6 ವರ್ಷಗಳ ಪಯಣ ನಿಲ್ಲಿಸಿದ ‘ಅಗ್ನಿಸಾಕ್ಷಿ’…ಈ ಧಾರಾವಾಹಿ ಹುಟ್ಟಿದ್ದೇ ವಿಭಿನ್ನ ರೀತಿಯಲ್ಲಿ…!

0
1011

ಪ್ರತಿರಾತ್ರಿ 8 ಗಂಟೆ ಆಗುತ್ತಿದ್ದಂತೆ ಮಹಿಳೆಯರು ಎಲ್ಲಾ ಕೆಲಸ ಮುಗಿಸಿ ಅಥವಾ ಇರುವ ಕೆಲಸ ಎಲ್ಲಾ ಬಿಟ್ಟು ‘ಅಗ್ನಿಸಾಕ್ಷಿ’ ಧಾರಾವಾಹಿ ನೋಡಲು ಕುಳಿತುಬಿಡುತ್ತಿದ್ದರು. ಆದರೆ ಇದೀಗ ಆ ಧಾರಾವಾಹಿ ಅಭಿಮಾನಿಗಳಿಗೆ ಏನೋ ಕಳೆದುಕೊಂಡಂತಾಗಿದೆ, ಏಕೆಂದರೆ ಧಾರಾವಾಹಿ ಪ್ರಸಾರ ನಿಲ್ಲಿಸಿದೆ.

2013 ಡಿಸೆಂಬರ್ 2 ರಂದು ಕಲರ್ಸ ಕನ್ನಡ ವಾಹಿನಿಯಲ್ಲಿ ತನ್ನ ಮೊದಲ ಎಪಿಸೋಡ್ ಆರಂಭಿಸಿದ ‘ಅಗ್ನಿಸಾಕ್ಷಿ’ 6 ವರ್ಷಗಳ ಸುಧೀರ್ಘ ಪಯಣವನ್ನು ನಿಲ್ಲಿಸಿದೆ. ಅಂತೆಯೇ ಜನವರಿ 3 2020 ರಂದು ಕೊನೆಯ ಎಪಿಸೋಡ್ ಪ್ರಸಾರವಾಗಿದೆ. ಅರ್ಕ ಮೀಡಿಯಾ ಹೌಸ್ ನಿರ್ಮಾಣದ ಅಗ್ನಿಸಾಕ್ಷಿ ಧಾರಾವಾಹಿಯನ್ನು ಹಯವದನ ನಿರ್ದೇಶಿಸಿದ್ದಾರೆ. ಇನ್ನು ಈ ಧಾರಾವಾಹಿ ಆರಂಭವಾಗಿದ್ದೇ ವಿಭಿನ್ನ ಪ್ರಯತ್ನದಿಂದ. ಈ ಧಾರಾವಾಹಿಗೂ ಮುನ್ನ ಪ್ರಸಾರವಾದ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಸಿದ್ದಾರ್ಥ ಆಗಿ ಹಾಗೂ ‘ಅಶ್ವಿನಿನಕ್ಷತ್ರ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಸನ್ನಿಧಿ ಆಗಿ ನಟಿಸಿದ್ದರು.

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯ ಚಿನ್ನುವಿಗೆ ಮದುವೆಯಾಗಿದೆ ಎಂದು ತಿಳಿಯದ ಸಿದ್ದಾರ್ಥ ಆಕೆಯನ್ನು ಪ್ರೀತಿಸುತ್ತಾನೆ. ಆದರೆ ಆಕೆಗೆ ಮದುವೆಯಾಗಿದೆ ಎಂದು ತಿಳಿದು ಬೇಸರಗೊಳ್ಳುತ್ತಾನೆ. ಇಷ್ಟವಿಲ್ಲದಿದ್ದರೂ ಮನೆಯವರು ನೋಡಿದ ‘ಅಶ್ವಿನಿ ನಕ್ಷತ್ರ’ದ ಜೆಕೆ ತಂಗಿ ಸನ್ನಿಧಿಯನ್ನು ಮದುವೆಯಾಗುತ್ತಾನೆ. ನಂತರ ಆರಂಭಗೊಳ್ಳುವುದೇ ‘ಅಗ್ನಿಸಾಕ್ಷಿ’ ಧಾರಾವಾಹಿ. ಸಿದ್ದಾರ್ಥ ಆಗಿ ವಿಜಯ್ ಸೂರ್ಯ, ಸನ್ನಿಧಿ ಆಗಿ ವೈಷ್ಣವಿಗೌಡ, ವಾಸುದೇವ್ ಆಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಅಖಿಲ್ ಆಗಿ ರಾಜೇಶ್ ಧ್ರುವ, ತನು ಆಗಿ ಐಶ್ವರ್ಯ ಸಾಲಿಮಠ್, ಅಂಜಲಿ ಆಗಿ ಸುಕೃತ, ಚಂದ್ರಿಕಾ ಆಗಿ ಪ್ರಿಯಾಂಕ, ಮಾಯಾ ಆಗಿ ಇಶಿತಾ ವರ್ಷ, ಆಯುಷಿ ಆಗಿ ಬೇಬಿ ಚಂದನ ಹಾಗೂ ಇನ್ನಿತರರು ಧಾರಾವಾಹಿಯಲ್ಲಿ ನಟಿಸಿದ್ದಾರೆ.

6 ವರ್ಷಗಳಿಂದ ನಾವು ಒಂದೇ ಕುಟುಂಬದಂತೆ ಇದ್ದೆವು. ನಮ್ಮ ನಡುವೆ ಒಳ್ಳೆ ಬಾಂಧವ್ಯ ಇತ್ತು. ಪ್ರತಿದಿನ ಎಲ್ಲರೂ ಭೇಟಿ ಆಗುತ್ತಿದ್ದೆವು. ಆದರೆ ಈಗ ಧಾರಾವಾಹಿ ಮುಗಿದಿರುವುದು ಬೇಸರ ತರಿಸಿದೆ ಎಂದು ಧಾರಾವಾಹಿಯ ಕಲಾವಿದರು ಬೇಸರದಿಂದಲೇ ಹೇಳುತ್ತಾರೆ. ಇನ್ನು ವೀಕ್ಷಕರು ಕೂಡಾ ಧಾರಾವಾಹಿ ಮುಗಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ರಾತ್ರಿ 8 ಗಂಟೆಗೆ ನಮಗೆ ಒಳ್ಳೆ ಮನರಂಜನೆ ಸಿಗುತ್ತಿತ್ತು. ಆದರೆ ಈಗ ಏನೋ ಕಳೆದುಕೊಂಡಂತೆ ಆಗುತ್ತಿದೆ ಎನ್ನುತ್ತಿದ್ದಾರೆ. ನೋಡೋಣ ‘ಅಗ್ನಿಸಾಕ್ಷಿ’ ಧಾರಾವಾಹಿ ಸ್ಥಾನ ತುಂಬಲು ಬೇರೆ ಧಾರಾವಾಹಿ ಬಂದರೂ ಬರಬಹುದು. ವಿಶೇಷ ಎಂದರೆ ತೆಲುಗಿನಲ್ಲಿ ಇದೇ ಧಾರಾವಾಹಿ ‘ಮನಸಾಕ್ಷಿ’ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.

LEAVE A REPLY

Please enter your comment!
Please enter your name here