ಗಾಯಕಿ ಕೆ.ಎಸ್.ಚಿತ್ರ ಹೆಸರು ಕೇಳದವರಿಲ್ಲ, ಅವರು ಹಾಡಿರುವ ಹಾಡನ್ನು ಕೇಳದವರಿಲ್ಲ. ತಮ್ಮ ಸುಶ್ರಾವ್ಯ ಕಂಠದಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸುವ ಅವರ ಹಾಡು ಎಂದೆಂದಿಗೂ ಎವರ್ಗ್ರೀನ್.
ದೇವರು ಪ್ರತಿಯೊಬ್ಬರ ಜೀವನದಲ್ಲೂ ಏನಾದರೊಂದು ಕೊರತೆ ಇಟ್ಟಿರುತ್ತಾನೆ ಎಂಬುದಕ್ಕೆ ಚಿತ್ರ ಅವರ ಜೀವನದಲ್ಲಿ ನಡೆದ ದುರ್ಘಟನೆ ಸಾಕ್ಷಿ. ಮೂಲತ: ಕೇರಳದವರಾದ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಹಾಡಿದ್ದಾರೆ. ತಮ್ಮ ಗಾಯನಕ್ಕೆ ಎಷ್ಟೋ ಪ್ರಶಸ್ತಿಗಳನ್ನು ಪಡೆದ ಅವರು ವಿಜಯಶಂಕರ್ ಎಂಬುವವರನ್ನು ವಿವಾಹವಾದರು.
ಮದುವೆಯಾದ 8 ವರ್ಷಗಳ ನಂತರ ದಂಪತಿಗೆ ಹೆಣ್ಣುಮಗು ಜನಿಸಿತು. ಆದರೆ ಮಗುವಿಗೆ ಹುಟ್ಟುತ್ತಲೇ ಡೌನ್ ಸಿಂಡ್ರೋಮ್ ಎಂಬ ಕಾಯಿಲೆ ಇತ್ತು. ಆದರೂ ಮಗಳನ್ನು ಬಹಳ ಪ್ರೀತಿಯಿಂದ, ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದರು ಚಿತ್ರ. ಪುತ್ರಿಗೆ ನಂದನ ಎಂದು ನಾಮಕರಣ ಮಾಡಿದರು.
2011 ರ ಏಪ್ರಿಲ್ನಲ್ಲಿ ಚಿತ್ರ ದುಬೈ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ, ಅವರು ಉಳಿದುಕೊಂಡಿದ್ದ ಹೋಟೆಲ್ನಲ್ಲಿ ನಂದನ ಆಕಸ್ಮಿಕವಾಗಿ ಈಜುಕೊಳದಲ್ಲಿ ಬಿದ್ದು ಸಾವನ್ನಪ್ಪಿದಳು. ಆಗ ನಂದನಗೆ 8 ವರ್ಷ ವಯಸ್ಸು. ಮದುವೆಯಾಗಿ ಎಷ್ಟೋ ವರ್ಷಗಳ ನಂತರ ಹುಟ್ಟಿದ ಒಬ್ಬಳೇ ಮಗಳು ಕೈ ತಪ್ಪಿಹೋಗಿದ್ದಕ್ಕೆ ಚಿತ್ರ ಇಂದಿಗೂ ಕಂಬನಿ ಮಿಡಿಯುತ್ತಿದ್ದಾರೆ.
ಡಿಸೆಂಬರ್ 18 ನಂದನ ಹುಟ್ಟಿದ ದಿನ. ಮೂರು ದಿನಗಳ ಹಿಂದೆ ಚಿತ್ರ ತಮ್ಮ ಫೇಸ್ಬುಕ್ನಲ್ಲಿ ಮಗಳ ಫೋಟೋವೊಂದನ್ನು ಹಾಕಿ ‘ನಿನ್ನ ಜನ್ಮದಿನದ ಸಂಭ್ರಮ ಆಚರಿಸಲು ನೀನೇ ನಮ್ಮೊಂದಿಗೆ ಇಲ್ಲ’ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
ತಮ್ಮ ಗಾಯನದಿಂದ ಸಂಗೀತಪ್ರಿಯರಿಗೆ ಖುಷಿ ನೀಡುವ ಖ್ಯಾತ ಗಾಯಕಿ ಜೀವನದಲ್ಲಿ ಈ ಮರೆಯಲಾರದ ನೋವು ತುಂಬಿರುವುದು ನಿಜಕ್ಕೂ ವಿಪರ್ಯಾಸ.