ವಚನ – 14 ತನು ಮನದ ಭಾವದಲೆಯಲಿ ಲಿಂಗಪೂಜೆ…

0
221

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ.

ಅಕ್ಕನ ಈ ವಚನವನ್ನು ಅರ್ಥೈಸಿಕೊಳ್ಳಲು ಹನ್ನೆರಡನೇ ಶತಮಾನದ ಪರಿಸರವನ್ನು ಮೆಲುಕು ಹಾಕುವುದು ಅವಶ್ಯಕ.

ಹನ್ನೆರಡನೇ ಶತಮಾನದ ಶಿವಶರಣರು ಅದ್ಭುತವಾಗಿ ಬದುಕು ಕಟ್ಟಿಕೊಂಡು ಮಾದರಿ ಜೀವನ ನಡೆಸಿದವರು. ಬಸವಾದಿ ಶರಣರ ಮುಖ್ಯ ಆಶಯಗಳಲ್ಲಿ ಪ್ರಮುಖವಾದವು ಮೂರು. ಒಂದು ಏಕದೇವೋಪಾಸನೆ, ಎರಡು ವರ್ಣ ವ್ಯವಸ್ಥೆಯಿಂದ ಹಿಡಿದು ಜಾತಿ ನಿರ್ಮೂಲನೆ ಮತ್ತು ಸ್ತ್ರೀ ಸ್ವಾತಂತ್ರ್ಯ.

ಬಸವಣ್ಣನವರ ದೇವರ ಪರಿಕಲ್ಪನೆ ವಿಶಿಷ್ಠವಾದುದು. ಅಂದು ಗುಡಿ ಗುಂಡಾರಗಳಲ್ಲಿ ನಂಬಿಕೆ ಇಟ್ಟು, ಮೇಲ್ವರ್ಗ ಕೆಳವರ್ಗದ ವಿಂಗಡಣೆಯಲ್ಲಿ ಸಮಾಜ ನಲುಗಿ ಹೋದ ಸಂದರ್ಭ. ಅಂತಹ ಸಮಯದಲ್ಲಿ ಬಸವಣ್ಣನವರು ಏಕದೇವೋಪಾಸನೆಯ ರೂಪದಲ್ಲಿ ಇಷ್ಟಲಿಂಗದ ಪರಿಕಲ್ಪನೆಯನ್ನು ಜನರಲ್ಲಿ ಮೂಡಿಸಿದರು. ಸ್ಥಾವರ ಲಿಂಗಕ್ಕಿಂತಲೂ ಅಂಗೈಯೊಳಗಿನ ಲಿಂಗವೇ ಶ್ರೇಷ್ಠ ಎನ್ನುವ ಮಾತನ್ನು ಸ್ಪಷ್ಟ ಪಡಿಸಿದರು. ‘ದೇಹವೇ ದೇವಾಲಯ’ ಎಂದು ಹೇಳುತ್ತ ದೇವಾಲಯಕ್ಕೆ ಹೋಗುವುದನ್ನು ಸೂಕ್ಷ್ಮವಾಗಿ ನಿಷೇಧಿಸಿದರು.

‘ದಯವೇ ಧರ್ಮದ ಮೂಲವಯ್ಯ’ ಎಂದು ಧರ್ಮದ ಹೊಸ ವ್ಯಾಖ್ಯನವನ್ನು ನೀಡುತ್ತ ಜನಮನದಲ್ಲಿ ಪರಿವರ್ತನೆ ತರುವಲ್ಲಿ ಸಫಲರಾದರು. ಅನೇಕ ಸ್ಥಳಗಳಿಂದ ಕಲ್ಯಾಣಕ್ಕೆ ಸಜ್ಜನರು ಬಂದು ಸೇರಿದರು. ಹಾಗೆ ಬಂದವರಲ್ಲಿ ಮಹಾದೇವಿ ಅಕ್ಕನೂ ಒಬ್ಬಳು. ಶರಣ ಸಮೂಹದಿಂದ ತಾನು ಅನೇಕ ವಿಷಯಗಳನ್ನು ಗ್ರಹಿಸಿದೆನೆಂದು ಅಕ್ಕ ತನ್ನ ವಚನಗಳಲ್ಲಿ ಕಾವ್ಯಾತ್ಮಕವಾಗಿ ಸೆರೆ ಹಿಡಿದಿದ್ದಾಳೆ.

ಈ ವಚನದಲ್ಲೂ ಸಹ ಅಕ್ಕ ಅಂತಹ ಮಹತ್ವದನ್ನೇ ಹೇಳ ಹೊರಟಿದ್ದಾಳೆ. ಬಸವಾದಿ ಶರಣರೆಲ್ಲಾ ಲಿಂಗ ಪೂಜೆಯನ್ನು ಒಪ್ಪಿಕೊಂಡು ಅಪ್ಪಿಕೊಂಡ ಸಂದರ್ಭದಲ್ಲಿ ಹೇಳಿದ ವಚನವಿದು. ಲಿಂಗ ಪೂಜೆ, ಕಾಯಕದ ಮಹತ್ವ, ಮನದ ಶುದ್ಧತೆ, ದೇಹದ ಜವಾಬ್ದಾರಿ, ಮಾತಿನ ಬದ್ಧತೆಯನ್ನು ಎತ್ತಿ ಹಿಡಿಯುವ ಅಪರೂಪದ ವಚನ.

‘ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು’

ಮಜ್ಜನವೆಂದರೆ ದೇವರಿಗೆ ಮಾಡಿಸುವ ಸ್ನಾನ. ನೀರಿನಿಂದ ಎರೆಯುವುದು. ಇಲ್ಲಿ ಲಿಂಗ ಪೂಜೆಗೆ ಸಂಬಂಧಿಸಿದ ಮೊದಲ ವಿಧಿ ಎಂದಾಗುತ್ತದೆ.

ತನು ಕರಗದವರು ಎಂದರೆ ಯಾರು? ಶರಣರು ‘ಕಾಯಕವೇ ಕೈಲಾಸ’ ಎಂದು ದುಡಿಮೆಯಲ್ಲಿ ಭಕ್ತಿ ಇಟ್ಟವರು. ಕಾಯಕದೊಳು ನಿರತನಾದೊಡೆ ಲಿಂಗ ಪೂಜೆಯನ್ನೂ ಮರೆಯ ಬೇಕೆಂದು ಹೇಳಿ ಹಾಗೇ ನಡೆದುಕೊಂಡವರು. ತನುವನ್ನು ಕರಗಿಸುವುದು ಎಂದರೆ ಮೈ ಮುರಿದು ದುಡಿಯುವುದು ಎಂದರ್ಥ. ಯಾವ ವ್ಯಕ್ತಿ ತನ್ನ ಪಾಲಿನ ವೃತ್ತಿ, ಕೆಲಸ, ಕಸುಬನ್ನು ಮಾಡುವುದಿಲ್ಲವೋ ಅಂತಹ ವ್ಯಕ್ತಿಯಿಂದ ಲಿಂಗ ನೀರೆರೆಸಿಕೊಳ್ಳಲು ಸಾದ್ಯವಿಲ್ಲ.

ಸೋಮಾರಿಯಾಗದೆ ಬೆವರು ಸುರಿಸಿ ಕೆಲಸ ಮಾಡಿದವರಿಗೆ ಮಾತ್ರ ಲಿಂಗಕ್ಕೆ ಮಜ್ಜನ ಮಾಡುವ ಅವಕಾಶವಿದೆ ಎನ್ನುವ ಭಾವ ಇದರಲ್ಲಡಗಿದೆ.

‘ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’

ಮನುಷ್ಯ ಎಂದರೆ ಅಂತಃಕರಣದಿಂದ ಕೂಡಿರಬೇಕು. ಮನ ಅಂದರೆ ನಮ್ಮೊಳಗಿನ ಮನಸು. ಅದು ಹೇಗಿರಬೇಕೆಂದರೆ, ಕಷ್ಟದಲ್ಲಿದ್ದವರಿಗೆ ಕಿವಿಯಾಗಿರ ಬೇಕು. ಅವರ ಆಪತ್ತಿಗೆ ಸಾಧ್ಯವಾದಷ್ಟು ಸ್ಪಂದಿಸುವ ಸರಳ, ವಿಶಾಲ ಮನಸ್ಸಿರಬೇಕು. ಅಂಥವರಿಂದ ಮಾತ್ರ ಲಿಂಗ ಹೂವುಗಳನ್ನು ಸ್ವೀಕರಿಸಲು ಸಾಧ್ಯ.

‘ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು’

ಹದುಳರು ಎಂದರೆ ನಂಬಿಕೆಗೆ ಯೋಗ್ಯರಲ್ಲದವರು. ಮನುಷ್ಯನಲ್ಲಿ ಒಳ್ಳೆಯ ನಡತೆ ಇರಬೇಕು. ಒಳ್ಳೆಯ ಮಾತುಗಳಿರಬೇಕು. ಮಾಡುವ ಕೆಲಸಗಳು ಸಾತ್ವಿಕವಾಗಿರಬೇಕು. ಮೋಸ, ವಂಚನೆಗಳಿಂದ ಬಹುದೂರವಿರುವಂಥವರಿಂದ ಗಂಧ ಮತ್ತು ಅಕ್ಷತೆಯನ್ನು ಲಿಂಗಕ್ಕೆ ಅರ್ಪಿಸಲು ಸಾಧ್ಯ ಎನ್ನುವ ಭಾವವಿದೆ.

‘ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು’

ಆರತಿ ತಟ್ಟೆಯಲ್ಲಿ ಅರಿಶಿನ, ಕುಂಕುಮ, ದೀಪಗಳು ಮತ್ತು ಹೂವುಗಳಿಂದ ಅಲಂಕೃತಗೊಂಡು ಲಿಂಗಕ್ಕೆ ಬೆಳಗಲು ಸನ್ನದ್ಧವಾಗಿರುತ್ತದೆ. ಅಂತಹ ಆರತಿಯನ್ನು ಬೆಳಗುವ ವ್ಯಕ್ತಿಯೊಳಗಿನ ಅಂತರಾತ್ಮ ಅರಿವಿನಿಂದ ಕಣ್ಣು ತೆರೆದಿರಬೇಕು.

ಇಲ್ಲಿ ಬಸವಣ್ಣನವರು ಹೇಳಿದ ‘ಅರಿವೇ ಗುರು’ ಎನ್ನುವ ಮಾತನ್ನು ಜ್ಞಾಪಿಸಿಕೊಳ್ಳುವುದು ಸೂಕ್ತ. ತನ್ನ ತಾನರಿಯಬೇಕೆಂಬ ಶರಣರ ತತ್ವ ಬಹಳ ಅರ್ಥಪೂರ್ಣವಾದುದು. ಅಂಥವರಿಂದಲೇ ಆರತಿ ಬೆಳಗಿಸಿಕೊಳ್ಳಲಾಗುವುದು.

‘ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು’

ಮನುಷ್ಯನ ಭಾವ ಶುದ್ಧತೆಯೆಂದರೆ, ಮನದೊಳಗಿನ ಆಲೋಚನೆಯಂತೆಯೇ ಆಡುವ ಮಾತುಗಳಿರಬೇಕು. ಚಿಂತಿಸಿದಂತೆಯೇ ಚಿಂತನವಾದರೆ ಶುದ್ಧ ಭಾವನೆ. ಒಳಗೊಂದು ಹೊರಗೊಂದು ಆದರೆ ಕಲಬೆರಕೆಯಾದಂತೆಯೇ. ಶರಣರು ನುಡಿದಂತೆ ನಡೆದವರು. ಯಾರ ಮನಸು ಮತ್ತು ಮಾತು ಒಂದೇ ಆಗಿರುತ್ತದೆಯೋ ಅವರು ಮಾತ್ರ ಲಿಂಗಕ್ಕೆ ಧೂಪವ ಅಂದರೆ ಘಮಘಮಿಸುವ ಸಾಂಬ್ರಾಣಿ ಅಥವಾ ಲೋಬಾನ ಬೆಳಗಿಸಬಹುದು.

‘ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು’

ನಾವು ಊಟ ಮಾಡುವುದಕ್ಕಿಂತ ಮೊದಲು, ನಮಗೆಲ್ಲವನ್ನು ಅನುಗ್ರಹಿಸಿದ ಆ ಪರಮಾತ್ಮನಿಗೆ ಅರ್ಪಿಸುವ ಆಹಾರವೇ ನೈವೇದ್ಯ. ಯಾವ ವ್ಯಕ್ತಿ ಶಾಂತಿ, ಸಮಾಧಾನದಿಂದ ಇರುವನೋ ಅವನೇ ಪರಿಣಾಮಿ. ಚಿತ್ತ ಶುದ್ಧವಾಗಿ, ಚಂಚಲತೆಯಿಂದ ಬಹುದೂರ ಇರುವವರು ಲಿಂಗಕ್ಕೆ ನೈವೇದ್ಯವನ್ನು ಉಣಿಸಬಹುದು. ಸಮಚಿತ್ತ ಇಲ್ಲದವರಿಂದ ಲಿಂಗ ನೈವೇದ್ಯವನ್ನು ಸ್ವೀಕರಿಸುವುದಿಲ್ಲ.

‘ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು’

‘ಕಾಯಾ ವಾಚಾ ಮನಸಾ’ ಅಂದರೆ ತ್ರಿಕರಣ. ಈ ದೇಹ, ಮನಸು, ಮಾತು ಎಂದರ್ಥ. ಈ ಮೂರೂ ಸೇರಿದ ತ್ರಿಕರಣ ಶುದ್ಧವಾಗಿರ ಬೇಕು. ಮನಸು ಹೇಳಿದ್ದನ್ನು ಮಾತಿನಲ್ಲಿ ತೋರ್ಪಡಿಸುವುದು. ಮಾತಿನಲ್ಲಿ ಹೇಳಿದನ್ನು ಈ ದೇಹದ ಸಹಾಯದಿಂದ ಮಾಡಿ ತೋರಿಸುವುದು.

ತಂಬೂಲವೆಂದರೆ ವೀಳ್ಯದೆಲೆ, ಅಡಿಕೆ, ಸುಣ್ಣ ಮುಂತಾದವುಗಳನ್ನು ಸೇರಿಸಿ ಊಟದ ನಂತರ ಸೇವಿಸುವಂಥದ್ದು. ದೇಹ, ಮನಸು, ಮಾತುಗಳ ತಾಳಮೇಳವಿಲ್ಲದಿದ್ದವರಿಂದ, ಲಿಂಗಕ್ಕೆ ತಾಂಬೂಲ ಸ್ವೀಕೃತವಲ್ಲ.

‘ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು’

ಇಲ್ಲಿ ಹೃದಯಕಮಲವೆಂದರೆ ಮನಸಿನೊಳಗಿನ ಪರಿಧಿ. ಮನುಷ್ಯನ ಮನಸು ಹೂವಿನಂತೆ ಅರಳ ಬೇಕು. ಹೂವು ಸುಕೋಮಲವಾದುದು. ಮನದೊಳಗಿನ ಭಾವನೆಗಳಲ್ಲಿರುವ ದ್ವೇಷಾಸೂಯೆಗಳನ್ನು ತೊಡೆದು ಹಾಕಿ, ನಿರ್ಮಲ, ನಿಶ್ಚಿಂತ ಮನವು ಲಿಂಗಕ್ಕೆ ಆಕರ್ಷಣೀಯ. ಅಂತಹ ಮನಸುಗಳಲ್ಲಿ ಲಿಂಗವು ಚಿರಸ್ಥಾಯಿಯಾಗಿ ನೆಲೆಗೊಳ್ಳುವುದು.

‘ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ’

ಅಕ್ಕಮಹಾದೇವಿ ವೈರಾಗ್ಯದ ಪಥದಲ್ಲಿ ನಡೆದ ಆಧ್ಯಾತ್ಮ ಜೀವಿ. ಅಂತರಂಗದ ಬೆಳಕನ್ನು ಜಗತ್ತಿಗೆ ಬೀರಿದಾಕೆ. ಅಂಥ ಅಕ್ಕನಲ್ಲಿಯೂ, ‘ಎನಗಿಂತ ಕಿರಿಯರಿಲ್ಲ’ ಎನ್ನುವ ಸರಳತೆ. ಪಾರಮಾರ್ಥಿಕ ಲೋಕದ, ಶಿವ ಸ್ವರೂಪಿ, ಚೆನ್ನಮಲ್ಲಿಕಾರ್ಜುನನನ್ನು ಪ್ರಶಿಸುವಳು. ‘ಹೇ ದೇವಾ ನನ್ನಲ್ಲಿ ನೀನು ಏನು ಕಂಡೆ ತಂದೆಯೆ? ನನ್ನ ಅಂಗೈಯಲ್ಲಿ ಬಂದು ಹೇಗೆ ನೆಲೆಸಿದೆ?’

ಇಲ್ಲಿ ಅಕ್ಕನಲ್ಲಿರುವ ಸರಳ, ವಿಧೇಯ, ವಿನಮ್ರ ಸ್ವಭಾವವನ್ನು ಗ್ರಹಿಸಬಹುದು. ಲೌಕಿಕದ ಎಲ್ಲಾ ಅಸೆಗಳನ್ನು ತೊರೆದು, ಪಾರಮಾರ್ಥಿಕ ಪ್ರಪಂಚದಲ್ಲಿ ಪಯಣಿಸುತಿದ್ದರೂ ತನ್ನನ್ನು ಶೋಧಿಸಿಕೊಳ್ಳುವ ಪ್ರಕ್ರಿಯೆಗೆ ಅಕ್ಕ ಅಂತ್ಯ ಹೇಳಲೇ ಇಲ್ಲ. ಸಜ್ಜನಿಕೆ ಎನ್ನುವುದನ್ನು ಇನ್ನಷ್ಟು ಒರೆಗೆ ಹೆಚ್ಚಿ ಹಚ್ಚಿ, ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳುವ ಪ್ರಯತ್ನವನ್ನು ಗ್ರಹಿಸಬಹುದು.

ಪ್ರಸ್ತುತ ಕಾಲಮಾನದಲ್ಲಿ ನಿಂತು ಆಲೋಚಿಸ ಬೇಕಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರ, ಡಂಬಾಚಾರ, ಅನಾಚಾರ ಮುಂತಾದವುಗಳಿಗೆಲ್ಲಾ ಕಾರಣ ಮನುಷ್ಯನೊಳಗಿರುವ ರೋಗಗ್ರಸ್ತ ಮನಸು. ಈ ಮನಸ್ಸೇ ಎಲ್ಲಾ ಕೆಡಕುಗಳಿಗೂ ಮೂಲವಾಗಿದೆ. ಮನ ಶುದ್ಧಿಯಾದರೆ ಭಾವ ಶುದ್ಧಿಯಾದಂತೆ. ಭಾವ ಶುದ್ಧಿಯಾದರೆ ದೇಹ ಶುದ್ಧಿಯಾದಂತೆ. ಈ ತೆರದ ಶುದ್ಧತೆಯಿಂದ ಬದುಕು ನಡೆಸ ಬೇಕಾದ ತುರ್ತು ಇಂದಿನದಾಗಿದೆ.

ಅದಕ್ಕೆ ಅಕ್ಕನ ಈ ವಚನವೇ ಮಾರ್ಗದರ್ಶಿ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

LEAVE A REPLY

Please enter your comment!
Please enter your name here