ಬೆಂಗಳೂರು: ಕೋವಿಡ್ ಹಿನ್ನಲೆ ಎಂಟು ತಿಂಗಳ ಬಳಿಕ ಇಂದಿನಿಂದ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯಾದ್ಯಂತ ಕಾಲೇಜುಗಳು ಆರಂಭವಾಗಿದೆ. ಪದವಿ, ಸ್ನಾತಕೋತ್ತರ , ಡಿಪ್ಲೊಮಾ ಕಾಲೇಜುಗಳು ಆರಂಭವಾಗಿವೆ. ಆದ್ರೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಕಾಲೇಜು ಆವರಣದ ನೋಟೀಸು ಬೋರ್ಡ್ ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಲಗತ್ತಿಸಲಾಗಿದೆ. ಮಾಸ್ಕ್ ಹಾಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಕಾಲೇಜು ಆವರಣದಲ್ಲಿ ಉಗುಳಬಾರದು ಎಂಬ ಮುನ್ನೆಚ್ಚರಿಕೆ ನೋಟೀಸು ಹಾಕಲಾಗಿದೆ. ಮನೆಯ ಪೋಷಕರಿಂದ ತರಗತಿಗಳಿಗೆ ಬರಲು ಒಪ್ಪಿಗೆ ಪತ್ರ ಪಡೆದೇ ಬರಬೇಕಾಗುತ್ತದೆ.
ವಿದ್ಯಾರ್ಥಿಗಳ ಥರ್ಮಲ್ ಸ್ಟ್ರೀನಿಂಗ್ ಮಾಡಲಾಗುತ್ತಿದೆ. ಒಂದು ಡೆಸ್ಕ್ ನಲ್ಲಿ ಇಬ್ಬರನ್ನು ಕೂರಿಸುವ ವ್ಯವಸ್ಥೆ ಕೆಲವೆಡೆ ಮಾಡಲಾಗಿದೆ. ಆದ್ರೆ ಎಲ್ಲಾ ಸಿದ್ಧತೆಗಳನ್ನೂ ನಡೆಸಿದ್ದರೂ, ಮೊದಲ ದಿನ ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಕಾಲೇಜಿನತ್ತ ಕಾಲಿಟ್ಟಿದ್ದಾರೆ. ಕಡ್ಡಾಯವಾಗಿ ಕೋವಿಡ್ ತಪಾಸಣೆಗೊಳಗಾಗಿ ನೆಗೆಟಿವ್ ಬಂದಿರುವ ವಿದ್ಯಾರ್ಥಿಗಳು – ಉಪನ್ಯಾಸಕರಿಗೆ ಮಾತ್ರ ತರಗತಿ ಹಾಜರಾಗಲು ಅನುಮತಿ ಇದೆ. ಕಾಲೇಜು ಆರಂಭಕ್ಕೆ ಮೊದಲೇ ಪದವಿ, ಹಾಗೂ ಸ್ನಾತಕೋತ್ತರ ತರಗತಿಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಮಾತ್ರ ಕಾಲೇಜು ಆರಂಭ ಮಾಡಿಲ್ಲ. ದೀಪಾವಳಿ ನಂತರ ಕಾಲೇಜು ಆರಂಭ ಮಾಡಿರುವುದು ಸರಿಯಲ್ಲ,ಹಬ್ಬ ಮುಗಿದು ಮುಂದಿನ ವಾರ ಕಾಲೇಜು ಆರಂಭಿಸಬೇಕಿತ್ತು ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆ, ಇಂದಿನ ಬೆಳವಣಿಗೆ ನೋಡಿಕೊಂಡು ಕಾಲೇಜು ಆರಂಭಿಸಲು ತೀರ್ಮಾನಿಸಿವೆ.
ತರಗತಿಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಇದ್ದರೂ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ಕೆಲವೆಡೆ ಫೇಸ್ ಶೀಲ್ಡ್ ಧರಿಸಿ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ಬಿಟ್ಟು ಹೊರಗೆ ಹೋಗದಂತೆ ಕಡ್ಡಾಯ ಮಾಡಲಾಗಿದೆ. ಮನೆಯಿಂದಲೇ ಊಟ ತರಲು ಸೂಚಿಸಲಾಗಿದೆ. ಮೊದಲ ದಿನ ಆಗಿರುವುದರಿಂದ ಕೆಲವೊಂದು ತರಗತಿಗಳಲ್ಲಿ ಐದಾರು ಮಂದಿ ಮಾತ್ರ ವಿದ್ಯಾರ್ಥಿಗಳು ಬಂದಿದ್ದಾರೆ.
ತರಗತಿಗಳು ಮುಗಿದ ಕೂಡಲೇ ಸಂಜೆ ಎಲ್ಲಾ ತರಗತಿಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸದೇ ಇದ್ದರೆ , ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೂಡಾ ಯುಜಿಸಿ ತಿಳಿಸಿದೆ. ಕಾಲೇಜುಗಳಲ್ಲಿ ಕ್ಯಾಂಟೀನ್, ಲೈಬ್ರೆರಿ ತೆರೆಯುವಂತಿಲ್ಲ. ಎನ್ ಸಿಸಿ, ಎನ್ ಎಸ್ ಎಸ್ ಚಟುವಟಿಕೆ ಆರಂಭಿಸುವಂತಿಲ್ಲ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದ ವಿದ್ಯಾರ್ಥಿಗಳನ್ನು ಕಾಲೇಜು ಆವರಣದೊಳಗೆ ಪ್ರವೇಶ ನಿಷೇಧಿಸಲಾಗಿದೆ.