ಬದುಕಿನಲ್ಲಿ ಏನಾದರೂ ಗುರಿ ಎಂಬುದು ಇರಬೇಕು. ಅದನ್ನು ಸಾಧಿಸುವ ಮನಸ್ಸಿದ್ದರೆ ಯಶಸ್ಸಿನ ದಾರಿ ತನ್ನಷ್ಟಕ್ಕೆ ತೆರೆದುಕೊಳ್ಳುತ್ತದೆ. ಗುರಿ ಮುಟ್ಟುವಲ್ಲಿ ಎದುರಾಗುವ ಕಷ್ಟಗಳು ಸಣ್ಣದೆನಿಸುತ್ತದೆ. ಅಂತಹದ್ದೇ ನಂಬಿಕೆಯೊಂದಿಗೆ ಚಂದ್ರಶೇಖರ್ ಘೋಷ್ ಯಶಸ್ವಿ ಬ್ಯಾಂಕರ್ ಆಗಿದ್ದಾರೆ. ಹಲವು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಆಗಸ್ಟ್ 23, 2015ರಲ್ಲಿ ಅಧಿಕೃತವಾಗಿ ‘ಬಂಧನ್’ ಬ್ಯಾಂಕ್ ಸ್ಥಾಪಿಸಿದ್ದ ಘೋಷ್ ಅವರ ಬ್ಯಾಂಕಿಂಗ್ ಮಾರುಕಟ್ಟೆ ಮೌಲ್ಯ ಸುಮಾರು 54 ಸಾವಿರ ಕೋಟಿಗಳಾಗಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರುವ ಮುನ್ನಾ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದರು.

1960ರಲ್ಲಿ ತ್ರಿಪುರದ ಅಗರ್ತಲಾದಲ್ಲಿ ಜನಿಸಿದ ಘೋಷ್ ತಂದೆ ಸಣ್ಣ ಸಿಹಿತಿಂಡಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಕುಟುಂಬದಲ್ಲಿ ಒಂಭತ್ತು ಮಂದಿಯಿದ್ದರು. ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇರಲಿಲ್ಲ. ಹಾಘಾಗಿ ಘೋಷ್ ಅವರು ಬಾಲ್ಯದಿಂದಲೇ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಸಮಯ ಸಿಕ್ಕಾಗ ಹಾಲು ಮಾರುತ್ತಿದ್ದರು. ಆದರೆ ಈ ಸಂಕಷ್ಟಗಳ ಮಧ್ಯೆ ಶಿಕ್ಷಣ ಪಡೆಯುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮೂಲತಃ ಬಾಂಗ್ಲಾದೇಶದವರಾಗಿದ್ದ ಘೋಷ್ ಕುಟುಂಬ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ತ್ರಿಪುರಕ್ಕೆ ನಿರಾಶ್ರಿತರಾಗಿ ಬಂದರು. ಢಾಕಾ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಆ ವೇಳೆ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುತ್ತಾ ಶಿಕ್ಷಣದ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಸಂದರ್ಶನವೊಂದರಲ್ಲಿ, ತಾನು ಮೊದಲ ಬಾರಿಗೆ ತಂದೆಗೆ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದೆ ಎನ್ನುತ್ತಾರೆ. ಆದರೆ ತಂದೆ ಅದನ್ನು ಚಿಕ್ಕಪ್ಪನಿಗೆ ನೀಡುವಂತೆ ಹೇಳಿದ್ದರು. ಚಿಕ್ಕಪ್ಪ ನಮಗಿಂತ ಕಷ್ಟದಲ್ಲಿದ್ದರು. 1985ರಲ್ಲಿ ಘೋಷ್ ಅವರ ಬದುಕು ರೋಚಕ ತಿರುವು ಪಡೆದುಕೊಂಡಿತು.

ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಢಾಕಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಲ್ಲಿ (ಬಿಆರ್ಸಿ) ಕೆಲಸ ಮಾಡುತ್ತಿದ್ದರು. ಈ ಸಂಸ್ಥೆ ಬಾಂಗ್ಲಾದೇಶದ ಸಣ್ಣ ಹಳ್ಳಿಗಳಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಕಾರ್ಯ ಮಾಡುತ್ತಿತ್ತು. ಅಲ್ಲಿನ ಮಹಿಳೆಯರ ಸ್ಥಿತಿ ನೋಡಿದಾಗ ಕಣ್ಣಲ್ಲಿ ನೀರು ಬರುತ್ತಿತ್ತು ಎಂದು ಘೋಷ್ ಹೇಳುತ್ತಾರೆ. ಅನಾರೋಗ್ಯದ ವೇಳೆ ಒಂದು ಹೊತ್ತಿನ ಊಟಕ್ಕೂ ಪದಾಡುತ್ತಿದ್ದರು.
ಸುಮಾರು ಒಂದೂವರೆ ದಶಕ ಕಾಲ ಬಿಆರ್ಎಸಿ ಜೊತೆ ಕೆಲಸ ಮಾಡಿದ ನಂತರ 1997ರಲ್ಲಿ ಕೋಲ್ಕತ್ತಾಗೆ ಮರಳಿದೆ. 1998ರಲ್ಲಿ ಗ್ರಾಮ ಕಲ್ಯಾಣ ಸೊಸೈಟಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಈ ಸಂಸ್ಥೆ ಜನರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿತ್ತು. ಅದರ ಭಾಗವಾಗಿ ನಾನೂ ಸೇರಿಕೊಂಡೆ. ಭಾರತದ ಹಳ್ಳಿಗಳ ಪರಿಸ್ಥಿತಿ ಏನೂ ಬಾಂಗ್ಲಾದ ಮಹಿಳೆಯರಿಗಿಂತ ಹೆಚ್ಚು ಭಿನ್ನವಾಗಿಲ್ಲ. ಹೇಗಾದರೂ ಸರಿ ಮಾಡಬೇಕೆಂದು ನಿರ್ಧರಿಸಿದೆ. ಈ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಅವರ ಆರ್ಥಿಕ ಸ್ಥಿತಿ ಬದಲಾಯಿಸಬಹುದೆಂಬುದು ಅರಿವಾಯಿತು. ಆದರೆ ಬಹುತೇಕರು ಅನಕ್ಷರಸ್ಥರಾಗಿದ್ದರು. ವ್ಯವಹಾರದ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಬಡವರನ್ನು ಶೋಷಣೆ ಮಾಡುತ್ತಿದ್ದರು. ಆರ್ಥಿಕ ಸಹಾಯ ಸಿಕ್ಕರೆ ಅವರ ಬದುಕೂ ಹಸನಾಗಬಹುದು ಎಂದು ಎಣಿಸಿದೆ.

2009ರಲ್ಲಿ ಕಿರು ಸಾಲ ಸಂಸ್ಥೆ ಪ್ರಾರಂಭಿಸಲು, ರಿಸರ್ವ್ ಬ್ಯಾಂಕ್ ಮೂಲಕ ಬಂಧನ್ ಹಣಕಾಸು ಸಂಸ್ಥೆಯನ್ನು ಬ್ಯಾಂಕೇತರ ಹಣಕಾಸು ಕಂಪನಿ ಎಂದು ನೋಂದಾಯಿಸಿದೆ.ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸಾಲ ನೀಡಲು ಕಿರುಬಂಡವಾಳ ಕಂಪನಿ ರಚಿಸಿದೆ. ಇದ್ದ ಕೆಲಸವನ್ನು ಬಿಟ್ಟು ಹೊಸ ಕಂಪೆನಿ ಹುಟ್ಟುಹಾಕುವಾಗ ಅವರ ಕುಟುಂಬ ತೊಂದರೆ ಎದುರಿಸಬೇಕಾಯಿತು. ಸೋದರ ಮಾವನವರಿಂದ ಮತ್ತು ಕೆಲವರಿಂದ 2 ಲಕ್ಷ ರೂ ಸಾಲ ಪಡೆದು, ‘ಬಂಧನ್’ ಎಂಬ ಸ್ವಯಂಪ್ರೇರಿತ ಸಂಘಟನೆ ಪ್ರಾರಂಭಿಸಿದೆ. ಆ ವೇಳೆ ಸಂಸ್ಥೆಯಿಂದ ಸಾಲ ಪಡೆದವರು ಮರುಪಾವತಿಸುವುದು ಕಷ್ಟ ಎನ್ನುವ ಸ್ಥಿತಿಯಿತ್ತು. ಹಾಗಾಗಿ 2002ರಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ನಿಂದ 20 ಲಕ್ಷ ಸಾಲ ಪಡೆದೆ.

ಆ ವರ್ಷ ಬಂಧನ್ ಮೂಲಕ 1,100 ಮಹಿಳೆಯರಿಗೆ 15 ಲಕ್ಷ ರೂ. ಸಾಲ ನೀಡಲಾಗಿತ್ತು. 12 ಉದ್ಯೋಗಿಗಳನ್ನು ಇರಿಸಿಕೊಂಡು ಕಿರು ಸಾಲ ಯೋಜನೆಗೆ ಚಾಲನೆ ನೀಡಿದೆ.
2013ರಲ್ಲಿ ಆರ್ಬಿಐ ಖಾಸಗಿ ವಲಯದಿಂದ ಬ್ಯಾಂಕುಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಿತು. ಹಾಗಾಗಿ ನಾನು ಕೂಡ ಬ್ಯಾಂಕಿಂಗ್ ಪರವಾನಗಿಗೆ ಅರ್ಜಿ ಸಲ್ಲಿಸಿದೆ. ಆರ್ಬಿಐ ಪರವಾನಗಿ ಘೋಷಿಸಿತು. ಅದರ ಪ್ರಕಾರ, ಕೋಲ್ಕತಾ ಮೂಲದ ಕಿರುಬಂಡವಾಳ ಕಂಪನಿಗೆ ಬ್ಯಾಂಕ್ ತೆರೆಯಲು ಅವಕಾಶ ಸಿಕ್ಕಿತು. ಅದುವೇ ಮುಂದೆ 2015ರಲ್ಲಿ ಬಂಧನ್ ಬ್ಯಾಂಕ್ ಆಗಿ ಮಾರ್ಪಟ್ಟಿತು.