ಮತ್ತದೇ ತಪ್ಪು: ಸಿದ್ದು ಗೌಡರ ಬೀದಿ ಜಗಳ

0
215

ಸಮ್ಮಿಶ್ರ ಸರ್ಕಾರದಲ್ಲಿ ಏನೇನೂ ಪರಿಶ್ರಮವಿಲ್ಲದೆ ಗಡದ್ದಾಗಿ ಅಧಿಕಾರ ಅನುಭವಿಸಿದ ಫ್ಯಾಮಿಲಿ ಟೀಮ್ ಈಗ ಸಿದ್ಧರಾಮಯ್ಯನವರ ಮೇಲೆ ತಿರುಗಿ ಬಿದ್ದಿರುವುದು ನಿರೀಕ್ಷಿತ.

ಹಾದಿಯಲಿ ಹೋಗೋ ದೆವ್ವಾನ ಮನೇಲಿ‌ ಕರ್ಕೊಂಡ್ರು ಅನ್ನೋ ಹಂಗೆ ದೊಡ್ಡಗೌಡರು ತಮ್ಮ ಮಾನ ತಾವೇ ಹರಾಜು ಹಾಕಿಕೊಂಡಿದ್ದಾರೆ. ಎಲ್ಲಾ ಅನುಭವಿಸಿದ ಮೇಲೆ ಈ ಆರೋಪದ ಅಗತ್ಯವಿರಲಿಲ್ಲ.

ಕಳೆದ ಲೋಕಸಭಾ ಚುನಾವಣೆಯ ಸರಣಿ ತಪ್ಪುಗಳಿಂದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡದ್ದು ಮಾತ್ರ ನಿಜ.
ಅತಿಯಾಸೆಗೆ ಬಿದ್ದು ಕುಟುಂಬದ ಸದಸ್ಯರನ್ನು ಇದೇ ಅವಕಾಶ ಬಳಸಿಕೊಂಡು ಸ್ಥಾನ ಕಲ್ಪಿಸುವ ಮನಸು ಮಾಡಿದ್ದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ.

ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಚಪಲದಿಂದ ಕಾಂಗ್ರೆಸ್ ದೊಡ್ಡಗೌಡರ ತಾಳಕ್ಕೆ ತಕ್ಕಂತೆ ಕುಣಿಯಿತು.
ಸಮ್ಮಿಶ್ರವಾಗಿ ಲೋಕಸಭಾ ಚುನಾಣೆಗೆ ಹೋಗುವ ತಪ್ಪು ನಿರ್ಧಾರ ಮಾಡದಿದ್ದರೆ ಎರಡೂ ಪಕ್ಷಗಳ ಮಾನ ಉಳಿಯುತ್ತಿತ್ತು.

ಗೌಡರ ಕುಟುಂಬ ರಾಜಕಾರಣದ ಜಾಡು ಗೊತ್ತಿದ್ದ ಸಿದ್ದು ಸೈಲೆಂಟಾಗಿ ಎಲ್ಲ ಸಹಿಸಿಕೊಂಡು ಸುಮ್ಮನಿದ್ದರು.
ಲೋಕಸಭಾ ಫಲಿತಾಂಶದ ನಂತರವೂ ಬದಲಾಗದ ಆಡಳಿತ ವೈಖರಿಗೆ ಬೆಚ್ಚಿಬಿದ್ದ ಕಾಂಗ್ರೆಸ್ ಪಡೆ ಅತೃಪ್ತ ಅಸ್ತ್ರ ಬಳಸಿತು.

ಅದು ಸಿದ್ದರಾಮಯ್ಯ ಅವರ ಅಣತಿಯಂತೆ ನಡೆದಿದ್ದರೂ ಬಹಿರಂಗವಾಗಿ ಹೇಳಲಾಗದ open secret.
ಅಂತಹ ನಿರ್ದಾರ ತೆಗೆದುಕೊಳ್ಳುವ ಕೆಟ್ಟ ವಾತಾವರಣ ಸೃಷ್ಟಿ ಮಾಡಿದ್ದೇ ಗೌಡರ ಕುಟುಂಬ.

ಸೋಲಿನ ನಂತರ ಪಾಠ ಕಲಿಯಲು ಬಹುಶಃ ದುರಾದೃಷ್ಟ ಅವಕಾಶ ಕೊಡಲಿಲ್ಲವೇನೋ ಅನಿಸುವುದು ಸಹಜ.
ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ನಾಲ್ಕಾರು ದಿನ ಸರಕಾರ ಉಳಿಯಲು ಸಿದ್ದರಾಮಯ್ಯ ಅವರನ್ನು ಬಳಸಿಕೊಂಡ ಮೇಲೆ ಈ ರೀತಿ ಗೂಬೆ ಹೊರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಈಗ ಸಾರ್ವಜನಿಕರಲ್ಲಿ ಮೂಡುವಂತಾಯಿತು.

ದೇವೇಗೌಡರ ಎಲ್ಲ ತಂತ್ರ ಮತ್ತು ಪಟ್ಟುಗಳನ್ನು ಸಮರ್ಥವಾಗಿ ಗ್ರಹಿಸಬಲ್ಲ ಏಕೈಕ ವ್ಯಕ್ತಿ ಸಿದ್ದು ಎಂಬುದು ದೊಡ್ಡಗೌಡರಿಗೂ ಗೊತ್ತಿದೆ. ಅದೇ ಕಾರಣದಿಂದ ಮೈತುಂಬ ಕಣ್ಣಿಟ್ಟುಕೊಂಡು ಸಿದ್ದರಾಮಯ್ಯ ಮೈಂಡ್ ಗೇಮ್ ಪ್ರಾರಂಭಿಸಲು ತಮ್ಮ ಆಪ್ತರನ್ನು ಆಯ್ದುಕೊಂಡದ್ದು ರಾಜಕೀಯ ಪ್ರಬುದ್ಧತೆ.

ಆ ಪ್ರಬುದ್ಧತೆಯನ್ನು ದೊಡ್ಡಗೌಡರು ಕುಟುಂಬ ವ್ಯಾಮೋಹದ ಒತ್ತಡದಲ್ಲಿ ಕಳೆದುಕೊಂಡದ್ದು ಈಗ ಸಾಬೀತಾಗಿದೆ.
ಇಲ್ಲಿಯತನಕ ದೇವೇಗೌಡರ ಮಾತಿಗೆ ಮಣಿ ಹಾಕಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಅನಿವಾರ್ಯವಾಗಿ ಸಿದ್ಧರಾಮಯ್ಯನವರ ವಾದವನ್ನು ಒಪ್ಪುವ ವಾತಾವರಣ ಸೃಷ್ಟಿಯಾಗಲು ದೊಡ್ಡಗೌಡರ ಹೇಳಿಕೆ ಕಾರಣವಾಯಿತು.

ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಿ ವಿರೋಧ ಪಕ್ಷದ ನಾಯಕ ಸ್ಥಾನ ಕಸಿಯುವ ಆಲೋಚನೆಯೂ ಇರಬಹುದು.
ಆದರೆ ‘ಕಾಂಗ್ರೆಸ್ ಪಕ್ಷದೊಂದಿಗೆ ಸರಕಾರ ಮಾಡಬಾರದಿತ್ತು’ ಎಂಬ ಗೌಡರ ಕುಟುಂಬದ ಹೇಳಿಕೆಯಿಂದ ಈಗ ಹೈಕಮಾಂಡ್ ಗೌಡರನ್ನು ನಂಬುವ ಸ್ಥಿತಿಯಲ್ಲಿಲ್ಲ.

ಇದನ್ನು ದುರ್ವಿಧಿ ಎಂದು ವ್ಯಾಖ್ಯಾನಿಸಬಹುದು. ಹಳೆ ಮೈಸೂರು ಪ್ರಾಂತ್ಯದಲ್ಲಿ ಇದ್ದ ಜೆಡಿಎಸ್ ಪ್ರಾಬಲ್ಯ ಕ್ಷೀಣಿಸಲು ಈ ಬೀದಿ ಜಗಳ ಕಾರಣವಾಗಬಹುದು.
ಒಕ್ಕಲಿಗರ ಪರ್ಯಾಯ ನಾಯಕ ಅನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ ಹಲವಾರು ಒತ್ತಡಗಳಲ್ಲಿದ್ದಾರೆ.

ತಮ್ಮ ಪಕ್ಷದ ಶಾಸಕರ ಭಾವನೆಗಳನ್ನು ಕಡೆಗಣಿಸಿ ಜೆಡಿಎಸ್ ಸರಕಾರ ರಕ್ಷಿಸಲು ಮುಂದಾದದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಡಿಕೆ ಮತ್ತು ಸಿದ್ದು ನಡುವಿನ ಸಮಬಲದ ಹೋರಾಟದಲ್ಲಿ ಗೆಲುವು ಯಾರದೆಂಬುದನ್ನು ಕಾಲ ನಿರ್ಧರಿಸುತ್ತದೆ.
ಕಾಲನ ಮಹಿಮೆಯನ್ನು ಮೀರಿದ ತಂತ್ರ ಪ್ರತಿತಂತ್ರ ರಾಜಕಾರಣದಲ್ಲಿ ಅನಿವಾರ್ಯ ಕೂಡ.

ತಮ್ಮ ಮಕ್ಕಳನ್ನು ರಕ್ಷಿಸಲು ನೇರವಾಗಿ ನೆರವಾದ ಕೃಷ್ಣ ಭೈರೇಗೌಡ, ಡಿಕೆಶಿ ವಿಪಕ್ಷ ನಾಯಕರಾಗಲಿ ಎಂಬ ಗೌಡರ ಮನದಿಂಗಿತ ಅರ್ಥ ಮಾಡಿಕೊಂಡ ಸಿದ್ದು ಪ್ರತಿತಂತ್ರ ರೂಪಿಸದೇ ಇರುತ್ತಾರೆಯೇ?

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here