ನಮ್ಮ ಜೀವನದ ಜರ್ನಿಯಲ್ಲಿ ಅದೆಷ್ಟೋ ಸ್ನೇಹಿತರು ಬರುತ್ತಾರೆ ಹೋಗುತ್ತಾರೆ. ನಾವು ಸುಖದಲ್ಲಿದ್ದಾಗ ನಮ್ಮ ಸುಖವನ್ನು ಸಂಭ್ರಮಿಸಿ ಸಂತೋಷ ಪಡುವ ಕಷ್ಟ ಬಂದಾಗ ಕಣ್ಣೊರೆಸಿ ಸಂತೈಸುವ ಸಾಂತ್ವನ ಹೇಳುವ ‘ನಾನಿದ್ದೀನಿ ಭಯ ಪಡಬೇಡ’ ಎಂದು ಧೈರ್ಯ ತುಂಬುವ ಸ್ನೇಹಿತ ಮಾತ್ರ ಕೊನೆಯವರೆಗೂ ನಮ್ಮ ಜೊತೆಗೆ ನಿಲ್ಲುತ್ತಾನೆ. ಇದನ್ನೇ ಗಾಢವಾದ ಸ್ನೇಹ ಎಂದು ಹೇಳುವುದು. ಇಂತಹ ಸ್ನೇಹಿತನನ್ನೇ ಪ್ರಾಣ ಸ್ನೇಹಿತ ಎಂದು ಹೇಳುವುದು. ಇಂತಹ ಪ್ರಾಣ ಸ್ನೇಹಿತರು ನಮ್ಮ ಕನ್ನಡ ಚಿತ್ರರಂಗದ ದಿಗ್ಗಜರಾದ ಅಂಬಿ ಮತ್ತು ವಿಷ್ಣು.
ರೆಬಲ್ ಸ್ಟಾರ್ ಅಂಬರೀಶ್ ರವರದ್ದು ಒರಟು ಮಾತು. ಆದರೆ ಮಗುವಿನಂತ ಮನಸ್ಸು. ಇದ್ದೀದ್ದನ್ನು ಇದ್ದ ಹಾಗೆ ಹೇಳುವ ನಿಷ್ಠೂರ ವ್ಯಕ್ತಿತ್ವ.
ಆದರೆ ಸಾಹಸಸಿಂಹ ವಿಷ್ಣುವರ್ಧನ್ ರವರದ್ದು ಸೌಮ್ಯ ಸ್ವಭಾವ, ನಯವಾದ ಮಾತು, ವಿಶಾಲವಾದ ಮನಸ್ಸು, ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿ ಎಂದಿಗೂ ನಡೆದುಕೊಳ್ಳದ ಸಜ್ಜನ ನಡತೆ. ಇಬ್ಬರಲ್ಲೂ ಒಂದೇ ಗುಣ ಆದರೆ ತೋರ್ಪಡಿಸುವ ರೀತಿ ಮಾತ್ರ ಬೇರೆ ಬೇರೆ. ಅಂಬಿ ಮತ್ತು ವಿಷ್ಣು ನಡುವಿನ ಸ್ನೇಹದಲ್ಲಿ ತುಂಟತನವಿತ್ತು. ತುಂಬಾ ಹೆಚ್ಚೇ ಅನ್ನುವಷ್ಟು ಸಲುಗೆ ಇತ್ತು. ಸ್ವಲ್ಪ ಗಂಭೀರತೆ ಇತ್ತು. ಒಬ್ಬರನ್ನೊಬ್ಬರು ಗೌರವಿಸುವ, ಅಭಿಮಾನಿಸುವ ದೊಡ್ಡತನವಿತ್ತು. ಇಂತಹ ಗಟ್ಟಿ ಸ್ನೇಹ ಈ ದಿಗ್ಗಜರದ್ದು.
ಕೆಲವು ಘಟನೆಗಳು ಅಂಬಿ ಮತ್ತು ವಿಷ್ಣು ನಡುವಿನ ಸ್ನೇಹದ ಅಗಾಧತೆಯನ್ನು ತೋರಿಸುತ್ತವೆ. ಒಮ್ಮೆ ಅಂಬರೀಶ್ ರವರು ವಿಷ್ಣುವರ್ಧನ್ ರವರ ಮನೆಗೆ ಹೋಗಿದ್ದರು. ಮನೆಗೆ ಬರುತ್ತಿದ್ದಂತೆ ಅಂಬಿ ತಮ್ಮ ಸ್ಟೈಲ್’ನಲ್ಲಿ ವಿಷ್ಣುವರ್ಧನ್ ರವರನ್ನು ಗುಂಡು-ತುಂಡು ಏನು ಇಲ್ವಾ? ಹೇಳಿಕೊಳ್ಳೋದಕ್ಕೆ ದೊಡ್ಡ ಸೂಪರ್ ಸ್ಟಾರ್ ಮನೆ ಎಂದು ಅಂಬಿ ವಿಷ್ಣುವರ್ಧನ್ ರವರನ್ನು ಕಿಚಾಯಿಸಿದ್ದರು. ಅಂಬಿ ಆಸೆಯನ್ನು ಅರಿತ ವಿಷ್ಣು ಮರುದಿನವೇ ತನ್ನ ಕುಚಿಕು ಗೆಳೆಯನಿಗೆ ವಿಷ್ಣು ತನ್ನ ಮನೆಯಲ್ಲಿಯೇ ಸಣ್ಣದೊಂದು ಬಾರ್ ಕೌಂಟರ್ ಅನ್ನು ರೆಡಿ ಮಾಡಿಬಿಟ್ಟರು. ಇಂತಹ ಒಡನಾಟ ಅಂಬಿ ಮತ್ತು ವಿಷ್ಣು ಅವರದ್ದು.
ಇನ್ನೂ ಎಷ್ಟೋ ಸಲ ಅಂಬಿ ವಿಷ್ಣುಗೆ ರಾತ್ರೋರಾತ್ರಿ ಕಾಲ್ ಮಾಡಿ ಲೇ ಕುಚಿಕು ಟಿವಿ ಆನ್ ಮಾಡೋ ನಿನ್ನ ಹಳೆ ಸಿನಿಮಾದ ಹಾಡು ಬರುತ್ತಿದೆ. ಸಕ್ಕತ್ತಾಗಿ ಆಕ್ಟ್ ಮಾಡಿದ್ದೀಯಾ ಸೂಪರ್ ಎಂದು ವಿಷ್ಣುವಿನ ಅಪ್ಪಟ ಅಭಿಮಾನಿಯ ರೀತಿಯಲ್ಲಿ ಕಾಂಪ್ಲಿಮೆಂಟ್ ಮಾಡುತ್ತಿದ್ದರು. ಇನ್ನೂ ವಿಷ್ಣುವರ್ಧನ್ ಕೂಡ ಅಂಬರೀಶ್ ರವರ ಬಗ್ಗೆ ತುಂಬಾ ಮಾತನಾಡುತ್ತಿದ್ದರು. 30 ವರ್ಷದ ನನ್ನ ಮತ್ತು ಅಂಬಿಯ ಸ್ನೇಹದಲ್ಲಿ ಯಾವುದೇ ಮನಸ್ತಾಪ ಮೂಡೇ ಇಲ್ಲ. ಈ ಪ್ರಪಂಚದಲ್ಲಿ ಹೀರೋಗಳಿಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದರೆ ಅದು ನಾನು ಮತ್ತು ಅಂಬಿಯೆಂದು ಹೇಳುತ್ತಿದ್ದರು ವಿಷ್ಣು.
ವಿಷ್ಣುವರ್ಧನ್ ರವರು ಒಮ್ಮೆ ಎಲ್ಲರ ಕಣ್ಣಿನಲ್ಲೂ ನೀರು ಬರೆಸುವಂತಹ ಮಾತೊಂದನ್ನು ಹೇಳಿದ್ದರು. ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಎಲ್ಲಿದ್ದರೂ ಬಂದೇ ಬರುತ್ತಾನೆ. ಅವನಲ್ಲಿ ತುಂಬಾ ದೊಡ್ಡ ಗುಣವಿದೆ. ನಿಮ್ಮಗೆಲ್ಲಾ ತುಂಬಾ ದೊಡ್ಡವನಂತೆ ಕಾಣುವ ಅಂಬಿ ನನಗೆ ಮಾತ್ರ ಪುಟ್ಟ ಮಗುವಿನಂತೆ ಎಂದು ವಿಷ್ಣು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು.
ಸಾಹಸಸಿಂಹ ವಿಷ್ಣುವರ್ಧನ್ ರವರು ನಿಧನರಾದಾಗ ಇದೇ ರೀತಿ ಆಯಿತು. ಅಂಬಿ, ವಿಷ್ಣುವರ್ಧನ್ ಸಾವಿಗೀಡಾದ ಸುದ್ದಿ ಕೇಳಿ ಎಲ್ಲಿದ್ದರೂ ಓಡೋಡಿ ಬಂದರು. ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. ಎಷ್ಟೇ ಸಮಾಧಾನ ಮಾಡಿದ್ದರು ಅಂಬಿ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದರು. ಆಪ್ತಮಿತ್ರನ ಅಗಲಿಕೆ ಅಂಬಿಗೆ ತನ್ನ ಬದುಕಿನ ಕೊನೆಯ ದಿನದವರೆಗೂ ಕಾಡುತ್ತಲೆ ಇತ್ತು. ಏನೇ ಇರಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ರವರ ಸ್ನೇಹ ಮಾತ್ರ ಕನ್ನಡ ಚಿತ್ರರಂಗದಲ್ಲಿ ಅಮರವಾಗಿ ಉಳಿಯುತ್ತದೆ.
– ಸುಷ್ಮಿತಾ