ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಅಲ್ಲಿನ ಜನರ ಬದುಕು ನಾಶವಾಗಿದೆ. ಹೀಗಾಗಿ ಪ್ರವಾಹದಿಂದ ಅಪಾರ ನಷ್ಟ ಅನುಭವಿಸಿರುವ ಸಂತ್ರಸ್ಥರಿಗಾಗಿ ಅನೇಕರು ಸಹಾಯ ಹಸ್ತಚಾಚಿದ್ದಾರೆ. ರಾಜ್ಯಾದ್ಯಂತ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಸ್ವಯಂ ಸೇವಾ ಸಂಘಗಳು, ರಾಜಕೀಯ ದ್ವೇಷ ಮರೆತ ರಾಜಕಾರಣಿಗಳು ಸೇರಿದಂತೆ ಹಲವು ಮಂದಿ ನೆರೆಸಂತ್ರಸ್ತರ ಸಹಾಯಕ್ಕೆ ಧಾವಿಸಿ ಬರುತ್ತಿದ್ದಾರೆ.

ಇನ್ನು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಕೂಡಾ ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಚಂದನವನದ ಅನೇಕ ಗಣ್ಯ ನಟರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನಟ ಪುನೀತ್ ರಾಜಕುಮಾರ್ 25 ಕೋಟಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಹಾಗೆಯೇ ದರ್ಶನ್ ಮತ್ತು ಕಿಚ್ಚ ಸುದೀಪ ಸಹಾಯ ಮಾಡುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಆದರೆ ಈಗ ಹಿರಿಯ ನಟಿ ಡಾ. ಲೀಲಾವತಿ ಅವರು ಸಹ ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಅನೇಕರು ನೆರೆ ಭೀಕರತೆಗೆ ನಲುಗಿರುವ ಜನರಿಗಾಗಿ ಆಹಾರ ಸಾಮಗ್ರಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದರೆ, ಇತ್ತ ಲೀಲಾವತಿ ಅವರು ಮಾತ್ರ ಜಾನುವಾರುಗಳಿಗೆ ಬೇಕಾದಂತಹ ಮೇವನ್ನು ವಿತರಣೆಯನ್ನು ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಹೌದು, ಲೀಲಾವತಿ ಮತ್ತು ಮಗ ವಿನೋದ ರಾಜ್ ಜಾನುವಾರುಗಳಿಗೆ ಬೇಕಾದ ಮೇವನ್ನು ಸ್ವಂತ ಹಣದಲ್ಲಿ ಕೊಂಡು, ಅದನ್ನು ಒಂದು ಲಾರಿಗೆ ತುಂಬಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಇವರು ಮಾಡಿರುವ ಕಾರ್ಯ ಎಲ್ಲೆಡೆಯಿಂದ ಪ್ರಶಂಸೆಗೆ ಒಳಗಾಗಿದೆ ಹಾಗೂ ಇನ್ನಿತರರಿಗೆ ಮಾದರಿಯಾಗಿದೆ. ರಾಜ್ಯಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.