ಸಚಿವರ ಬಂಡಾಯದ ಬೆನ್ನಲ್ಲೇ ಯಡ್ಡಿಗೆ ಮತ್ತೊಂದು ಬಿಗ್ ಶಾಕ್..!

0
1324

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ರಚನೆ ಮತ್ತು ಖಾತೆ ಹಂಚಿಕೆಯ ಬಿಕ್ಕಟ್ಟು ಶಮನಗೊಳ್ಳುವ ಮುನ್ನವೇ ಸಿಎಂ ಯಡಿಯೂರಪ್ಪನವರಿಗೆ ಮತ್ತೊಂದು ಸವಾಲು ಎದುರಾಗಿದೆ. ಸದ್ಯ ಬಿಜೆಪಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವುದು ಮತ್ತು ಖಾತೆ ಹಂಚಿಕೆಯಲ್ಲಿನ ಗೊಂದಲ ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಹೀಗಿರುವಾಗಲೇ ಮೈತ್ರಿ ಸರ್ಕಾರವನ್ನು ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರ ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಿದೆ.

ಹೌದು, ಈ ಹಿಂದೆ ಎರಡು ಬಾರಿ ಅನರ್ಹ ಶಾಸಕರು ಸಲ್ಲಿಸಿದ್ದ ತುರ್ತು ವಿಚಾರಣೆಯ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಆದರೆ ಮಹತ್ವದ ಬೆಳವಣಿಗೆಯಲ್ಲಿ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದ್ದು ಶೀಘ್ರವೇ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದ ಮುಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದೆ.

ಇನ್ನು ಸುಪ್ರೀಂಕೋರ್ಟ್ ತುರ್ತು ವಿಚಾರಣೆಗೆ ಸಮ್ಮತಿ ನೀಡುತ್ತಿದ್ದಂತೆ ಅನರ್ಹ ಶಾಸಕರಲ್ಲಿ ಸಂತೋಷ ಮನೆಮಾಡಿದೆ. ಅರ್ಜಿ ವಿಚಾರಣೆ ನಡೆದು ಅನರ್ಹತೆ ರದ್ದಾದರೆ, ಬಿಜೆಪಿ ಸರ್ಕಾರದಲ್ಲಿ ಮಂತ್ರಿಸ್ಥಾನ ಲಭಿಸಲಿದೆ ಎಂಬ ಲೆಕ್ಕಾಚಾರ ಅನರ್ಹ ಶಾಸಕರದ್ದು. ಆದರೆ ಬಿಜೆಪಿಯಲ್ಲೇ ಸಚಿವ ಸ್ಥಾನಕ್ಕಾಗಿ ಬಂಡಾಯ ಆರಂಭವಾಗಿರುವಾಗ ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡುವುದು ಬಿಜೆಪಿಯಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಲಿದೆ ಎನ್ನಲಾಗಿದೆ.

ಇನ್ನು ಅನರ್ಹ ಶಾಸಕರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನಗಳನ್ನು ಕಾಯ್ದಿರಿಸಿದ್ದಾರೆ. ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಸಮ್ಮತಿಸಿರುವುದರಿಂದ ರಾಜ್ಯ ರಾಜಕಾರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ. ಅನರ್ಹ ಶಾಸಕರು ಸರ್ಕಾರದಲ್ಲಿ ಭಾಗಿಯಾದರೆ ಬಿಜೆಪಿಯಲ್ಲಿನ ಬಂಡಾಯ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here