ವಚನ – 17 ಚಂಚಲಚಿತ್ತಕ್ಕೆ ಸಮಚಿತ್ತದ ಭಾವ

0
231

ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ
ಎಡರಿಂಗೆ ಕಡೆಯುಂಟೆ ಅವ್ವಾ?
ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ
ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ?

ಅಂದು ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿಯು ತನ್ನ ಅರಿವಿನ, ಅನುಭಾವದ ನೆಲೆಯಲ್ಲಿ ಆಧ್ಯಾತ್ಮದ ತುದಿಗೇರಿದ ಪಥ, ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ಕಷ್ಟ ಕೋಟಲೆ, ದುಗುಡ ದುಮ್ಮಾನ, ಎಡರು ತೊಡರು, ವಿರೋಧ ಪ್ರತಿರೋಧಗಳನ್ನು ಮೆಟ್ಡಿ ನಿಂತಾಗ ಒಂದು ಹಂತವನ್ನು ತಲುಪಿದಳು. ಅಕ್ಕನಿಗೆ ತನ್ನ ಗುರಿ ಸಾಧನೆಯ ಮಾರ್ಗ ಒಂದೇ ಮೂಲಭೂತ ಧ್ಯೇಯವಾಗಿದ್ದನ್ನು ಮರೆಯುವಂತಿಲ್ಲ. ಅಕ್ಕ ತನ್ನ ಸಾಧನೆಯ ಮಾರ್ಗದಲ್ಲಿ ಮುಂದಡಿ ಇಡುವಾಗ, ಸಮಾಜದ ಜೊತೆ ಜೊತೆಯಲ್ಲಿ ಸಾಗಬೇಕಾದುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.

ಸಮಾಜ, ಸಂಸಾರ, ರಾಜ ವೈಭವ, ಮಹಾರಾಜನ ಆಡಳಿತದ ದರ್ಪ, ಶರಣರ ಪ್ರೇರಣೆ ಈ ಎಲ್ಲವನ್ನೂ ನೋಡುತ್ತ, ಕೇಳುತ್ತ, ಅದರೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಸಾಗುತ್ತಾಳೆ. ಉಡುತಡಿಯಿಂದ ಕದಳಿಯವರೆಗಿನ ಪಯಣದಲ್ಲಿ ಮನುಷ್ಯ ಗುಣಧರ್ಮದ ಅನೇಕ ಆಯಾಮಗಳನ್ನು ಗುರುತಿಸಿ, ಆಧ್ಯಾತ್ಮದ ನೆಲೆಯಲ್ಲಿ ತನ್ನದೇ ದೃಷ್ಟಿಕೋನ ಇಟ್ಟುಕೊಂಡು ವಚನ ರಚಿಸಿದ್ದು ಅಕ್ಕನ ಕವಿತ್ವದ ಹಿರಿಮೆ.

ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ ಎಡರಿಂಗೆ ಕಡೆಯುಂಟೆ ಅವ್ವಾ?

ಹೀಗೊಂದು ಕತೆ…

ರಾಮಪ್ಪ ಒಂದು ಕೋತಿ ಸಾಕಿರುತ್ತಾನೆ. ಅಡಿಗೆ ಮಾಡಲು ಕಟ್ಟಿಗೆ ತರುವಂತೆ ಕೋತಿಗೆ ಹೇಳುತ್ತಾನೆ. ಮಾಲಿಕನಿಗೆ ವಿಧೇಯನಾಗಿ ಕೋತಿ ಗರಗಸ ಹಿಡಿದುಕೊಂಡು ಹತ್ತಿರದ ಕಾಡಿಗೆ ಹೋಗುತ್ತದೆ. ತನಗೆ ಅನುಕೂಲವಾಗುವ ಕೊಂಬೆಯ ಮೇಲೆ ಕೂತು ಮರ ಕತ್ತರಿಸಲಾರಂಭಿಸುತ್ತದೆ. ಆಗ ದಾರಿಯಲ್ಲಿ ಹೋಗುವವರೆಲ್ಲಾ ಕೋತಿಯನ್ನೇ ನೋಡುತ್ತ ನಕ್ಕು ಹೋಗುತ್ತಾರೆ. ಕೋತಿಯು ನೋಡಿ ಸುಮ್ಮನೆ ತನ್ನ ಕೆಲಸದಲ್ಲಿ ತಾನು ಮಗ್ನನಾಗುತ್ತದೆ. ಒಬ್ಬ ವ್ಯಕ್ತಿ ಇದರ ಕೆಲಸ ನೋಡುತ್ತ ನಿಂತು ಬಿಡುತ್ತಾನೆ. ಕೋತಿ ‘ಹಿಸ್ಸ್…!’ ಎಂದು ಅವನಿಗೆ ಹಲ್ಲು ತೋರಿಸಿ ಮತ್ತೆ ‘ಗರ್ ಗರ್’ ಗರಗಸ ಶಬ್ದ ಮಾಡುತ್ತದೆ.

ಕೆಳಗಿದ್ದ ವ್ಯಕ್ತಿ ಕೂಗಿ ಹೇಳುತ್ತಾನೆ, ‘ಏ ಕೋತಿರಾಯ, ಏನು ಮಾಡುತ್ತಿರುವೆ? ನಿನಗೆ ಕೊಂಬೆ ಕತ್ತರಿಸುವುದಿದ್ದರೆ ಆ ಮಗ್ಗುಲಲ್ಲಿ ಕೂತು ಕತ್ತರಿಸು. ಹೀಗೆ ಕತ್ತರಿಸಿದರೆ ಕೊಂಬೆಯ ಜೊತೆ ನೀನೂ ಕೆಳಗೆ ಬೀಳುತ್ತಿಯಾ. ಅನಾಹುತವಾಗುತ್ತೆ. ನಿಲ್ಲಿಸು! ನಿಲ್ಲಿಸು! ‘ಆ ವ್ಯಕ್ತಿ ಎಷ್ಟೇ ಹೇಳಿದರೂ ಕೋತಿ ಮಾತು ಕೇಳಲಿಲ್ಲ. ‘ತಾಳು ನಿನ್ನ ಮಾಲಿಕ ರಾಮಪ್ಪನಿಗೆ ಹೇಳುವೆ.’ ಕೋತಿ ಮತ್ತೆ ‘ಹಿಸ್ಸ್…’ ಎಂದು ಗರಗಸ ಓಡಿಸಲಾರಂಭಿಸಿತು.

ಈ ವಿಷಯ ತಿಳಿದ ಕೂಡಲೆ ರಾಮಪ್ಪ ಓಡಿ ಬಂದ. ಅಷ್ಟರಲ್ಲಿ ನಡೆಯಬಾರದ್ದು ನಡೆದೇ ಹೋಗಿತ್ತು. ಕೋತಿ ಕಾಲು ಮುರಿದುಕೊಂಡು ನರಳಾಡುತ್ತ ಬಿದ್ದಿತ್ತು. ಮರದ ಕೊಂಬೆ, ಗರಗಸ ಅಲ್ಲೇ ಕೋತಿ ಪಕ್ಕದಲ್ಲಿ ಬಿದ್ದಿದ್ದವು. ಕೋತಿಯ ಮೂರ್ಖತನಕ್ಕೆ ರಾಮಪ್ಪ ಸುಸ್ತಾಗಿ ಹೋದ. ಅದರ ಶುಶ್ರೂಷೆಗೆ ಮುಂದಾದ. ಇಲ್ಲಿ ಕೋತಿ ವಿವೇಚನೆ ಇಲ್ಲದೆ ತಪ್ಪು ಮಾಡುತ್ತದೆ.

ಇನ್ನೊಂದು ಉದಾಹರಣೆ…

ಒಂದು ಬಡ ಕುಟುಂಬ. ತಂದೆ ತಾಯಿ ಎರಡು ಮಕ್ಕಳು. ತಂದೆಗೆ ಬಾಯಿಯಲ್ಲಿ ಕ್ಯಾನ್ಸರ್ ಆಗಿರುತ್ತದೆ. ಮನೆಯಲ್ಲಿ ಎಲ್ಲರಿಗೂ ತಂಬಾಕು ತಿನ್ನುವ ಅಭ್ಯಾಸ. ಅಭ್ಯಾಸ ಎನ್ನುವುದಕ್ಕಿಂತ ಚಟ. ತಂದೆ ಯಾವತ್ತೂ ಉಪಯೋಗಿಸುತ್ತಲೇ ಬಂದಿದ್ದ. ತಾಯಿಗೆ ಹಲ್ಲು ನೋವು ಬಂದಾಗ ಆರಂಭಿಸಿದಳು. ಆ ನೋವು ಮರೆಮಾಚಲು ಬಳಸುತ್ತಾಳೆಂದು ಹೇಳುತ್ತಾರೆ. ಮಗ ಅಪ್ಪ ಅಮ್ಮನ ಅನುಕರಣೆ ಮಾಡುತ್ತ ಇದಕ್ಕೆ ಬಲಿಯಾದ. ಕೊನೆಗೆ ಅಪ್ಪನಿಗೆ ಕ್ಯಾನ್ಸರ್ ಆದ ಮೇಲೆ ಎಲ್ಲರಿಗೂ ಶಾಕ್ ಆಯಿತು.

ಅವರಿಗೆಲ್ಲಾ ವೈದ್ಯರು ದುಶ್ಚಟಗಳ ಅಡ್ಡ ಪರಿಣಾಮಗಳನ್ನು ತಿಳಿಸಿ ಹೇಳಿದ್ದರು. ಆ ಕುಟುಂಬದ ಎಲ್ಲಾ ಸದಸ್ಯರು, ಹೆಣ್ಣು ಮಗಳನ್ನು ಬಿಟ್ಟು ಉಳಿದವರೆಲ್ಲಾ ತಂಬಾಕು ಸೇವನೆ ಮಾಡುವುದನ್ನು ಮುಂದುವರಿಸಿದರು. ಕ್ಯಾನ್ಸರ್ ಟ್ರೀಟ್ಮೆಂಟ್ ಗೆ ಹಣ ಇಲ್ಲ. ಆದರೂ ತಂಬಾಕಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಅಲ್ಪಸ್ವಲ್ಪ ಓದಿದ ಮಗನಿಗೆ ಮುಂದೊಂದು ದಿನ ಅಪ್ಪನ ಪರಿಸ್ಥಿತಿ ತನ್ನದಾಗಬಹುದೆಂಬ ಪರಿಕಲ್ಪನೆ ಇತ್ತು. ಆದರೂ ಚಟ ಕೈಬಿಡಲಿಲ್ಲ.

ಬದುಕೇ ಕೈ ಬಿಡುವುದೆಂದು ಗೊತ್ತಿದ್ದರೂ ಮಾಡುವ ‘ತಪ್ಪು’ ಇದು. ತಿಳಿದೂ ತಿಳಿದು ತಪ್ಪು ಮಾಡಿದಾಗ ಅದಕ್ಕೆ ಅರ್ಥವಿರುವುದಿಲ್ಲ. ಈ ಎರಡೂ ಕತೆಯಿಂದ ತಿಳಿದು ಬರುವುದೇನೆಂದರೆ, ಗೊತ್ತಿದ್ದು ತಪ್ಪು ಮಾಡಬಾರದು. ಗೊತ್ತಿಲ್ಲದೆ ತಪ್ಪು ಮಾಡಿದಾಗ ತಿದ್ದಿಕೊಳ್ಳುವುದು. ಅವ್ವನನ್ನು ಸಂಬೋಧಿಸುವ ಅಕ್ಕನ ವಚನದಲ್ಲಿ ಹೇಳಿರುವಂತೆ ಕಲ್ಲನ್ನು ಹೊತ್ತುಕೊಂಡು ಕಡಲಲ್ಲಿ ಇಳಿದರೆ ಸಾವು ನಿಶ್ಚಿತ. ಇಲ್ಲಿ ಎಡರು ಅಂದರೆ ಬಿಟ್ಟು ಹೋಗುವುದು. ಈ ದೇಹದಿಂದ ಪ್ರಾಣ ಹಾರಿ ಹೋಗುತ್ತದೆ. ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಉಂಡು ಹಸಿವಾಯಿತ್ತೆಂದಡೆ ಭಂಗವೆಂಬೆ

ಮನುಷ್ಯನಿಗೆ ಇರುವುದು ಮೂರು ಹಸಿವುಗಳು.
ಹೊಟ್ಟೆಯ ಹಸಿವು
ದೇಹದ ಹಸಿವು
ಮಾನಸಿಕ ಹಸಿವು

ಇಲ್ಲಿ ಎರಡು ಅರ್ಥದಲ್ಲಿ ಬಳಸಲಾಗಿದೆ. ಊಟ ಮಾಡಿ ಹೊಟ್ಟೆ ತುಂಬಿದ ಮೇಲೆ ಮತ್ತೆ ಹಸಿವೆಂದು ಆಹಾರ ಸೇವಿಸಿದರೆ, ಆರೋಗ್ಯ ಕೆಡುತ್ತದೆ. ಹಾಗೆಯೇ ಮದುವೆಯಾದವರು ಹೆಂಡತಿಗೆ ಮೋಸ ಮಾಡುವುದೊ ಅಥವಾ ಹೆಂಡತಿ ಗಂಡನಿಗೆ ಮೋಸ ಮಾಡುವುದು ಕೂಡ ಅಷ್ಟೆ ಹಾನಿಕಾರಕ. ಊಟದಿಂದ ಆರೋಗ್ಯ ಕೆಟ್ಟರೆ, ಅನ್ಯರ ಸಹವಾಸದಿಂದಲೂ ಆರೋಗ್ಯ ಮತ್ತು ವೈವಾಹಿಕ ಸಂಬಂಧ ಕೆಡುತ್ತದೆ. ಇಲ್ಲಿ ಭಂಗ ಎನ್ನುವ ಶಬ್ದ ಬಹಳ ಸೂಕ್ಷ್ಮವಾದುದು. ಭಂಗ ಎಂದರೆ ಕೆಡಿಸುವುದು, ಮುರಿಯುವುದು ಅಥವಾ ಉಲಂಘನೆ ಎಂದರ್ಥ.

ಮಿತಿಯನ್ನು ಮೀರಿ ಬಯಸುವುದು ದಾಹ. ದಾಹಕ್ಕೆ ಒಳಗಾದರೆ ಅದು ವೈಯಕ್ತಿಕ ನೆಲೆಯ ಉಲಂಘನೆ. ಮನದ ಕಾನೂನು ಮುರಿಯಬಾರದೆಂದು ಅಕ್ಕ ಬಹಳ ನವಿರಾಗಿ ಹೇಳಿದ್ದಾಳೆ. ಹೊಟ್ಟೆ ಹಸಿವನ್ನು ಮತ್ತು ದೈಹಿಕ ಹಸಿವನ್ನು ನಿಯಂತ್ರಣದಲ್ಲಿಡಲು ಮಾನಸಿಕ ಹಸಿವು ಸಹಾಯ ಮಾಡುತ್ತದೆ. ಅದಕ್ಕೆ ನಮ್ಮದೇ ಆದ ಮಾರ್ಗವಿರುತ್ತದೆ. ವ್ಯಕ್ತಿ ಯೋಗ, ಧ್ಯಾನ, ವಯಸ್ಸಿಗನುಣವಾದ ಸರಳ ನಡಿಗೆ ರೂಢಿಸಿಕೊಂಡಲ್ಲಿ ಅನೇಕ ಆಪತ್ತುಗಳನ್ನು ಮೀರಿ ಬೆಳೆಯಬಹುದು.

ಕಂಡ ಕಂಡ ಠಾವಿನಲ್ಲಿ ಮನ ಬೆಂದಡೆ

ಯುವಕ ರವಿ ಬೆಳೆದು ನಿಂತಿದ್ದಾನೆ. ಜೊತೆಯಲ್ಲಿ ಓದು, ಬರಹ ಮುಗಿಸಿದ ಜಾಣ. ಜೀವನ ನಡೆಸಲು ಒಳ್ಳೆ ಕೆಲಸ ಹುಡುಕಿಕೊಂಡಿದ್ದಾನೆ. ಆಗ ಮನೆಯವರೆಲ್ಲಾ ಸೇರಿ ಮದುವೆ ಮಾಡಿಕೊಳ್ಳಲಿ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ಶುರುವಾಗಿದ್ದು ಹೆಣ್ಣು ನೋಡುವ ಪ್ರಕ್ರಿಯೆ. ಸುಮಾರು ಹತ್ತು ಹನ್ನೆರಡು ವಧು ಪರೀಕ್ಷೆಯಾದರೂ ಹುಡುಗನಿಗೆ ಹಿಡಿಸಲಿಲ್ಲ. ತಂದೆ ಗುಟ್ಟಾಗಿ ಕರೆದು ಏಕಾಂತದಲ್ಲಿ ಕೇಳುತ್ತಾನೆ. ‘ಯಾಕೆ ನಿನಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ? ಎಲ್ಲಿ ನಿನಗೆ ತೊಂದರೆ ಆಗುತ್ತಿದೆ? ಮನಸು ಬಿಚ್ಚಿ ಹೇಳು. ಸಲಹೆ ಕೊಡುವೆ.’

ಆಗ ಮಗ ತನ್ನ ಗೊಂದಲ ಹೇಳುತ್ತಾನೆ, ‘ಅಪ್ಪ… ನನಗೆ ಒಂದೇ ಹುಡುಗಿಯಲ್ಲಿ ನಾನು ಬಯಸಿದ್ದೆಲ್ಲಾ ಸಿಗುತ್ತಿಲ್ಲ. ರೂಪ, ಬಣ್ಣ, ಎತ್ತರ, ಶಿಕ್ಷಣ, ಅಭಿರುಚಿ ಎಲ್ಲಾ ಗಮನಿಸಿದಾಗ ಒಬ್ಬರೂ ಇಷ್ಟವಾಗುತ್ತಿಲ್ಲ. ‘ಮಗನೆ ನಾವು ನಮ್ಮ ಹುಚ್ಚು ಮನಸಿಗೆ ಕಡಿವಾಣ ಹಾಕಬೇಕು. ಒಬ್ಬಳ ಕಣ್ಣು ಚಂದ ಇದ್ದರೆ, ಇನ್ನೊಬ್ಬಳ ಬಣ್ಣ ಚಂದ. ಕಂಡ ಕಂಡವರ ಚಂದ ನೋಡಿ ಅವರ ಹಿಂದೆ ಹೋಗಲು ಸಾಧ್ಯವಿಲ್ಲ. ವಿಶಾಲವಾದ ಒಂದು ದೃಷ್ಟಿ ಇಟ್ಟುಕೊಂಡು ನೋಡು, ಆಗ ಆಯ್ಕೆ ಸುಲಭವಾಗುತ್ತದೆ.’

‘ಅಪ್ಪ ತಿಳಿತು. ಮೊನ್ನೆ ನೋಡಿದ ನಿಮ್ಮ ಸ್ನೇಹಿತರ ಮಗಳು ಚೆನ್ನಾಗಿದ್ದಾಳೆ. ಅವಳೆ ಫೈನಲ್.’
ಅಲ್ಲಿಗೆ ಆ ಚರ್ಚೆ ಗೊಂದಲದಿಂದ ಮುಕ್ತವಾಗಿ ಮದುವೆಯಲ್ಲಿ ಮುಕ್ತಾಯವಾಯಿತು. ಇಲ್ಲಿ ‘ಮನಸು’ ಬಹಳ ಮುಖ್ಯ. ಆ ಮನದ ಹಿನ್ನೆಲೆಯಲ್ಲೇ ಆಲೋಚನಾ ಕ್ರಮ ನಡೆದಿರುತ್ತದೆ. ಮಗನ ಮನಸು ಸ್ಥಿರವಾಗಿರಲ್ಲ. ಚಂಚಲವಾಗಿದೆ. ಅದಕ್ಕೆ ಅಪ್ಪನ ಮಾತುಗಳು ಕಡಿವಾಣ ಹಾಕಿದಂತಾಯಿತು. ಮನಸು ನಿಯಂತ್ರಣಕ್ಕೆ ಸಿಕ್ಕರೆ ಬದುಕು ಸುಂದರ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಗಾದೆ ಮಾತು, ‘ಕಂಡಿದ್ದೆಲ್ಲಾ ಬೇಕು ಹುಚ್ಚ ಮುಂಡೇದಕ್ಕೆ’.

ಕಂಡ ಕಂಡಲ್ಲಿ ಮನಸ್ಸನ್ನು ಹರಿ ಬಿಟ್ಟರೆ ಅದು ಬೆಂಕಿಯಲ್ಲಿ ಬೆಂದಂತೆ ಎನ್ನುವ ತಾತ್ಪರ್ಯ ಈ ಸಾಲಿನಲ್ಲಿ ಅಡಗಿದೆ.

ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವಾ?

ಅಕ್ಕನ ಆಧ್ಯಾತ್ಮದ ಚರಮ ಸೀಮೆ ಚೆನ್ನಮಲ್ಲಿಕಾರ್ಜುನನನ್ನು ಪಡೆಯುವುದು. ಆದರೆ ನಾವು ಹುಲು ಮಾನವರು ಏನೇನೊ ಉದ್ದೇಶ ಇಟ್ಟುಕೊಂಡು ಬದುಕುತ್ತೇವೆ. ನಮ್ಮ ಬದುಕಿನ ಗುರಿ ಸಾಧನೆ ಮಾಡಬೇಕಾದರೆ, ಒಂದೇ ಮಾರ್ಗ ಹಿಡಿದು ಮುನ್ನುಗ್ಗಬೇಕು. ತಪ್ಪು ಮಾಡುವುದು ಮನುಷ್ಯ ಸಹಜ ಗುಣ. ತಪ್ಪು ಮಾಡಿದಾಗ ಅದರಿಂದ ಹೊರಬಂದು, ಸರಿ ಮತ್ತು ತಪ್ಪಿನ ವ್ಯತ್ಯಾಸವನ್ನು ಮನಗಾಣಬೇಕು. ಗೊತ್ತಿಲ್ಲದೆ ಮಾಡಿದ ತಪ್ಪನ್ನು ತಿಳಿದುಕೊಂಡು ಇನ್ನೊಮ್ಮೆ ಪುನರಾವರ್ತನೆಯಾಗದಂತೆ ಎಚ್ಚರವಹಿಸುವುದು ಸೂಕ್ತ. ಯಾವುದೇ ರೀತಿಯ ಕಾನೂನನ್ನು ಮುರಿಯದ ಎಚ್ಚರಿಕೆ ಅವಶ್ಯಕ.

ಹೀಗೆ ಮಾಡಲು Devotion, Detachment, Determination ಗುಣಗಳನ್ನು ರೂಢಿಸಿಕೊಳ್ಳುವುದೇ ಸರಿಯಾದ ಮಾರ್ಗ. ಅಂದರೆ ಧ್ಯಾನದಿಂದ ಮನದ ನಿಯಂತ್ರಣ, ಬೇಕಾಗಿದ್ದನ್ನು ಮಾತ್ರ ಸ್ವೀಕರಿಸಿ, ಉಳಿದಿದ್ದನ್ನು ಬೇಡ ಎಂದು ನಿರಾಕರಿಸುವ ಮನಸ್ಥಿತಿ, ಮಾಡೇ ಮಾಡುತ್ತೇನೆ ಎನ್ನುವ ಛಲವಿದ್ದರೆ, ವ್ಯಕ್ತಿ ಬದುಕಿನಲ್ಲಿ ಸೋಲುವುದಿಲ್ಲ ಎನ್ನುವ ಭಾವ ಅಕ್ಕನ ಈ ವಚನದಲ್ಲಿದೆ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

LEAVE A REPLY

Please enter your comment!
Please enter your name here