ವಯಸ್ಸು 40-45 ದಾಟುತ್ತಿದ್ದಂತೆ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗುತ್ತದೆ. ಅಯ್ಯೋ ಇನ್ನು ನನ್ನಿಂದ ಆಗೋಲ್ಲ, ಆರಾಮಾಗಿ ಮನೆಯಲ್ಲಿ ಇದ್ದುಬಿಡುತ್ತೇನೆ ಎಂದುಕೊಳ್ಳುವವರಿಗೆ ಈ ಅಜ್ಜಿ ನಿಜಕ್ಕೂ ಸ್ಫೂರ್ತಿ.
ಈ ಅಜ್ಜಿ ಹೆಸರು ಹರ್ಭಜನ್ ಕೌರ್, ಚಂಡೀಗಢ್ ನಿವಾಸಿಯಾಗಿರುವ ಈ ಅಜ್ಜಿಗೆ ಈಗ 94 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಈ ಅಜ್ಜಿ ಮನೆಯಲ್ಲೇ ಚಿಕ್ಕ ಬ್ಯುಸ್ನೆಸ್ ಆರಂಭಿಸಿದ್ದಾರೆ. ಅದೂ ಕೂಡಾ ‘ಬೇಸನ್ ಕಿ ಬರ್ಫಿ’ ಬ್ಯುಸ್ನೆಸ್. ಬೇಸನ್ ಎಂಬದು ಹಿಂದಿ ಪದ. ಹಾಗೆಂದರೆ ಕಡ್ಲೆಹಿಟ್ಟು ಎಂದರ್ಥ. ಕಡ್ಲೆಹಿಟ್ಟಿನಿಂದ ತಯಾರಿಸುವ ಈ ಸಿಹಿತಿಂಡಿಗೆ ಅಜ್ಜಿ ‘ಹರ್ಭಜನ್ಸ್’ ಬ್ರಾಂಡ್ ಎಂದು ಹೆಸರಿಟ್ಟಿದ್ದಾರೆ. ತಾಯಿಯ ಈ ಉದ್ಯಮಕ್ಕೆ ಹರ್ಭಜನ್ ಕೌರ್ ಪುತ್ರಿ ಕೂಡಾ ಬೆಂಬಲ ನೀಡಿದ್ದಾರೆ. ಹರ್ಭಜನ್ ಅವರು ತಯಾರಿಸಿದ ಈ ಸಿಹಿತಿಂಡಿಯನ್ನು ತಿಂದವರು, ಬಹಳ ಮೆಚ್ಚಿಕೊಂಡಿದ್ದಾರಂತೆ. ಅಲ್ಲದೆ ತಮಗೆ ಬೇಕಾದಾಗ ಆರ್ಡರ್ ನೀಡಿ ಈ ಬರ್ಫಿ ಮಾಡಿಸಿಕೊಳ್ಳುತ್ತಾರೆ ಎನ್ನಲಾಗಿದೆ.
‘ನಾನು ಈ ವಯಸ್ಸಿನಲ್ಲಿ ಸುಮ್ಮನೆ ಕುಳಿತುಕೊಳ್ಳಲಾಗುತ್ತಿಲ್ಲ, ಅಲ್ಲದೆ ನಾನು ಇದುವರೆಗೂ ಒಂದು ರೂಪಾಯಿ ಕೂಡಾ ದುಡಿದಿಲ್ಲ ಎಂದು ಹರ್ಭಜನ್ ಕೌರ್ ಬೇಸರಪಟ್ಟುಕೊಳ್ಳುತ್ತಿದ್ದರಂತೆ. ನನ್ನ ತಾಯಿ ಅಡುಗೆಯಲ್ಲಿ ಎತ್ತಿದ ಕೈ. ಆಕೆಯ ಕೈ ರುಚಿ ನೋಡಿದವರು ಮತ್ತೊಮ್ಮೆ ಬಂದು ತಿಂದು ಹೋಗುತ್ತಾರೆ. ಆದ್ದರಿಂದ ಇಬ್ಬರೂ ಚರ್ಚಿಸಿ ಕೊನೆಗೆ ‘ಬೇಸನ್ ಕಿ ಬರ್ಫಿ’ ಮಾಡಬೇಕೆಂದು ನಿರ್ಧರಿಸಿದೆವು. ಇದು ಅಮ್ಮನದ್ದೇ ಸಂಪೂರ್ಣ ಜವಾಬ್ದಾರಿ, ಆದರೆ ನಾನು ಅವರೊಂದಿಗೆ ಕೈ ಜೋಡಿಸುತ್ತೇನೆ. ಅಮ್ಮನ ಈ ಸಿಹಿತಿಂಡಿ ತಿಂದಾಗಲೆಲ್ಲಾ ನಮಗೆ ಬಾಲ್ಯ ನೆನಪಾಗುತ್ತದೆ’ ಎಂದು ಹರ್ಭಜನ್ ಕೌರ್ ಪುತ್ರಿ ಹೇಳುತ್ತಾರೆ.
ಒಟ್ಟಿನಲ್ಲಿ ಮೈ ಮುರಿದು ದುಡಿಯಲು ಸೋಮಾರಿತನ ಮಾಡುವ ಜನಗಳಿಗೆ ಈ ಅಜ್ಜಿ ನಿಜಕ್ಕೂ ಸ್ಫೂರ್ತಿ ಎನ್ನಬಹುದು. ಹರ್ಭಜನ್ ಕೌರ್ ಅವರಿಗೆ ದೇವರು ಇನ್ನೂ ಹೆಚ್ಚಿನ ಆಯಸ್ಸು ನೀಡಲಿ ಎಂಬುದೇ ನಮ್ಮ ಹಾರೈಕೆ.