮಾಡಿಕೊಳ್ಳದೆ ಕಲಿಕೆಗೆ ವಿದಾಯ ಹೇಳಿ ಕೂಲಿ ಮಾಡುತ್ತಿದ್ದರು. ಆಗ ಹತ್ತನೇ ವರ್ಗದಲ್ಲಿ ಹೆಚ್ಚು ಅಂಕ ಗಳಿಸಿದರೆ ಪೋಸ್ಟಲ್ ಮತ್ತು ರೈಲ್ವೆ ಇಲಾಖೆಗಳಲ್ಲಿ ನೌಕರಿ ಸಿಗುತ್ತಿತ್ತು.‌ ಅದಕ್ಕಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ಮದುವೆ ಆಗದಿರಲು ಅಣ್ಣಿಗೇರಿ ಸರ್ ನಿರ್ಧರಿಸಿದರು.

ಶಿಕ್ಷಣವನ್ನು ವೃತ್ತಿಯಾಗಿ ಸ್ವೀಕರಿಸದೇ ದಾಸೋಹ ಎಂದು ಭಾವಿಸಿ ತಮ್ಮ ಕಾಯಕ ಮುಂದುವರೆಸಿದರು. ‌ಐದು ವಿದ್ಯಾರ್ಥಿಗಳಿಂದ ಆರಂಭವಾದ ಖೋಲಿಗೆ ನೂರಾರು ವಿದ್ಯಾರ್ಥಿಗಳು ಸೇರಿಕೊಂಡರು. ಹಳ್ಳಿ ವಿದ್ಯಾರ್ಥಿಗಳು ಊರಿಂದ ಬರುವ ಬುತ್ತಿಯನ್ನು ಅವಲಂಬಿಸಿರುತ್ತಿದ್ದರು. ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾಲವದು. ಅವರಿಗೆ ಬರುತ್ತಿದ್ದ ಅಲ್ಪ ಸಂಬಳವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿ ತಾವು ಅವರೊಂದಿಗೆ ಸರಳವಾಗಿ ಬದುಕಲಾರಂಭಿಸಿದರು.

ಮುಂಜಾನೆ ಐದಕ್ಕೆ ವಾಯುವಿಹಾರ, ಆರಕ್ಕೆ ಯೋಗ ಮುಗಿದ ಮೇಲೆ ಗಣಿತ,ಇಂಗ್ಲಿಷ್ ಪಾಠ. ಮತ್ತೆ ಸಂಜೆ ಶಾಲೆ ಮುಗಿದ ಮೇಲೆ ಮೂರು ತಾಸು ಬೋಧನೆ. ಒಟ್ಟು ಸರಿಸುಮಾರು ಎಂಟು ತಾಸು ಗ್ರಾಮೀಣ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಕಲಿಸುವ ಧ್ಯಾನಸ್ಥ ಕಲೆ ಕರಗತ ಮಾಡಿಕೊಂಡರು. ವೈಯಕ್ತಿಕ ಚಾರಿತ್ರ್ಯ ನಿಗ್ರಹಕ್ಕೆ ಯೋಗ,ಧ್ಯಾನ ಮತ್ತು ಆಧ್ಯಾತ್ಮಿಕ ಅಧ್ಯಯನ ಅವರ ದಿನಚರಿಯಾದಾಗ ವ್ಯಾವಹಾರಿಕ ಸಂಸಾರ ಬದುಕಿಗೆ ಜಾಗ ಸಿಗಲೇ ಇಲ್ಲ.

ಸನ್ಯಾಸಿಗಳು ನಾಚುವಂತಹ ಕಟ್ಟಾ ಬ್ರಹ್ಮಚರ್ಯ. ವೈಯಕ್ತಿಕ ಆಸೆ,ಆಮಿಷಗಳಿಗೆ ಒಂದಿನಿತು ಜಾಗ ಕೊಡದಂತೆ ಬಡ ವಿದ್ಯಾರ್ಥಿಗಳು ಅವರ ಬದುಕನ್ನು ಆಕ್ರಮಿಸಿಕೊಂಡು ಬಿಟ್ಟಿದ್ದರು. ಬೇರೆ ಬೇರೆ ಸಂಸ್ಥೆಯ ಪಟ್ಟಣದ ವಿದ್ಯಾರ್ಥಿಗಳು ಅವರ ವರ್ಗಕ್ಕೆ ಹಾಜರಾಗುತ್ತಿದ್ದರು. ಒಂದಿನಿತು ಅಹಮಿಕೆ ಮತ್ತು ನಿರೀಕ್ಷೆಗಳಿಗೆ ಆಸ್ಪದ ಕೊಡದ ಸಂತರ ಜೀವನಶೈಲಿ ರೂಪಿಸಿಕೊಂಡು ದಿವ್ಯ ಬ್ರಹ್ಮಾನುಭವ ಅನುಭವಿಸಿದರು.

ಪ್ರಶಸ್ತಿ, ಪುರಸ್ಕಾರ, ಹೊಗಳಿಕೆಯನ್ನು ಲೆಕ್ಕಿಸಲಿಲ್ಲ. ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ವ್ಯವಸ್ಥೆಯಿಂದಾಗಿ ಪ್ರಶಸ್ತಿಗಳು ತಮ್ಮ ಬಳಿ ಸುಳಿಯದಂತೆ ನೋಡಿಕೊಂಡರು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಆದರ್ಶಗಳು ಮತ್ತು ಮೇಡಂ ಕ್ಯೂರಿ ಜೀವನ ಚರಿತ್ರೆ ಇವರ ಮೇಲೆ ದಟ್ಟ ಪ್ರಭಾವ ಬೀರಿದ್ದವು. ಅವೇ ಆದರ್ಶಗಳಂತೆ ಬಾಳಿ ಹೋದರು.

ತಮ್ಮ ಮೇಲೆ ಹೆಣ್ಣು-ಹೊನ್ನು-ಮಣ್ಣು ಎಂಬ ದೌರ್ಬಲ್ಯಗಳು ದಾಳಿ ಮಾಡದಂತಹ ಪಾರದರ್ಶಕ ಬದುಕನ್ನು ರೂಢಿಸಿಕೊಂಡರು.”ನಾನೇನು ಸಂತನೂ ಅಲ್ಲ, ಏನೂ ಅಲ್ಲ ಮನೋನಿಗ್ರಹ ಆಗಲೆಂದು ಹೆಚ್ಚು ಸಮಯ ವಿದ್ಯಾರ್ಥಿಗಳ ಜೊತೆ ಕಳೆಯುತ್ತೇನೆ ಅಷ್ಟೇ” ಎನ್ನುತ್ತಿದ್ದರು. “ಶರಣರ ಮಹಿಮೆಯನ್ನು ಮರಣದಲಿ ಕಾಣು” ಎಂಬಂತೆ ಅಂತ್ಯ ಸಂಸ್ಕಾರಕ್ಕೆ ಅವರ ಹೆಸರಿನಲ್ಲಿ ಬೆಳೆದು ನಿಂತ ಸುಂದರ ಉದ್ಯಾನ ವನದಲ್ಲಿ ಅವಕಾಶ ದೊರೆಯಿತು. ಅದಕ್ಕೆ ಅವರ ದೈವಿ ಶಕ್ತಿಯೇ ಕಾರಣ.

ಗದುಗಿನ ಡಾಲರ್ಸ್ ಕಾಲನಿಯ ಬಿ.ಜಿ.ಅಣ್ಷಗೇರಿ ಉದ್ಯಾನವನದ ನಳನಳಿಸುವ ಹೂದೋಟದಲಿಯೇ ಬಿ.ಜಿ.ಅಣ್ಣಿಗೇರಿ ಅವರ ದೇಹ ಲೀನವಾದದ್ದು ಯೋಗಾಯೋಗ. ನಿಜಾರ್ಥದ ಯೋಗಿಗಳ ಹುಟ್ಟು ಮತ್ತು ಸಾವಿನಲ್ಲಿ ರಾಜಯೋಗ ರಾರಾಜಿಸುತ್ತದೆ ಎಂಬುದಕ್ಕೆ ಶಿಕ್ಷಣ ಸಂತರ ಬದುಕೇ ಸಾಕ್ಷಿ.

ಸಿದ್ದು ಯಾಪಲಪರವಿ.

LEAVE A REPLY

Please enter your comment!
Please enter your name here