ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವು ಉತ್ತಮವಾಗಿದ್ದರೆ ಉತ್ತಮವಾದ ಜೀವನವನ್ನು ಮಾಡಬಹುದು. ಹೀಗಾಗಿ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಉತ್ತಮ. ಚಿಕ್ಕ ಪುಟ್ಟ ಸಮಸ್ಯೆಗಳು ಎದುರಾದಾಗ ವೈದ್ಯರಲ್ಲಿಗೆ ಭೇಟಿ ನೀಡುವ ಮೊದಲು ಮನೆಯಲ್ಲೇ ಬೇಕಾದ ಔಷಧಿಯನ್ನು ತಯಾರಿಸಿ ಗುಣ ಮುಖರಾಗುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಕೊರೋನಾದಂತಹ ಲಕ್ಷಣಗಳು ಎಲ್ಲರನ್ನು ಆತಂಕಕ್ಕೀಡು ಮಾಡುತ್ತಿದೆ. ಕೊರೋನಾದ ಲಕ್ಷಣಗಳಲ್ಲಿ ಒಂದಾದ ಗಂಟಲು ನೋವು ಕಾಣಿಸಿಕೊಂಡರೆ, ವೈದ್ಯರನ್ನು ಭೇಟಿ ತೊಂದರೆಗೆ ಸಿಲುಕುವ ಬದಲು, ಮನೆಯಲ್ಲೇ ಸುಭಲವಾಗಿ ಇಂತಹ ಸಮಸ್ಯೆಯನ್ನು ನಿವಾರಿಸಿಕೊಂಡರೆ ಉತ್ತಮ.
• ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಮತ್ತು ಚಿಟಿಕೆಯಷ್ಟು ಅರಶಿಣ ಹಾಕಿ ಬಾಯಿ ಮುಕ್ಕಳಿಸುವುದನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
• ಎರಡು ಮೂರು ಸಾಂಬ್ರಾಣಿ ಎಲೆಗಳನ್ನು ಎರಡು ಚಿಟಿಕೆ ಉಪ್ಪಿನೊಂದಿಗೆ ಜಗಿದು ತಿಂದರೆ ಗಂಟಲು ನೋವು ಕಡಿಮೆಯಾಗುತ್ತದೆ.
• ಏಲಕ್ಕಿ ಮತ್ತು ಚಕ್ಕೆಯನ್ನು ಅರೆದು, ತೆಗೆದ ರಸದಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು, ಜ್ವರ ಮತ್ತ ಧ್ವನಿ ಬದಲಾವಣೆಯನ್ನು ತಡೆಯಬಹುದು.
• ಉಷ್ಣದಲ್ಲಿ ಗಂಟಲು ನೋವಿನಿಂದ ಸ್ವರ ಹೋಗಿದ್ದರೆ, ಒಂದು ತುಂಡು ಬೆಲ್ಲವನ್ನು ತುಪ್ಪದೊಂದಿದೆ ಮುಳುಗಿಸಿ ತಿಂದರೆ ಸ್ವರ ಬರುವ ಸಾಧ್ಯತೆ ಇರುತ್ತದೆ.
• ಜೀರಿಗೆ ಹುಡಿ ಮಾಡಿ ಕಲ್ಲು ಸಕ್ಕರೆ ಬೆರೆಸಿ ಸ್ವಲ್ಪ ಸ್ವಲ್ಪ ಆಗಾಗ ಬಾಯಿಗೆ ಹಾಕಬೇಕು. ಹೀಗೆ ಮಾಡಿದ್ದಲ್ಲಿ ಗಂಟಲು ನೋವು ಕಡಿಮೆಯಾಗುತ್ತದೆ.
• ಒಳ್ಳೆ ಮೆಣಸು ಪುಡಿ ಮಾಡಿ ಜೇನುತುಪ್ಪ ಮತ್ತು ದನದ ತುಪ್ಪ ಬೆರೆಸಿ ಸ್ವಲ್ಪ ಸ್ವಲ್ಪ ಸೇವಿಸುತ್ತಿರಬೇಕು ಹೀಗೆ ಮಾಡಿದರೆ ಎರಡು ಮೂರು ದಿನಗಳಲ್ಲಿ ಗಂಟಲು ನೋವು ಕಡಿಮೆಯಾಗಿ ತಥಾಸ್ಥಿತಿಗೆ ಬರುತ್ತದೆ.
• ಆಡುಸೋಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ನಂತರ ಅದಕ್ಕೆ ವೀಳ್ಯದೆಲೆ ಸೊಪ್ಪು, ಸಾಂಬ್ರಾಣಿ ಸೊಪ್ಪು, ಹಸಿ ಶುಂಠಿ, ಈರುಳ್ಳಿ, ಒಳ್ಳೆ ಮೆಣಸು ಎಲ್ಲಾ ಸಮಪ್ರಮಾಣದಲ್ಲಿ ಹಾಕಿ ಜಜ್ಜಿ ರಸ ತೆಗೆದು ಅದಕ್ಕೆ ಒಂದು ಚಮಚ ಜೇನು ಮತ್ತು ಅರ್ತ ನಿಂಬೆರಸ ಸೇರಿಸಿ ಬೆಳ್ಳಗೆ ಮತ್ತು ರಾತ್ರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲು ನೋವು ಶಮನಗೊಳ್ಳುತ್ತದೆ.
• ಗಂಟಲು ತುರಿಕೆಯ ಜೊತೆಗೆ ಸೀನು ಬರುತ್ತಿದ್ದರೆ, ಕೊತ್ತಂಬರಿ ಬೀಜವನ್ನು ಜಗಿದು ತಿನ್ನುವುದರಿಂದ ಗಂಟಲು ತುರಿಕೆ ಮತ್ತು ಸೀನು ಸ್ವಲ್ಪ ಪ್ರಮಾಣದಲ್ಲಿ ನಿಲ್ಲುತ್ತದೆ. ತದನಂತರ ಬಿಸಿ ನೀರಿಗೆ ಚಿಟಿಕೆ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸಿದರೆ ಕಡಿಮೆಯಾಗುತ್ತದೆ.
ಇಂತಹ ಮನೆಮದ್ದನ್ನು ಮನೆಯಲ್ಲಿಯೇ ಮಾಡುವುದರಿಂದ ಗಂಟಲು ನೋವು ಸುಲಭವಾಗಿ ಶಮನಗೊಳ್ಳುವುದರ ಜೊತೆಗೆ ಗಂಟಲು ನೋವಿನಿಂದ ಮುಕ್ತರಾಗಬಹುದು.
ಸಾಯಿನಂದಾ ಚಿಟ್ಪಾಡಿ