ವಚನ – 15 ತಾತ್ವಿಕ ನೆಲೆಯಲ್ಲಿ ಅಕ್ಕನ ಆಲೋಚನೆ…

0
332

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯಾ
ಸಮುದ್ರದ ದಡದಲ್ಲಿ ಮನೆಯ ಮಾಡಿ
ನೊರೆತೊರೆಗಳಿಗಂಜಿದೊಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಅಕ್ಕನ ಕಾವ್ಯ ಪ್ರತಿಭೆ ಅಪರೂಪದ್ದು. ಅವಳು ಬಳಸುವ ಉಪಮೆ, ರೂಪಕ, ಸಂಕೇತ ಮುಂತಾದವು ಕಾವ್ಯಶಕ್ತಿಗೆ ದ್ಯೋತಕ. ಅಪಾರ ಸಹನೆ ಸಂಯಮದ ಅಕ್ಕ ಆಧ್ಯಾತ್ಮದ ಉನ್ನತ ಶಿಖರ. ವೈರಾಗ್ಯದ ಕಣಜ. ಈ ಭವ ಬಂಧನವನ್ನು ತಾತ್ವಿಕ ನೆಲೆಯಲ್ಲಿ ಆಲೋಚಿಸುವ ಬಹು ದೊಡ್ಡ ತತ್ವಜ್ಞಾನಿಯೂ ಹೌದು.

ಈ ಭೂಮಂಡಲದಲ್ಲಿ ಬಂದು ಹೋಗುವ ಮನುಷ್ಯನಿಗೆ ಬದುಕೇ ಒಂದು ಸವಾಲು. ಆ ಸಾವಲನ್ನು ಸ್ವೀಕರಿಸಿ ನಿಭಾಯಿಸುವುದೇ ಜೀವನ ಪಯಣ. ಪ್ರತಿಯೊಬ್ಬ ಮನುಷ್ಯನು ತನ್ನ ಬುದ್ಧಿ, ತಿಳುವಳಿಕೆ, ಜ್ಞಾನದ ಆಧಾರದ ಮೇಲೆ ಬದುಕು ನಡೆಸುವ ರೀತಿ ಅವಲಂಬಿತ. ಹಾಗೆ ಬದುಕು ನಡೆಸುವ ಮಾನವರಿಗೆ ಕಿವಿ ಮಾತು ಈ ವಚನ.

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ
ಈ ಸಾಲುಗಳು ಮೇಲ್ನೋಟಕ್ಕೆ ಒಂದು ರೀತಿ ಕಂಡರೂ, ಒಳಾರ್ಥದಲ್ಲಿ ಮತ್ತೇನೊ ಹೇಳುವಂತೆ ಧ್ವನಿಸುವುದು. ಗುಡ್ಡ, ಬೆಟ್ಟ, ಕಾಡುಗಳೆಲ್ಲ ಗಿಡ, ಮರ, ಬಳ್ಳಿಗಳಿಂದ ಸುತ್ತುವರಿದಿರುತ್ತವೆ. ಅಲ್ಲಿ ಪಶು, ಪಕ್ಷಿಗಳ ವಾಸ್ತವ್ಯ ಸಹಜ. ಅಂಥಲ್ಲಿ ಹೋಗಿ ಮನುಷ್ಯ ಮನೆ ಮಾಡಿದರೆ ಪ್ರಾಣಿಗಳ ಆತಂಕ ಇದ್ದೇ ಇರುವುದು. ಅಲ್ಲಿ ಮನೆ ಮಾಡುವುದಕ್ಕಿಂತ ಮೊದಲು ಯೋಚಿಸಬೇಕಾಗುತ್ತದೆ. ಒಮ್ಮೆ ಅಲ್ಲಿ ನೆಲೆಸಿದ ಮೇಲೆ ಮೀನಾ ಮೇಷ ಎಣಿಸುವುದು ಸರಿಯಲ್ಲ. ಅಲ್ಲಿ ವಾಸವಾಗಿರುವ ಮೃಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಬಗೆಯನ್ನು ಅರಿತು ಜಾಣತನದಲ್ಲಿ ಬದುಕು ಸಾಗಿಸುವ ಮಾರ್ಗ ಕಂಡುಕೊಳ್ಳಬೇಕು.

ಇನ್ನೊಂದು ಅರ್ಥದಲ್ಲಿ ಬೆಟ್ಟ ಎಂದರೆ ಸಿರಿವಂತ ಜನರು. ಮೃಗಗಳು ಎಂದರೆ ಶ್ರೀಮಂತಿಕೆಯಿಂದ ಮೆರೆಯುವ ಜೋರು, ದರ್ಪದ ವ್ಯಕ್ತಿಗಳು. ಇಂಥವರ ಸಹವಾಸದಲ್ಲಿ ಬಂದರೆ ಅವರ ಮೃಗೀಯ ಗುಣಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುವುದು. ಇದು ಇನ್ನೊಂದು ಅರ್ಥದ ಗ್ರಹಿಕೆ.

ಸಮುದ್ರದ ದಡದಲ್ಲಿ ಮನೆಯ ಮಾಡಿ ನೊರೆತೊರೆಗಳಿಗಂಜಿದೊಡೆಂತಯ್ಯಾ
ಪ್ರಕೃತಿಯ ಎದುರು ಮನುಷ್ಯ ಬಹಳ ಚಿಕ್ಕವನು. ಅದು ವಿಕೋಪದ ದಾರಿ ಹಿಡಿದರೆ ಮನುಜರೆಲ್ಲ ಅಸಹಾಯಕರು. ಸಾಗರ, ಸಮುದ್ರ, ಕಡಲು ಎಂದರೆ ಭಯಾನಕತೆಯ ಅನುಭವವಾಗುವುದು. ಅದು ವಿಶಾಲವೂ ಆಗಾಧವೂ ಹೌದು.

ಸಮುದ್ರ ತಟದಲ್ಲಿರುವ ಮರಳು ರಾಶಿ ಹೇಗೆ ಶೇಖರಿಸುತ್ತದೆ? ಅದು ಸಮುದ್ರದಿಂದಲೇ ಸಾಧ್ಯ. ಮೇಲಿಂದ ಮೇಲೆ ಕಲ್ಲುಬಂಡೆಗಳಿಗೆ ರಭಸವಾಗಿ, ದೈತ್ಯನಂತೆ ಬಂದು ಅಪ್ಪಳಿಸುವ ಅಲೆಗಳು ಭಯಂಕರ ಶಕ್ತಿಯುತ. ಅದರ ಶಕ್ತಿ ಎಷ್ಟಿರುತ್ತದೆಂದರೆ, ಪ್ರತಿ ಬಾರಿಯ ಹೊಡೆತಕ್ಕೆ ಕಲ್ಲು ಒಡೆದು, ಪುಡಿಪುಡಿಯಾಗಿ ಮರಳ ರೂಪ ಪಡೆದುಕೊಳ್ಳುತ್ತ ಹೋಗುತ್ತದೆ. ಎಷ್ಟೊ ಕಾಲದ ಹೊಡೆತದಿಂದಾಗಿ ಮರಳ ರಾಶಿ. ಅಂತಹ ಸ್ಥಳದಲ್ಲಿ ಮನುಷ್ಯ ಮನೆ ಮಾಡಿದರೆ ಹೇಗೆ ಬದುಕಲು ಸಾಧ್ಯ? ಆದರೂ ಎದೆಗುಂದದೆ ಬಾಳಿ ಛಲದಿಂದ ಬದುಕಬೇಕೆನ್ನುವುದೇ ಇದರ ಅರ್ಥ.

ಇನ್ನೊಂದು ಅರ್ಥದಲ್ಲಿ ನೆಲೆ ಇಲ್ಲದವರು, ನಿರ್ಗತಿಕರು, ಕಡುಬಡವರು ಎಲ್ಲೆಂದರಲ್ಲಿ ಐದಾರು ಅಡಿ ಜಾಗವನ್ನು ಆಕ್ರಮಿಸಿ ನೆಲೆಸಲು ಆರಂಭಿಸುವರು. ಆ ಸ್ಥಳದ ಮಾಲಿಕತ್ವ ಹೊಂದಿದವರು, ಆಚಾನಕ್ಕಾಗಿ ಬಂದು ನಿರ್ದಯೆ, ನಿಷ್ಕರುಣಿಯಾಗಿ ನಿರ್ಗತಿಕರನ್ನು ಎನೂ ಇಲ್ಲದಂತೆ ಮಾಡುವರು. ಅವರು ವಾಸಿಸುತ್ತಿದ್ದ ಸ್ಥಳವನ್ನು ಒತ್ತಾಯಪೂರ್ವಕವಾಗಿ ಬಿಡಿಸುವರು.ಆ ಬಡವರ ಪಾಲಿಗೆ ಅಪ್ಪಳಿಸುವ ಸಾಗರದ ಅಲೆಗಿಂತಲೂ, ಅದೊಂದು ಸುನಾಮಿಯೇ ಸರಿ.

ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ
ಇತ್ತೀಚಿನ ಮಾಲ್, ಬಿಗ್ ಬಜಾರ್ ಕಾಲಮಾನದಲ್ಲಿ ಸಂತೆ ಎಂದರೇನೆಂದು ಹೊಸ ಪೀಳಿಗೆಗೆ ಗೊತ್ತಿರುವುದು ಕಷ್ಟಸಾಧ್ಯ. ಊರೊಳಗೆ ವಾರಕೊಮ್ಮೆ ನಡೆಯುವುದೇ ಸಂತೆ. ಇಡೀ ಊರ ಜನರಿಗೆ ಅವಶ್ಯಕತೆ ಇರುವ ಎಲ್ಲಾ ಸಾಮಾನು ಸರಂಜಾಮುಗಳು ಅಲ್ಲಿ ಲಭ್ಯ. ಖರೀದಿಸಲು ಗ್ರಾಹಕರ ನೂಕು ನುಗ್ಗಲು. ಎಲ್ಲರಿಗೂ ಅವಸರ. ಕೊಂಡುಕೊಳ್ಳುವ ಧಾವಂತ. ಮಾತುಕತೆ, ಚರ್ಚೆ, ಚೌಕಾಶಿ ಮಾಡುವ ಕರ್ಕಶ ಕೂಗಾಟ. ಹೀಗೆ ನಡೆಯುವ ವ್ಯಾಪಾರಿ ತಾಣವೇ ಸಂತೆ. ಅಂಥ ಸಂತೆಯೊಳಗೆ ಮನೆಯ ಮಾಡಿ, ಅಲ್ಲಿ ಗಲಾಟೆಗೆ ಹೆದರಿದರೆ ಹೇಗೆ?

ಇನ್ನೊಂದು ತಾತ್ವಿಕ ಅರ್ಥದಲ್ಲಿ ಈ ಜಗತ್ತೊಂದು ವ್ಯಾಪಾರದ ತಾಣ. ಈ ಬದುಕೇ ಒಂದು ಸಂತೆಯಿದ್ದಂತೆ. ಇಲ್ಲಿ ಬಂದು ಹೋಗುವ ಜನಕ್ಕೆ ಲೆಕ್ಕವೇ ಇಲ್ಲ. ಈ ವ್ಯಾಪಾರದಲ್ಲಿ ತಾನು ಬದುಕು ಕಂಡುಕೊಂಡು, ಜೀವನದ ನೆಲೆ ಕಾಣಲು ಧೈರ್ಯ, ಸ್ಥೈರ್ಯ ಬೇಕು. ಸಂತೆಯೊಳಗಿದ್ದರೂ, ಅಲ್ಲಿಯ ಗಲಾಟೆಗೆ ಎದೆಗುಂದದೆ ಛಲದಿಂದ ಬದುಕು ನಡೆಸುವುದು ಅನಿವಾರ್ಯ ಮತ್ತು ಸವಾಲಾಗಿದೆ.

ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟಿ ಬಂದ ಮೇಲೆ ತನ್ನಿಂದ ತಾನೇ ಬದುಕಿನ ಪಯಣ ಆರಂಭವಾಗುವುದು. ‘Man is a social animal.’ ಸಮಾಜಶಾಸ್ತ್ರದ ಈ ಹೇಳಿಕೆ ಅಕ್ಷರಶಃ ಸತ್ಯ. ಸಂಘ ಜೀವನ, ಸಂಘ ಪರಿವಾರದಲ್ಲಿ ಸಮಯ ಕಳೆಯುವ ತವಕ.

‘ಒಬ್ಬರಿಗಿಂತ ಇಬ್ಬರು ಲೇಸು.’ ‘ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ.’ ಜನರ ಸಂಖ್ಯೆ ಹೆಚ್ಚಾದಂತೆಲ್ಲಾ ಮಾತುಕತೆ, ಚರ್ಚೆ, ವಾದ, ವಿವಾದ ಆರಂಭವಾಗುವವು. ಬದುಕಿನ ಪ್ರತಿ ಹಂತದಲ್ಲೂ ಸ್ಪರ್ಧೆ ಏರ್ಪಡುವುದು. ಅಂಥ ಸಂದರ್ಭದಲ್ಲಿ ಜನ ಹೊಗಳಲಿ, ತೆಗಳಲಿ, ಬೈಯಲಿ ಎಲ್ಲವನ್ನೂ ಸಮಾನ ಮನಸ್ಥಿತಿಯಿಂದ ಸ್ವೀಕರಿಸಬೇಕು. ಶರಣರು, ಬಸವಣ್ಣನವರು ಹೇಳುವಂತೆ ಹೇಳಿಕೊಳ್ಳಬೇಕು. ‘ಬೈದವರೆನ್ನ ಬಂಧುಗಳೆನ್ನಿ’, ‘ಎನಗಿಂತ ಕಿರಿಯರಿಲ್ಲ’,

‘ಎನ್ನ ವಾಮ – ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ – ವೃದ್ಧಿ ನಿಮ್ಮದಯ
ಎನ್ನ ಮಾನಾಪಮಾನವೂ ನಿಮ್ಮದಯ್ಯಾ
ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ.

ಆಗ ಮನದಲ್ಲಿ ಮೂಡುವ ಸಿಟ್ಟು, ಕೋಪ, ತಾಪಕ್ಕೆ ಕಡಿವಾಣ ಹಾಕಬಹುದು. ಶಾಂತಚಿತ್ತರಾಗಿ ಜೀವನ ಸಾಗಿಸಲು ಸಾಧ್ಯ. ಯಾರ ಮಾತಿಗೂ ಧೃತಿಗೆಡದೆ ಸಮಾಧಾನದಿಂದ ಇರಬೇಕೆಂದು ಅಕ್ಕನ ಆಶಯ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

LEAVE A REPLY

Please enter your comment!
Please enter your name here