ಬೆಂಗಳೂರು: ಸ್ವಪಕ್ಷ, ನಂಬಿಕಸ್ಥರ ಮನವೊಲಿಸುವುದೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೆ ದೊಡ್ಡ ಸವಾಲಾಗಿದೆ. ಒಂದೆಡೆ ಸಂಪುಟ ಪುನರ್ ರಚನೆ ಮಾಡಿ ನಮಗೆ ಸೀಟ್ ಕೊಡಿಸಿ ಅಂತ ಒತ್ತಡ ಹೇರಿದರೆ, ಮತ್ತೊಂದೆಡೆ ನಮ್ಮಿಂದ ಖಾತೆ ಪಡೆದದ್ದು ಯಾಕೆ ಎಂಬ ಅಸಮಧಾನ ಸ್ವ ಪಕ್ಷದವರಿಂದಲೇ ಕೇಳಿ ಬರುತ್ತಿದೆ.
“ನಾವು ಕಂಬಳಿ ಬೀಸಿದ್ದಕ್ಕೇ ಯಡಿಯೂರಪ್ಪ ಸಿಎಂ ಆಗಿದ್ದು”
ಸಂಪುಟ ಪುನರ್ ರಚನೆ ವಿಳಂಬಕ್ಕೆ ಬಿಜೆಪಿಯಲ್ಲಿ ಮತ್ತೆ ಅಸಮಧಾನ ಸ್ಫೋಟವಾಗಿದೆ. ತಾಳ್ಮೆಯಿಂದಿದ್ದ ವಲಸಿಗ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ ಎನ್ನಲಾಗ್ತಿದೆ. ಕುರುಬ ಸಮುದಾಯದ ಚಿಂತನಾ ಸಭೆಯಲ್ಲಿ ಎಂಟಿಬಿ ನಾಗರಾಜ್ ಗುಡುಗಿದ್ದಾರಂತೆ. ನಾವು ಕಂಬಳಿ ಬೀಸಿದ್ದಕ್ಕೇ ಯಡಿಯೂರಪ್ಪ ಸಿಎಂ ಆಗಿದ್ದು. ಬಿಜೆಪಿ ಅಧಿಕಾರಕ್ಕೆ ಬಂದಿದ್ದು ನಮ್ಮಿಂದ ಎಂದು ಕಿಡಿಕಾರಿದ್ದಾರಂತೆ. ಇತ್ತ ಎಮ್ಮೆಲ್ಸಿ ಎಚ್ ವಿಶ್ವನಾಥ್ ಸಹ ಸಿಎಂ ಬಿಎಸ್ವೈ ವಿರುದ್ಧ ಬೇಸರ ಹೊರಹಾಕಿದರು. ಮೊದಲೆಲ್ಲ ಸಿಎಂ ಭೇಟಿ ಮಾಡ್ತಿದ್ದ ಹೆಚ್ ವಿಶ್ವನಾಥ್ ಈಗ ದೂರ ಸರಿದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ಸಿಎಂ ಬಿಎಸ್ವೈ ಅವರಿಂದ ಅಂತರ ಕಾಯ್ದುಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.
ಇನ್ನು ಆರ್.ಆರ್. ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗೆಲುವಿಗೆ ರಣತಂತ್ರ ಹೆಣೆಯಲು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಇಂದು ಸಭೆ ನಡೆಸಲಾಯಿತು. ಈ ವೇಳೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರೂ ತಮ್ಮೊಡನೆ ಬಂದವರತ್ತಲೂ ನೋಡಿ ಎಂದು ಮನವಿ ಮಾಡಿದ್ದಾರೆ.
ತಮ್ಮೊಡನೆ ರಾಜಿನಾಮೆ ಕೊಟ್ಟು ಬಂದು ಬಿಜೆಪಿ ಸೇರಿದ ಮುನಿರತ್ನ ಅವರಿಗೆ ಟಿಕೆಟ್ ನೀಡಲು ಒತ್ತಾಯಿಸಿದಾರೆ. ಬೆಂಗಳೂರು ನಗರದಲ್ಲಿ ಬಿಜೆಪಿ ಬಲಗೊಳ್ಳಲು ಮುನಿರತ್ನ ಅವಶ್ಯಕ ಎಂದು ಹೇಳಿದ್ದಾರಂತೆ.. ಈ ವೇಳೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಅಧಿಕಾರಕ್ಕೆ ಬರಲು ಸಹಕರಿಸಿದ ಮುನಿರತ್ನ ಅವರನ್ನು ಕಡೆಗಣಿಸುವುದಿಲ್ಲ. ಒಗ್ಗಟ್ಟಿನಿಂದ ಉಪಚುನಾವಣೆಗಳನ್ನು ಗೆಲ್ಲೋಣ ಎಂದು ತಿಳಿಸಿದರಂತೆ.
ಖಾತೆ ದಿಢೀರ್ ಬದಲಾವಣೆಗೆ ರಾಮುಲುಗೆ ಬೇಸರ
ಸಂಪುಟ ಪುನರ್ ರಚನೆ ಮುನ್ನ ರಾಮುಲು ಖಾತೆಯನ್ನ ಸುಧಾಕರ್ ಗೆ ನೀಡಿದ ಸಿಎಂ ನಿರ್ಧಾರದಿಂದ ರಾಮುಲು ಬೇಸರಗೊಂಡಿದ್ದಾರಂತೆ. ಇಂತಹ ಸಮಯದಲ್ಲಿ ಖಾತೆ ಬದಲಾವಣೆ ಮಾಡಿದ್ದು ಸರಿಯಲ್ಲ. ಸಂಪುಟ ಪುನರ್ ರಚನೆ ಸಮಯದಲ್ಲಿ ಖಾತೆ ಬದಲಾವಣೆ ಮಾಡಿದ್ದರೆ ಚೆನ್ನಾಗಿತ್ತು. ಈಗ ಬದಲಾವಣೆ ಮಾಡಿದರೆ ಏನು ಕೆಲಸ ಮಾಡಿಲ್ಲ ಅಂತಾ ಸಂದೇಶ ಹೋಗುತ್ತದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಬಳ್ಳಾರಿ ಮೂಲದ ಶಾಸಕರೊಬ್ಬರಿಂದ ಮಾಹಿತಿ ತಿಳಿದು ಬಂದಿದೆ.
ರಾಮುಲು ಖಾತೆ ಬದಲಾವಣೆ ಕುರಿತು ಉತ್ತರ ಕರ್ನಾಟಕದ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾವಣೆ ಮುನ್ನ ನಿಮ್ಮನ್ನ ಕೇಳಿದ್ರ ಅಂತ ರಾಮುಲುಗೆ ಕರೆ ಮಾಡಿ ಹಲವು ಶಾಸಕರು ಕೇಳಿದ್ದಾರೆ. ಕರೋನ ಸಮಯದಲ್ಲಿ ವಾರಿಯರ್ ಆಗಿ ರಾಜ್ಯಾದ್ಯಂತ ಟೂರ್ ಹೊಡೆದ್ರೀ.. ಕರೋನ ಬಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೀ.. ಈಗ ಏಕಾಏಕಿ ಬದಲಾವಣೆ ಯಾಕೆ ಅಂತ ರಾಮುಲು ಬೆಂಬಲಿಗ ಮುಖಂಡರು ಗರಂ ಆಗಿದ್ದಾರಂತೆ.