ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅವಿನಾಶ್

0
748
Loading...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 3,000 ಮೀ. ಸ್ಟೀಪಲ್ ಚೇಸ್‌ನಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಭಾರತದ ಅವಿನಾಶ್ ಸಬ್ಲೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯ ಅಂತಿಮ ರೇಸ್‌ನಲ್ಲಿ 13ನೇ ಸ್ಥಾನ ಪಡೆದ ಅವಿನಾಶ್ ಮೂರು ದಿನಗಳಲ್ಲಿ ಎರಡನೇ ಬಾರಿ ತನ್ನದೇ ರಾಷ್ಟ್ರೀಯ ದಾಖಲೆ ಮುರಿದರು.

8 ನಿಮಿಷ, 21.37 ಸೆಕೆಂಡ್‌ನಲ್ಲಿ ಗುರಿ ತಲುಪಿದ ಅವಿನಾಶ್ ಒಲಿಂಪಿಕ್ಸ್ ಅರ್ಹತಾ ಸ್ಟಾಂಡರ್ಡ್ (8:22.00)ದಾಟಿದರು. ಮಂಗಳವಾರ ನಡೆದ ಮೊದಲ ಸುತ್ತಿನ ಹೀಟ್ಸ್‌ನಲ್ಲಿ ನಿರ್ಮಿಸಿದ್ದ ತನ್ನದೇ ರಾಷ್ಟ್ರೀಯ ದಾಖಲೆ(8:25.23)ಯನ್ನು ಉತ್ತಮಪಡಿಸಿಕೊಂಡರು. ಅವಿನಾಶ್ ರೇಸ್ ಪೂರ್ಣಗೊಳಿಸಿದ್ದ 15 ಓಟಗಾರರ ಪೈಕಿ 13ನೇ ಸ್ಥಾನ ಪಡೆದರು. ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಕೀನ್ಯದ ಕಾನ್ಸೆಸ್‌ಲಸ್ ಕಿಪ್ರುಟೊ 8:01.35 ಸೆಕೆಂಡ್‌ನಲ್ಲಿ ಗುರಿ ತಲುಪಿ 2017ರಲ್ಲಿ ಜಯಿಸಿದ ತನ್ನದೇ ಪ್ರಶಸ್ತಿಯನ್ನು ಉಳಿಸಿಕೊಂಡರು.

ಅವಿನಾಶ್‌ಗಿಂತ ವೇಗವಾಗಿ ಓಡಿದ ಇಥಿಯೋಪಿಯದ ಲಾಮೆಚಾ ಗಿರ್ಮಾ(8:01.36 ಸೆ.)ಹಾಗೂ ಮೊರೊಕ್ಕೊದ ಸೌಫಿಯಾನ್ ಬಕ್ಕಾಲಿ(8:03.76)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. 25ರ ಹರೆಯದ ಮಹಾರಾಷ್ಟ್ರದ ಮಾಂಡ್ವಾದ ನಿವಾಸಿ ಅವಿನಾಶ್ ಮಂಗಳವಾರ ನಡೆದ ಹೀಟ್ಸ್‌ನಲ್ಲಿ ನಾಟಕೀಯ ಸನ್ನಿವೇಶದಲ್ಲಿ ಫೈನಲ್‌ಗೆ ತೇರ್ಗಡೆಯಾಗಿದ್ದರು. ಹೀಟ್ ರೇಸ್ ವೇಳೆ ಇತರ ಅಥ್ಲೀಟ್‌ಗಳು ಅವಿನಾಶ್‌ಗೆ ಅಡ್ಡಿಪಡಿಸಿರುವುದನ್ನು ಭಾರತದ ಅಥ್ಲೆಟಿಕ್ಸ್ ಒಕ್ಕೂಟ ಪ್ರಸ್ತಾವಿಸಿ ಪ್ರತಿಭಟನೆ ವ್ಯಕ್ತಪಡಿಸಿದ ಬಳಿಕ ಅವಿನಾಶ್‌ಗೆ ಫೈನಲ್‌ನಲ್ಲಿ ಆಡುವ ಅವಕಾಶ ನೀಡಲಾಯಿತು.

ರೇಸ್ ರೆಫರಿ ವಿಡಿಯೋ ದೃಶ್ಯವನ್ನು ಪರೀಕ್ಷಿಸಿದ ಬಳಿಕ ಅವಿನಾಶ್ ರೇಸ್‌ನಲ್ಲಿದ್ದಾಗ ಇತರ ಅಥ್ಲೀಟ್‌ಗಳು ಎರಡು ಬಾರಿ ಅಡ್ಡಿಯಾಗಿರುವುದನ್ನು ಒಪ್ಪಿಕೊಂಡರು. ಭಾರತದ ಪ್ರತಿಭಟನೆಗೆ ಮನ್ನಣೆ ನೀಡಿ ನಿಯಮದಡಿ 163.2(ಓಟಕ್ಕೆ ಅಡ್ಡಿ) ಅವಿನಾಶ್‌ರನ್ನು ಫೈನಲ್‌ಗೆ ಸೇರಿಸಿಕೊಂಡರು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

Loading...

LEAVE A REPLY

Please enter your comment!
Please enter your name here